ಶಿವಮೊಗ್ಗ: 2008ರಿಂದ ಜಿಲ್ಲೆಯಲ್ಲಿ ಗೆಲುವಿನ ಲಯ ಕಂಡಿರುವ ಬಿಜೆಪಿ ವರ್ಷದಿಂದ ವರ್ಷಕ್ಕೆ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. 2008ರಲ್ಲಿ ಜಿಲ್ಲೆಯ ಏಳರಲ್ಲಿ ಐದು ಸ್ಥಾನದಲ್ಲಿ ಅಸ್ತಿತ್ವದಲ್ಲಿತ್ತು. 2013ರಲ್ಲಿ ಏಳರಲ್ಲಿ ಒಂದು ಸ್ಥಾನಕ್ಕೆ ಕುಸಿದಿದ್ದ ಬಿಜೆಪಿ, 2018ರಲ್ಲಿ ಏಳರಲ್ಲಿ ಆರರಲ್ಲಿ ಬಿಜೆಪಿ ಗೆಲುವು ಕಂಡು ತನ್ನ ಹಿಡಿತ ಬಿಗಿಗೊಳಿಸಿತು. ಲೋಕಸಭೆಯಲ್ಲೂ 2009ರಿಂದಲೂ ನಿರಂತರವಾಗಿ ಗೆಲುವು ಸಾಧಿಸುತ್ತಿರುವ ಬಿಜೆಪಿ ವರ್ಷದಿಂದ ವರ್ಷಕ್ಕೆ ತನ್ನ ಮತಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುತ್ತಿದೆ.
ಇದೇ ತಿಂಗಳು ಕೊನೆಗೆ ಎದುರಾಗಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ತನ್ನ ಪ್ರಭಾವ ತೋರಿಸಲು ಬಿಜೆಪಿ ಸಜ್ಜುಗೊಂಡಿದೆ. ಇತ್ತ ಜೆಡಿಎಸ್, ಕಾಂಗ್ರೆಸ್ ಲೋಕಸಭೆ ಚುನಾವಣೆ ರೀತಿಯಲ್ಲೇ ಸ್ಥಳೀಯ ಸಂಸ್ಥೆಯಲ್ಲೂ ಮೈತ್ರಿ ಮಾಡಿಕೊಂಡಿರುವುದರಿಂದ ಮೈತ್ರಿ ಯಾರಿಗೆ ಲಾಭವಾಗಲಿದೆ ಕಾದುನೋಡಬೇಕಿದೆ. ಈಗಾಗಲೇ ಬಿಜೆಪಿ ಮುಖಂಡರು, ‘ಇದೇ ರೀತಿ ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಸ್ಥಳೀಯ ಸಂಸ್ಥೆಗಳಲ್ಲೂ ಜಯಭೇರಿ ಬಾರಿಸೋಣ ಎಂದು’ ಕರೆ ಕೊಟ್ಟಿರುವುದರಿಂದ ಮೈತ್ರಿ ಮುಖಂಡರಲ್ಲಿ ತಳಮಳ ಶುರುವಾಗಿದೆ. ಸ್ಥಳೀಯ ಸಂಸ್ಥೆ ನಂತರ ಗ್ರಾಪಂ, ಜಿಪಂ ಚುನಾವಣೆಗಳೂ ಇರುವುದರಿಂದ ಮೈತ್ರಿಕೂಟದ ನಡೆ ಕುತೂಹಲ ಮೂಡಿಸಿದೆ. ಜಿಪಂ ಅಧ್ಯಕ್ಷ ಸ್ಥಾನ ಬದಲಾವಣೆಗೆ ಬಗ್ಗೆ ಮೈತ್ರಿಕೂಟದಲ್ಲಿ ಚರ್ಚೆ ನಡೆಯುತ್ತಿದ್ದು, ಫಲಿತಾಂಶ ಯಾವ ಪರಿಣಾಮ ಬೀರಲಿದೆ ಗೊತ್ತಿಲ್ಲ.
