Advertisement

ಮಧು ಬಂಗಾರಪ್ಪ ರಾಜಕೀಯ ಭವಿಷ್ಯಕ್ಕೆ ಮಂಕು

03:37 PM May 24, 2019 | Team Udayavani |

ಶಿವಮೊಗ್ಗ: ಜಿಲ್ಲೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್‌ಗೆ ಹಾಗೂ ಮೂರು ಕ್ಷೇತ್ರದಲ್ಲಿ ಸೋತು ಸುಣ್ಣವಾಗಿರುವ ಜೆಡಿಎಸ್‌ಗೆ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಸೋಲು ತೀವ್ರ ನಿರಾಸೆ ಮೂಡಿಸಿದೆ.

Advertisement

ಜಿಲ್ಲೆಯ ಏಳು ಕ್ಷೇತ್ರದಲ್ಲಿ ಆರರಲ್ಲಿ ಬಿಜೆಪಿ ಶಾಸಕರೇ ಇದ್ದು ಮೈತ್ರಿ ಮುಖಂಡರಿಗೆ ತಮ್ಮ ಅಸ್ತಿತ್ವ ಸಾಬೀತುಪಡಿಸಲು ಗೆಲುವು ಅನಿವಾರ್ಯವಾಗಿತ್ತು. ರಾಜ್ಯದ ಉಳಿದ ಕ್ಷೇತ್ರಗಳ ಮೈತ್ರಿ ಮುಖಂಡರಲ್ಲಿ ಒಡಕು ಮೂಡಿದ್ದರೂ ಶಿವಮೊಗ್ಗದಲ್ಲಿ ಯಾವುದೇ ಅಪಸ್ವರ ಕಂಡುಬಂದಿರಲಿಲ್ಲ. ಬಿಜೆಪಿಯನ್ನು ಮಣಿಸಲೇಬೇಕೆಂಬ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಂಡಿದ್ದರು. ತೀವ್ರ ಹೋರಾಟದ ನಡುವೆಯೂ ಹೀನಾಯ ಸೋಲು ಲಭಿಸಿದೆ. ಮೂರು ಬಾರಿ ವಿಧಾನಸಭೆ, ಒಮ್ಮೆ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಮಧು ಬಂಗಾರಪ್ಪ ಅವರಿಗೆ ಈ ಚುನಾವಣೆ ಮಾಡು ಇಲ್ಲವೇ ಮಡಿ ಎಂಬಂತಾಗಿತ್ತು. ಈ ಬಾರಿಯೂ ಅವರು ಸೋಲು ಕಂಡಿರುವುದರಿಂದ ರಾಜಕೀಯ ಜೀವನವೇ ಇಲ್ಲಿಗೆ ಅಂತ್ಯವಾಗಲಿದೆಯಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಸೋತ ಮೇಲೆ ಕ್ಷೇತ್ರದತ್ತ ಮುಖ ಹಾಕುವುದಿಲ್ಲ ಎಂಬ ಆರೋಪಗಳು ಅವರ ಮೇಲೆ ದಟ್ಟವಾಗಿರುವುದರಿಂದ ಅವರ ಮುಂದಿನ ನಡೆ ಏನು ಎಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅವರ ಸ್ವ-ಕ್ಷೇತ್ರ ಸೊರಬದಲ್ಲಿ ಸಹೋದರ ಕುಮಾರ್‌ ಬಂಗಾರಪ್ಪ ಈಗಾಗಲೇ ಬಿಜೆಪಿ ಶಾಸಕರಾಗಿರುವುದರಿಂದ ಅಲ್ಲೂ ಸಹ ಅಸ್ತಿತ್ವ ಹುಡುಕಿಕೊಳ್ಳುವುದು ಕಷ್ಟಕರವಾಗಿದೆ. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರೂ ಅದರಲ್ಲೂ ಸಕ್ರಿಯರಾಗಿಲ್ಲ. ಪಕ್ಷದ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿಲ್ಲ ಎಂಬ ಆರೋಪಗಳಿವೆ. ವಿಧಾನಸಭೆ ಚುನಾವಣೆಗೂ ನಾಲ್ಕು ವರ್ಷ ಬಾಕಿ ಇರುವುದರಿಂದ ಕ್ಷೇತ್ರದಲ್ಲಿ ನಿರಂತರವಾಗಿ ಓಡಾಡಿ ಸಂಘಟನೆ ಮಾಡುತ್ತಾರೋ ಮೈತ್ರಿ ಸರಕಾರದಲ್ಲಿ ಯಾವುದಾದರೂ ಹುದ್ದೆಗೆ ಹೋಗುತ್ತಾರೋ ಎಂಬುದು ಕುತೂಹಲ ಮೂಡಿಸಿದೆ.

ತೀರ್ಥಹಳ್ಳಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್‌ಗೆ ಜಿಲ್ಲಾ ಚುನಾವಣಾ ಉಸ್ತುವಾರಿ ನೀಡಲಾಗಿತ್ತು. ಆದರೂ ತೀರ್ಥಹಳ್ಳಿ ಬಿಟ್ಟು ಹೆಚ್ಚು ಓಡಾಡಲಿಲ್ಲ. ಬಿಜೆಪಿ ವಿರುದ್ಧ ಸೋಲು ಕಂಡಿದ್ದ ಅವರಿಗೆ ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ಒದಗಿ ಬಂದಿತ್ತು. ಜಿಲ್ಲಾದ್ಯಂತ ಓಡಾಡದಿದ್ದರೂ ತಮ್ಮ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲಿ ಉತ್ತಮ ಲೀಡ್‌ ಕೊಡಿಸಿದ್ದರೂ ಅವರ ಮುಂದಿನ ರಾಜಕೀಯ ಹಾದಿ ಸುಗಮಗೊಳ್ಳುತಿತ್ತು. ಆರ್‌.ಎಂ. ಮಂಜುನಾಥ ಗೌಡ, ಕಿಮ್ಮನೆ ರತ್ನಾಕರ್‌ ಹೋರಾಟದ ಫಲವಾಗಿಯೂ ಬಿಜೆಪಿ ತನ್ನ ಶಕ್ತಿ ಹೆಚ್ಚಿಸಿಕೊಂಡಿದೆ. ಮೈತ್ರಿ ಮುಖಂಡರ ರಾಜಕೀಯ ಭವಿಷ್ಯ ಡೋಲಾಯಮಾನವಾಗಿದೆ.

ಭದ್ರಾವತಿಯ ಶಾಸಕ ಬಿ.ಕೆ. ಸಂಗಮೇಶ್ವರ ಸ್ವಕ್ಷೇತ್ರದಲ್ಲಿ ಉತ್ತಮ ಲೀಡ್‌ ಕೊಡಿಸುವ ಮೂಲಕ ಸಚಿವ ಸ್ಥಾನದ ಆಕಾಂಕ್ಷೆ ಹೊಂದಿದ್ದರು. ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಹಾಗೂ ಬಿಕೆಎಸ್‌ ಹೋರಾಟದ ಫಲವಾಗಿಯೂ ಬಿಜೆಪಿ ಲೀಡ್‌ ಪಡೆದಿದೆ. ಈ ಮೂಲಕ ಸಂಗಮೇಶ್‌ ಸಚಿವ ಸ್ಥಾನದ, ಅಪ್ಪಾಜಿ ಗೌಡರ ಮೇಲ್ಮನೆ ಸ್ಥಾನದ ಆಸೆಯೂ ಕಮರಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next