Advertisement

ಮೋದಿ ಸುನಾಮಿಗೆ ಮೈತ್ರಿಕೂಟ ಧೂಳೀಪಟ!

01:14 PM May 24, 2019 | Naveen |

ಶಿವಮೊಗ್ಗ: ಗೆದ್ದೇ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಬಿಜೆಪಿ ಹೀನಾಯ ಸೋಲುಣಿಸಿದೆ. ಮೋದಿ ಹವಾ ಮುಂದೆ ಮೈತ್ರಿಕೂಟ ಜಿಲ್ಲೆಯಲ್ಲಿ ಧೂಳೀಪಟವಾಗಿದೆ. ಉಪ ಚುನಾವಣೆಯಲ್ಲಿ 52 ಸಾವಿರ ಮತಗಳಿಂದ ಸೋಲುಂಡಿದ್ದ ಜೆಡಿಎಸ್‌ ಅಭ್ಯರ್ಥಿ ಈ ಬಾರಿ 1.82 ಲಕ್ಷ ಮತಗಳಿಂದ ಮತ್ತೂಮ್ಮೆ ಸೋಲಿನ ರುಚಿ ಕಂಡಿದ್ದಾರೆ.

Advertisement

ಇಂಪೋರ್ಟೆಡ್‌ ಅಭ್ಯರ್ಥಿ: ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಚುನಾವಣೆಯಲ್ಲಿ ಸೋತ ನಂತರ ಕ್ಷೇತ್ರ ಬಿಡುವ ವಿಷಯವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದ್ದ ಬಿಜೆಪಿ ವ್ಯವಸ್ಥಿತವಾಗಿ ಪ್ರಚಾರ ಮಾಡಿತು. ಸೊರಬ ಕ್ಷೇತ್ರದ ಜನರಲ್ಲೂ ಈ ಬಗ್ಗೆ ಅಸಮಾಧಾನ ಇದ್ದ ಕಾರಣ ಅಲ್ಲಿಯೂ ಲೀಡ್‌ ಪಡೆಯಲು ಸಾಧ್ಯವಾಗಲಿಲ್ಲ. ಉಪ ಚುನಾವಣೆ ನಂತರ ಕ್ಷೇತ್ರ ಬಿಟ್ಟ ಮಧು ಬಂಗಾರಪ್ಪ, ನಂತರ ಕಾಣಿಸಿಕೊಂಡಿದ್ದೇ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ನಂತರ. ನಾನು ಕ್ಷೇತ್ರಕ್ಕೆ ಬರದಿದ್ದರೂ ಜಿಲ್ಲೆಗೆ ನೀರಾವರಿ ಯೋಜನೆಗಳನ್ನು
ತಂದೆ ಎಂಬ ಮಾತುಗಳಿಗೂ ಮತದಾರರು ಸೊಪ್ಪು ಹಾಕಲಿಲ್ಲ.

ವರ್ಚಸ್ಸಿಲ್ಲದ ನಾಯಕರು: ಮೋದಿ ಹಾಗೂ ಸ್ಥಳೀಯ ನಾಯಕರಾದ ಯಡಿಯೂರಪ್ಪನವರ ಪ್ರಭಾವದ ಮುಂದೆ ಪೈಪೋಟಿ ನೀಡುವ ನಾಯಕರ ಕೊರತೆ ಜೆಡಿಎಸ್‌, ಕಾಂಗ್ರೆಸ್‌ನಲ್ಲಿ ಎದ್ದು ಕಾಣುತ್ತಿದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಾಗರ, ಹೊಸನಗರ ಭಾಗಕ್ಕೆ ಸೀಮಿತರಾಗಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ತೀರ್ಥಹಳ್ಳಿ ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ. ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್‌ ಭದ್ರಾವತಿಗೆ ಮಾತ್ರ ಸೀಮಿತರಾಗಿದ್ದಾರೆ. ಇನ್ನು ಜೆಡಿಎಸ್‌ ಮುಖಂಡರಾದ ಎಂ.ಜೆ. ಅಪ್ಪಾಜಿ, ಶಾರದಾ ಪೂರ್ಯಾನಾಯ್ಕ ಇತರರು ತಮ್ಮ ಕ್ಷೇತ್ರಗಳಿಗೆ ಮಾತ್ರ ಸೀಮಿತರಾಗಿದ್ದಾರೆ. ಜಿಲ್ಲೆಯನ್ನು ಪ್ರತಿನಿಧಿ ಸುವ, ಮಾಜಿ ಸಿಎಂ ಯಡಿಯೂರಪ್ಪನವರಿಗೆ ಪ್ರತಿಸ್ಪರ್ಧೆ ನೀಡುವ ಯಾರೊಬ್ಬ ನಾಯಕರಿಲ್ಲದರಿವುದು ಸಹ ದೊಡ್ಡ ಹಿನ್ನಡೆಗೆ ಕಾರಣವಾಗಿದೆ.

