ಶಿವಮೊಗ್ಗ: ಮೋದಿ ಅಲೆ, ಸಂಘಟನೆ ಶಕ್ತಿಯಿಂದ ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಜಯ ಗಳಿಸಿದ್ದಾರೆ. ಒಂದೂವರೆ ಲಕ್ಷದ ಮತಗಳ ಅಂತರದಿಂದ ಗೆಲ್ಲುತ್ತೇವೆ ಎನ್ನುತ್ತಿದ್ದ ಬಿಜೆಪಿಗೆ ನಿರೀಕ್ಷೆಗೂ ಮೀರಿ ಮತಗಳು ಬಂದಿವೆ.
ಉಪ ಚುನಾವಣೆಯಲ್ಲಿ ಮೋದಿ ಅಲೆ, ಹಿಂದುತ್ವದ ಯಾವುದೇ ವಿಷಯಗಳು ಇಲ್ಲದ ವೇಳೆಯೂ 52 ಸಾವಿರ ಮತಗಳ ಅಂತರದ ಗೆಲುವು ಸಿಕ್ಕಿತ್ತು. ಇದನ್ನೇ ಕಡಿಮೆ ಮತ ಬಂದ ಬೂತ್‌ಗಳ ಮೇಲೆ ಹೆಚ್ಚು ನಿಗಾ ವಹಿಸಿದ ಪರಿಣಾಮ ಬಿಜೆಪಿ ಮತ್ತೂಂದು ದಾಖಲೆಯ ಗೆಲುವು ಸಾಧಿಸಿದೆ. ಉಪ ಚುನಾವಣೆಯಲ್ಲಿ ಸೋಲಿನ ಅಂತರವನ್ನು ತಗ್ಗಿಸಿಕೊಂಡು ಗೆಲುವಿನ ಕನಸು ಕಾಣುತ್ತಿದ್ದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಆಘಾತಕಾರಿ ಸೋಲು ಅನುಭವಿಸಿದ್ದಾರೆ.
ಸಹ್ಯಾದ್ರಿ ಕಲಾ ಕಾಲೇಜು ಕಟ್ಟಡದಲ್ಲಿ ಗುರುವಾರ ನಡೆದ ಮತ ಎಣಿಕೆಯಲ್ಲಿ ಆರಂಭದಿಂದಲೂ ಮುನ್ನಡೆ ಗಳಿಸಿದ ರಾಘವೇಂದ್ರ ಅವರು ಅಂತಿಮವಾಗಿ 2,23,360 ಮತಗಳಿಂದ ಜಯಭೇರಿ ಭಾರಿಸಿದರು. ಉಪ ಚುನಾವಣೆಯಲ್ಲಿ 52 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ರಾಘವೇಂದ್ರ ಅವರು 7,29,872 ಲಕ್ಷ ಮತ ಗಳಿಸಿದರೆ, ಮಧು ಬಂಗಾರಪ್ಪ ಅವರು 5,06,512 ಲಕ್ಷ ಮತಗಳನ್ನು ಪಡೆದರು. 50ರಿಂದ 1 ಲಕ್ಷ ಮತಗಳ ಅಂತರದಿಂದ ಜಯ ಗಳಿಸುತ್ತೇವೆ ಎಂದು ಹೇಳುತ್ತಿದ್ದರಾದರೂ ಆಂತರಿಕವಾಗಿ ಅಂತರ ಬಹಳ ಕಡಿಮೆಯಾಗಲಿದೆ ಎಂದು ಮಾತನಾಡಿಕೊಂಡಿದ್ದರು. ಆರಂಭದಲ್ಲಿ ಒಂದೂವರೆ ಲಕ್ಷ ಅಂತರ ಎಂದು ಹೇಳುತ್ತಿದ್ದ ಬಿಜೆಪಿ ಮುಖಂಡರ ಮತಗಟ್ಟೆ ಸಮೀಕ್ಷೆ ಆಧಾರದ ಮೇಲೆ 70 ಸಾವಿರ ಅಂತರಕ್ಕೆ ಬಂದಿದ್ದರು. ಆದರೆ ಮತದಾರ 2 ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆಲ್ಲಿಸಿ ಹೊಸ ಸಂದೇಶ ನೀಡಿದ್ದಾನೆ.
ಎರಡನೇ ದೊಡ್ಡ ಗೆಲುವು: ಈವರೆಗೆ ಶಿವಮೊಗ್ಗ ಲೋಕಸಭೆ ಚುನಾವಣೆ ದಾಖಲೆ ಅಂತರದಿಂದ ಗೆಲುವು ಸಾಧಿಸಿರುವುದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ. ಈ ಹಿಂದೆ 2014ರ ಚುನಾವಣೆಯಲ್ಲಿ ಯಡಿಯೂರಪ್ಪ ಅವರು 3.62 ಲಕ್ಷ ಮತಗಳ ಅಂತರದಿಂದ ವಿಜಯ ಗಳಿಸಿದ್ದು ಸಾರ್ವಕಾಲಿಕ ದಾಖಲೆಯಾಗಿತ್ತು. ಈಗ ಎರಡನೇ ದೊಡ್ಡ ಗೆಲುವು ರಾಘವೇಂದ್ರ ಅವರ ಪಾಲಾಗಿದೆ. ರಾಘವೇಂದ್ರ ಅವರು ಗಳಿಸಿದ 7 ಲಕ್ಷ ಮತಗಳು ಸಹ ಹೊಸ ದಾಖಲೆ ನಿರ್ಮಿಸಿದೆ. 2014ರ ಚುನಾವಣೆಯಲ್ಲಿ ಅವರ ತಂದೆ ಯಡಿಯೂರಪ್ಪ ಅವರು 6.06 ಲಕ್ಷ ಮತ ಗಳಿಸಿದ್ದು ದಾಖಲೆಯಾಗಿತ್ತು. ಅವರಿಗಿಂತ 1.23 ಲಕ್ಷ ಮತಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ಮತಗಳನ್ನು ಗಳಿಸಿದ ಸಂಸದ ಎಂಬ ಕೀರ್ತಿಗೆ ರಾಘವೇಂದ್ರ ಪಾತ್ರರಾಗಿದ್ದಾರೆ.
ಪರಾಜಿತ ಅಭ್ಯರ್ಥಿಗಳು ಗಳಿಸಿದ ಮತಗಳಲ್ಲೂ ಮಧು ಬಂಗಾರಪ್ಪ ಗಳಸಿದ ಮತಗಳು ಹೊಸ ದಾಖಲೆಯಾಗಿದೆ. ಈ ಹಿಂದೆ 2009ರ ಚುನಾವಣೆಯಲ್ಲಿ ಮಾಜಿ ಸಿಎಂ ಎಸ್. ಬಂಗಾರಪ್ಪ ಅವರು ರಾಘವೇಂದ್ರ ಅವರ ಎದುರು 4.29ಲಕ್ಷ ಮತಗಳನ್ನು ಗಳಿಸಿದ್ದರು. ಮಧು ಅವರು ತಮ್ಮ ತಂದೆಯವರಿಗಿಂತ 80 ಸಾವಿರ ಅಧಿಕ ಮತಗಳನ್ನು ಪಡೆದುಕೊಂಡಿದ್ದಾರೆ.