ಯಡಿಯೂರಪ್ಪ ಶಕ್ತಿ ಹೆಚ್ಚಳ: ಲೋಕಸಭಾ ಚುನಾವಣೆ ನಂತರ ಯಡಿಯೂರಪ್ಪ ಮೂಲೆಗುಂಪಾಗುತ್ತಾರೆ ಎಂಬ ವಿರೋಧಿಗಳ ಟೀಕೆಗೆ ಸ್ವ-ಕ್ಷೇತ್ರದಲ್ಲೇ ಉತ್ತರ ಕೊಟ್ಟಿದ್ದಾರೆ. ರಾಜ್ಯದ 24 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಿಕೊಳ್ಳುವ ಮೂಲಕ ಮಗನನ್ನೂ ಗೆಲ್ಲಿಸಿಕೊಂಡು ಪಾರಮ್ಯ ಮೆರೆದಿದ್ದಾರೆ. ಮೈತ್ರಿ ಸರಕಾರದ ಸಚಿವರ ತಂಡವೇ ಕ್ಷೇತ್ರದಲ್ಲಿ ಬೀಡುಬಿಟ್ಟರೂ ಗೆಲುವು ದಕ್ಕಲಿಲ್ಲ. ಇದು ಯಡಿಯೂರಪ್ಪ ಕೋಟೆ. ಕನಕಪುರ ಬಂಡೆ ಬಂದರೂ ಏನೂ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ.
ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಬಿ.ಎಸ್. ಯಡಿಯೂರಪ್ಪರಿಗೆ ಈ ಬಾರಿಯ ಪ್ರಚಂಡ ಗೆಲುವು ಕನಸು ನನಸಾಗಿಸಿಕೊಳ್ಳಲು ಪೂರಕವಾಗಿದೆ. ಜಿಲ್ಲೆಯಲ್ಲಿ ಏಳು ಸ್ಥಾನ ಗೆದ್ದರೂ ಅಧಿಕಾರ ಸಿಗಲಿಲ್ಲ ಎಂಬ ಕೊರಗು ಇನ್ನಾದರೂ ದೂರವಾಗುವ ನಿರೀಕ್ಷೆಯಲ್ಲಿ ಜಿಲ್ಲೆಯ ಶಾಸಕರಿದ್ದಾರೆ. ಸಚಿವ ಸ್ಥಾನದ ಮೇಲೆ ಹಲವು ಶಾಸಕರು ಕಣ್ಣಿಟ್ಟಿದ್ದಾರೆ.
ಇನ್ನು ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ವರ್ ಸಚಿವ ಸ್ಥಾನದ ಭಗ್ನಗೊಳ್ಳುವ ಆತಂಕ ಎದುರಾಗಿದೆ. ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಸಂಗಮೇಶ್ ಸಚಿವ ಸ್ಥಾನಕ್ಕೆ ಮೊದಲಿನಿಂದಲೂ ಪೈಪೋಟಿ ನಡೆಸಿದ್ದರು. ಸ್ವಕ್ಷೇತ್ರದಲ್ಲೇ ಲೀಡ್ ಕೊಡಿಸಲು ವಿಫಲವಾಗಿರುವುದರಿಂದ ಅವರ ಆಸೆಯನ್ನು ಇಲ್ಲಿಗೆ ಕೈಬಿಡುವ ಸಾಧ್ಯತೆ ಇದೆ. ಜಿಲ್ಲೆಯ ಮಾಜಿ ಶಾಸಕರು ಮೈತ್ರಿ ಸರಕಾರದ ಶಕ್ತಿ ತೋರಿಸಲು ವಿಫಲವಾಗಿರುವುದರಿಂದ ಮುಂದಿನ ನಾಲ್ಕು ವರ್ಷದಲ್ಲಿ ಏನೇನು ಏಳುಬೀಳು ಕಾಣಲಿದೆ ಎಂಬುದು ಕುತೂಹಲ ಮೂಡಿಸಿದೆ.