ಚುನಾವಣೆಯಲ್ಲಿ ಮಾತ್ರ ಸಿದ್ಧತೆ: ಬಿಜೆಪಿ ಚುನಾವಣೆ ಇರಲಿ, ಬಿಡಲಿ ಎಂದಿನಂತೆ ಸಂಘಟನೆಯಲ್ಲಿ ತೊಡಗಿಕೊಂಡಿರುತ್ತದೆ. ಆದರೆ ಜೆಡಿಎಸ್‌,
ಕಾಂಗ್ರೆಸ್‌ ಚುನಾವಣೆ ಬಂದಾಗ ಮಾತ್ರ ಕಾರ್ಯಕರ್ತರ ತಲುಪುತ್ತದೆ. ಕಾರ್ಯತಂತ್ರ ರೂಪಿಸಿ, ಪ್ರಚಾರ ಮಾಡುವಷ್ಟರಲ್ಲಿ ಪ್ರಚಾರವೇ ಮುಗಿದಿರುತ್ತದೆ. ಸಾಂಪ್ರದಾಯಿಕ ಚುನಾವಣಾ ಪದ್ಧತಿಯಿಂದ ಹೊರ ಬರದ ಕಾರಣ ಮತದಾರರು ಈ ಬಾರಿಯೂ ತಿರಸ್ಕರಿಸಿದ್ದಾರೆ.

ಪ್ರಚಾರದಲ್ಲಿ ಹಿಂದೆ: ಶಿವಮೊಗ್ಗದಲ್ಲಿ ಮೂರನೇ ಹಂತದ ಚುನಾವಣೆ ಇದ್ದಿದ್ದರಿಂದ ಪ್ರಚಾರಕ್ಕೆ 45 ದಿನಗಳ ಅವಕಾಶವಿತ್ತು. ನಾಮಪತ್ರ ಸಲ್ಲಿಕೆ ಮುನ್ನ ಪ್ರಚಾರಕ್ಕೆ ಹೆಚ್ಚಿನ ಅವಕಾಶ ಸಿಕ್ಕಿದ್ದರೂ ಅದನ್ನು ಸದುಪಯೋಗಪಡಿಸಿಕೊಳ್ಳಲು ಮೈತ್ರಿಕೂಟ ವಿಫಲವಾಯಿತು. ಇನ್ನು ಮನೆ ಮನೆ ಪ್ರಚಾರಕ್ಕೆ ತೆರಳಿದ್ದ ಕಾರ್ಯಕರ್ತರು ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಲಿಲ್ಲ. ಬಿಜೆಪಿ ಪೇಜ್‌ ಪ್ರಮುಖರು ಪ್ರತಿ ಮತದಾರರನ್ನು ಮೂರು ಮೂರು ಬಾರಿ ಭೇಟಿ ಮಾಡಿ ಮತ ಹಾಕುವಂತೆ ಓಲೈಕೆ ಮಾಡಿದ್ದರು. ಇತ್ತ ಜೆಡಿಎಸ್‌, ಕಾಂಗ್ರೆಸ್‌ ಕಾರ್ಯಕರ್ತರು ಮನೆ ಮುಂದೆ ಕರಪತ್ರ ಬಿಸಾಕಿ ಹೋಗಿದ್ದು ಬಿಟ್ಟರೆ ಮತದಾರರನ್ನು ಭೇಟಿ ಮಾಡುವ ಪ್ರಯತ್ನಗಳನ್ನು ಮಾಡಲಿಲ್ಲ. ಇದು ಸಹ ಹಿನ್ನಡೆಗೆ ಕಾರಣವಾಗಿದೆ.

