Advertisement

ಗರಿಷ್ಠ ಮತದಾನ; ಯಾರಿಗೆ ವರದಾನ?

01:13 PM May 02, 2019 | Naveen |

ಶಿವಮೊಗ್ಗ: ಮೈತ್ರಿಕೂಟದ ಪಾಲಿಗೆ ಆಶಾಕಿರಣವಾಗಿರುವ ಸೊರಬ ತಾಲೂಕಿನಲ್ಲಿ ಈ ಬಾರಿ ಅತಿ ಹೆಚ್ಚು ಮತದಾನವಾಗಿರುವುದು ಕುತೂಹಲ ಮೂಡಿಸಿದೆ. ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಸ್ವ- ಕ್ಷೇತ್ರದಲ್ಲಿ ಈ ಬಾರಿ ಅನುಕಂಪದ ಅಲೆ ಕೈ ಹಿಡಿಯಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇತ್ತ ಬಿಜೆಪಿ ಪ್ರಬಲ ಸಂಘಟನೆಯನ್ನೇ ನೆಚ್ಚಿಕೊಂಡಿದ್ದು ಉತ್ತಮ ಲೀಡ್‌ ಪಡೆಯುವ ಉತ್ಸಾಹದಲ್ಲಿದೆ. ರಾಜ್ಯದಲ್ಲೇ ಗರಿಷ್ಠ ಪ್ರಮಾಣ ಮತದಾನವಾಗಿರುವ ತಾಲೂಕಾಗಿರುವ ಸೊರಬದಲ್ಲಿ ಎರಡೂ ಪಕ್ಷಗಳು ಪಡೆಯುವ ಮತಗಳ ಲೀಡ್‌ ಬಗ್ಗೆ ಬೃಹತ್‌ ಲೆಕ್ಕಾಚಾರವೇ ನಡೆದಿದೆ.

Advertisement

ದಿ| ಎಸ್‌. ಬಂಗಾರಪ್ಪ ಅವರು ಚುನಾವಣಾ ರಾಜಕಾರಣದಲ್ಲಿ ಇರುವವರೆಗೂ ಸೊರಬ ಕ್ಷೇತ್ರ ಎಂದೂ ಅವರ ಕೈ ಬಿಟ್ಟಿರಲಿಲ್ಲ. ಈಡಿಗರು, ಲಿಂಗಾಯತರು, ಮಡಿವಾಳರು ಬಹುಸಂಖ್ಯಾತರಿರುವ ಈ ಕ್ಷೇತ್ರದಲ್ಲಿ ಪ್ರತಿ ಚುನಾವಣೆಯಲ್ಲೂ ಬಂಗಾರಪ್ಪ ಅವರು ಲೀಡ್‌ ಪಡೆಯುತ್ತಿದ್ದರು. ಬಂಗಾರಪ್ಪ ಬಿಜೆಪಿ ಸೇರಿದಾಗಲೂ ಈ ಕ್ಷೇತ್ರದ ಮತದಾರರು ಕೈ ಬಿಟ್ಟಿರಲಿಲ್ಲ. ಬಂಗಾರಪ್ಪ ಅವರು ಬಿಜೆಪಿ ಸೇರಿದ ಮೇಲೆ ಬಹುತೇಕ ಮುಖಂಡರು ಬಿಜೆಪಿಯಲ್ಲೇ ಉಳಿದರು. ನಂತರದ ದಿನಗಳಲ್ಲಿ ಬಿಜೆಪಿ ತನ್ನ ಸಂಘಟನಾ ಶಕ್ತಿಯನ್ನು ಹೆಚ್ಚಿಸಕೊಂಡು ಮತ ಗಳಿಕೆ ಪ್ರಮಾಣ ಹೆಚ್ಚಿಸಿಕೊಂಡಿದೆ. ಈಡಿಗ ಯುವಕರು ಮೋದಿ ಮೋಡಿಗೆ ಒಳಗಾಗಿದ್ದಾರೆ. ಹೀಗಾಗಿ ಮೈತ್ರಿಕೂಟದ ಪಾಲಿಕೆ ಆಶಾಕಿರಣವಾದ ಕ್ಷೇತ್ರವಾದರೂ ಮತ ಗಳಿಕೆ ಪ್ರಮಾಣದಲ್ಲಿ ದೊಡ್ಡ ಅಂತರ ಸಾಧಿಸಲು ಉಪ ಚುನಾವಣೆಯಲ್ಲಿ ಸಾಧ್ಯವಾಗಿರಲಿಲ್ಲ. ಪ್ರಸ್ತುತ ಕ್ಷೇತ್ರದಲ್ಲಿ ಮಧು ದೆಹಲಿಗೆ, ಕುಮಾರ್‌ ವಿಧಾನಸೌಧಕ್ಕೆ ಎಂಬ ಘೋಷಣೆ ಕ್ಷೇತ್ರದಾದ್ಯಂತ ವ್ಯಾಪಕವಾಗಿದೆ.