Advertisement

ಏಕಾಂಗಿ ಪ್ರಚಾರ: ಕಾರ್ಯಕರ್ತರ ದೊಡ್ಡ ಪಡೆಯನ್ನೇ ಹೊಂದಿರುವ ಬಿಜೆಪಿ ಮುಂದೆ ಜೆಡಿಎಸ್‌ ಅಭ್ಯರ್ಥಿ ಪ್ರಚಾರ ಡಲ್‌ ಆಗಿತ್ತು. ದೊಡ್ಡ ಮಟ್ಟದ ಸಭೆಗಿಂತ ಸಣ್ಣ ಸಣ್ಣ ಸಭೆಗಳಿಗೆ ಬಿಜೆಪಿ ಹೆಚ್ಚಿನ ಆದ್ಯತೆ ನೀಡಿತ್ತು. ಒಳ ಹೊಡೆತದ ಬಗ್ಗೆ ಅರಿಯದ ಮೈತ್ರಿಕೂಟ ತನ್ನ ಹಳೆಯ ಸವಕಲು ಪ್ರಚಾರವನ್ನೇ ಮುಂದುವರಿಸಿತ್ತು. ಮಧು ಬಂಗಾರಪ್ಪ ಪ್ರತಿ ಕ್ಷೇತ್ರಕ್ಕೂ ಐದು ದಿನ ಸಮಯ ಕೊಟ್ಟಿದ್ದರು. ಆದರೆ ಭದ್ರಾವತಿ, ಶಿವಮೊಗ್ಗ ನಗರಕ್ಕೆ ಹೆಚ್ಚಿನ ಆದ್ಯತೆ ನೀಡಲಿಲ್ಲ. ಹಳ್ಳಿ ಹಳ್ಳಿ ಪ್ರಚಾರದಲ್ಲಿ ಸ್ಥಳೀಯ ಮುಖಂಡರು ಬಿಟ್ಟರೆ
ರಾಜ್ಯಮಟ್ಟದ ನಾಯಕರು ಹೆಚ್ಚಿನ ಸಾಥ್‌ ನೀಡಲಿಲ್ಲ.

ಮುಳುವಾಯ್ತು ಜಾತಿ ಲೆಕ್ಕಾಚಾರ: ಕಾಂಗ್ರೆಸ್‌ ಸಾಂಪ್ರದಾಯಿಕ ಮತಗಳು ಈ ಬಾರಿ ಕೈ ಹಿಡಿಯಲಿವೆ. ಮುಸ್ಲಿಮರು, ಈಡಿಗರು, ಒಕ್ಕಲಿಗರು, ಹಿಂದುಳಿವ ವರ್ಗಗಳು ಮತ ಹಾಕಿದರೆ ಸಾಕು ಎಂಬಂತೆ ಮೈತ್ರಿ ನಾಯಕರು ವರ್ತಿಸುತ್ತಿದ್ದರು. ಇದೇ ಈ ಬಾರಿ ಅವರಿಗೆ ಮುಳುವಾಗಿದೆ. ಮೋದಿ, ಅಭಿವೃದ್ಧಿ, ಹಿಂದುತ್ವ ಅಲೆ ಮುಂದೆ ಜಾತಿ ಲೆಕ್ಕಾಚಾರ ಠುಸ್‌ ಆಗಿದೆ.

ಯುವ ಮತದಾರರು ಸೆಳೆಯಲು ವಿಫಲ: ಬಿಜೆಪಿಯ ದೊಡ್ಡ ಶಕ್ತಿಯಾಗಿರುವ ಯುವಕರನ್ನು ಸೆಳೆಯಲು ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಕಿಂಚಿತ್ತೂ ಪ್ರಯತ್ನ ಮಾಡಲಿಲ್ಲ. ಬಿಜೆಪಿಯವರು ಬೆಂಗಳೂರಿನಲ್ಲಿರುವ ಯುವ ಮತದಾರರನ್ನು ಕರೆತರುವ ಕೆಲಸ ಮಾಡುವ ಜತೆಗೆ, ಮತ ಹಾಕಿಸುವ ಕೆಲಸವನ್ನೂ ಮಾಡಿದರು. ಯುವಕರೆಲ್ಲ ಮೋದಿ ಮೋದಿ ಎನ್ನುತ್ತಾರೆ ಎಂಬ ಕಾರಣಕ್ಕೆ ಮೈತ್ರಿ ಮುಖಂಡರು ಯುವಕರ ಸಹವಾಸಕ್ಕೂ ಹೋಗಲಿಲ್ಲ. ಹೊಸದಾಗಿ ಮತದಾರರ ಪಟ್ಟಿ ಸೇರಿದ ಲಕ್ಷಕ್ಕೂ ಹೆಚ್ಚು ಮತದಾರರು ಪೂರ್ಣ ಮೋದಿ ಕೈ ಹಿಡಿದಿದ್ದಾರೆ.

ಕೈಕೊಟ್ಟ ಈಡಿಗರು: ಮಧು ಬಂಗಾರಪ್ಪಗೆ ಸ್ವಜಾತಿಯ ಈಡಿಗರು ಕೈಹಿಡಿಯಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ಜಿಲ್ಲೆಯಲ್ಲಿ ಮೂರೂವರೆ ಲಕ್ಷಕ್ಕೂ ಹೆಚ್ಚಿರುವ ಈಡಿಗರು ಮೈತ್ರಿ ಅಭ್ಯರ್ಥಿಯ ಕೈಹಿಡಿದಿಲ್ಲ. ಈಡಿಗರೇ ಹೆಚ್ಚಿರುವ ಸೊರಬ, ಸಾಗರ, ಬೈಂದೂರಿನಲ್ಲಿ ಬಿಜೆಪಿಗೆ ನಿರೀಕ್ಷೆಗೂ ಮೀರಿ ಮತ ಬಂದಿವೆ. ಸೊರಬದಲ್ಲಿ ಶೇ.82ರಷ್ಟು ಮತದಾನವಾಗಿತ್ತು. ಆದರೂ ಅಲ್ಲಿನ ಜನ ಮಧು ಕೈ ಹಿಡಿಯಲಿಲ್ಲ.

ನೀರಾವರಿ ಯೋಜನೆಗಳಿಗೂ ಕಿಮ್ಮತ್ತಿಲ್ಲ: ಜಿಲ್ಲೆಗೆ ಕಳೆದ ಬಾರಿಯ ರಾಜ್ಯ ಬಜೆಟ್‌ನಲ್ಲಿ ಸಾವಿರ ಕೋಟಿಗೂ ಅ ಧಿಕ ಮೊತ್ತದ ಏತ ನೀರಾವರಿ ಯೋಜನೆಗಳನ್ನು ಕೊಟ್ಟಿದ್ದರೂ ಮತದಾರರು ಅದಕ್ಕೆ ಕಿಮ್ಮತ್ತು ನೀಡಿಲ್ಲ. ಈ ಯೋಜನೆಗಳಿಂದಾಗಿಯೇ ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರ, ಸೊರಬದಲ್ಲಿ ಹೆಚ್ಚಿನ ಮತ ಗಳಿಕೆ ಬಗ್ಗೆ ಮೈತ್ರಿಕೂಟ ಲೆಕ್ಕ ಹಾಕಿತ್ತು. ನಿರೀಕ್ಷೆಗಳೆಲ್ಲವೂ ಉಲ್ಟಾ ಆಗಿವೆ.

ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next