ನಾಲ್ಕು ಚುನಾವಣೆಗಳಲ್ಲಿ ಮೂರು ಬಾರಿ ಸೋತಿರುವ ಮಧು ಬಂಗಾರಪ್ಪ ಪರ ಅನುಕಂಪದ ಹೆಚ್ಚಾಗಿದ್ದು ಈಡಿಗ ಮತಗಳು ದೊಡ್ಡ ಪ್ರಮಾಣದಲ್ಲಿ ಜೆಡಿಎಸ್‌ ಪಾಲಾಗಬಹುದು ಎಂಬ ನಿರೀಕ್ಷೆ ಇದೆ. ಇನ್ನು ಲಿಂಗಾಯತ ಮತಗಳು ಯಾವ ಕಡೆ ಹೋಗಲಿವೆ ಎಂಬುದು ಕುತೂಹಲ ಮೂಡಿಸಿದೆ. ಉಪ ಚುನಾವಣೆಯಲ್ಲಿ ಕೇವಲ 1 ಸಾವಿರ ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದ ಮಧು ಬಂಗಾರಪ್ಪ ಈ ಬಾರಿ ಕನಿಷ್ಠ 20 ಸಾವಿರ ಲೀಡ್‌ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಆದರೆ ಅದಕ್ಕೆ ತನ್ನ ಅಣ್ಣನೇ ಅಡ್ಡಗಾಲಾಗಿದ್ದಾರೆ. ಶಾಸಕ ಕುಮಾರ್‌ ಬಂಗಾರಪ್ಪ ತಾಲೂಕಿನಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿ ಬಿಜೆಪಿಗೆ ಲೀಡ್‌ ಕೊಡಿಸುವ ಪಣ ತೊಟ್ಟಿದ್ದಾರೆ.

ಹೋಬಳಿವಾರು ಲೆಕ್ಕಾಚಾರ
ತಾಳಗುಪ್ಪ ಹೋಬಳಿಯಲ್ಲಿ ಮಡಿವಾಳರು, ಈಡಿಗ, ಬ್ರಾಹ್ಮಣ ಮತ್ತು ಲಿಂಗಾಯತರು ಸಮಾನ ಸಂಖ್ಯೆಯಲ್ಲಿದ್ದು ಜೆಡಿಎಸ್‌ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಇದೆ. ಕುಪ್ಪಗಡ್ಡೆ ಹಾಗೂ ಚಂದ್ರಗುತ್ತಿ ಭಾಗದಲ್ಲಿ ಈಡಿಗರು ದೊಡ್ಡ ಪ್ರಮಾಣದಲ್ಲಿದ್ದು ಇಲ್ಲಿ ಮಧು ಬಂಗಾರಪ್ಪಗೆ ಹೆಚ್ಚಿನ ಮತ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜಡೆ ಹೋಬಳಿಯಲ್ಲಿ ಲಿಂಗಾಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಜಿಪಂ ಸದಸ್ಯ ಜೆಡಿಎಸ್‌ನವರೇ ಆಗಿರುವುದರಿಂದ ಆ ಸಮುದಾಯದ ಮತಗಳನ್ನು ಸೆಳಯಬಹುದು ಎನ್ನಲಾಗಿದ್ದು, ಎರಡೂ ಪಕ್ಷಗಳ ನಡುವೆ ನೇರ ಹಣಾಹಣಿ ಇದೆ. ಉಳವಿ ಹೋಬಳಿಯಲ್ಲೂ ಇದೇ ಪರಿಸ್ಥಿತಿ ಇದೆ. ಮಧು ಬಂಗಾರಪ್ಪ ತವರು ಕ್ಷೇತ್ರವಾದ ಆನವಟ್ಟಿ ಹೋಬಳಿಯಲ್ಲಿ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮಧು ಬಂಗಾರಪ್ಪ ಮೇಲಿನ ಅಭಿಮಾನಕ್ಕೆ ಹೆಚ್ಚಿನ ಮತ ಕೊಡಬಹುದು ಎನ್ನಲಾಗಿದೆ. 5 ಹೋಬಳಿಗಳಲ್ಲಿ 3 ಹೋಬಳಿಯಲ್ಲಿ ಸಮಬಲದ ಹೋರಾಟ ನಿರೀಕ್ಷೆ ಮಾಡಲಾಗಿದೆ.

200ರೂ. ಕಡೆ 300ರೂ.: ಹಣ ಹಂಚಿಕೆ ವಿಚಾರದಲ್ಲೂ ಈ ಬಾರಿ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ನಡೆದಿದೆ. ಒಂದು ಪಕ್ಷ ಪ್ರತಿಯೊಬ್ಬರಿಗೆ 200 ರೂ. ಕೊಟ್ಟರೆ, ಪ್ರತಿಸ್ಪರ್ಧಿಗಳು ತಲೆಗೆ 300 ರೂ. ಕೊಟ್ಟಿದ್ದಾರೆ. ಕೆಲ ಪಕ್ಷಗಳ ಕಾರ್ಯಕರ್ತರನ್ನು ಒಳಗೊಳಗೆ ಬುಕ್‌ ಮಾಡಿಕೊಂಡಿರುವ ಬಗ್ಗೆ ದೊಡ್ಡ ಮಟ್ಟದ ಆರೋಪಗಳಿವೆ.

Advertisement

ಸಮನ್ವಯ ಕೊರತೆ: ಬಿಜೆಪಿ ಶಾಸಕ ಕುಮಾರ್‌ ಬಂಗಾರಪ್ಪ ಬಿಜೆಪಿ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎನ್ನುವ ಆರೋಪ ಸಹ ಕೇಳಿಬಂದಿದೆ. ಮಧುಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಅನೇಕ ಮುಖಂಡರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ, ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವುದು ಮೂಲ ಬಿಜೆಪಿ ಕಾರ್ಯಕರ್ತರ ವಾದ. ಅಲ್ಲದೇ ಕುಮಾರ್‌ ಬಂಗಾರಪ್ಪ ಮಧು ವಿರುದ್ಧ ವೈಯಕ್ತಿಕ ಟೀಕೆಗೆ ಇಳಿದಿದ್ದು ಸಹ ಕಾರ್ಯಕರ್ತರಿಗೆ ಮುಜುಗರ ಮೂಡಿಸಿದೆ.

ಮತದಾನ ವಿವರ
ಸೊರಬ ತಾಲೂಕಿನಲ್ಲಿ ಒಟ್ಟು 239 ಮತಗಟ್ಟೆಗಳಿದ್ದು, 95277 ಪುರುಷ ಹಾಗೂ 92457 ಮಹಿಳೆಯರು ಸೇರಿ ಒಟ್ಟು 187744 ಮತದಾರರು ಇದ್ದಾರೆ. ಈ ಬಾರಿ 79098 ಪುರುಷರು, 75810 ಮಹಿಳೆಯರು ಹಕ್ಕು ಚಲಾಯಿಸಿದ್ದು, ಶೇ.82.51 ರಷ್ಟು ಮತದಾನವಾಗಿದೆ. ರಾಜ್ಯದಲ್ಲೇ ಗರಿಷ್ಠ ಮತದಾನವಾಗಿರುವ ಕ್ಷೇತ್ರದ ಹೆಗ್ಗಳಿಕೂ ಪಾತ್ರವಾಗಿದೆ.

ಸೊರಬ ತಾಲೂಕಿನ ಐದು ಹೋಬಳಿ ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಒಂದು ಹೋಬಳಿ ಸೇರಿದಂತೆ ಒಟ್ಟು 6 ಹೋಬಳಿಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳು ಚಲಾವಣೆಯಾಗಿದ್ದು, ಅದರಲ್ಲೂ ಆನವಟ್ಟಿ ಮತ್ತು ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯಲ್ಲಿ ನಿರೀಕ್ಷೆಗೂ ಮೀರಿ ಬಿ.ವೈ. ರಾಘವೇಂದ್ರ ಅವರಿಗೆ ಮತಗಳು ಬಂದಿವೆ. ಪ್ರಧಾನಿ ಮೋದಿ ಅವರ ಐದು ವರ್ಷಗಳ ಜನಪರ ಆಡಳಿತದ ಅಲೆಯಿಂದಾಗಿ ತಾಲೂಕಿನಲ್ಲಿ ಸುಮಾರು 15 ರಿಂದ 20 ಸಾವಿರ ಅಧಿಕ ಮತಗಳು ಬರುವ ನಿರೀಕ್ಷೆ ಇದೆ.
ಎ.ಎಲ್. ಅರವಿಂದ್‌, ತಾಲೂಕು ಬಿಜೆಪಿ ಅಧ್ಯಕ್ಷ

ಕಳೆದ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ಕಾಲಾವಕಾಶ ಕಡಿಮೆ ಇದ್ದ ಕಾರಣ ತಾಲೂಕಿನಲ್ಲಿ ಅಲ್ಪ ಮತಗಳ ಮುನ್ನಡೆ ಪಡೆಯುವಂತಾಯಿತು. ಆದರೆ ಈ ಬಾರಿ ಪ್ರತಿ ಬೂತ್‌ ಮಟ್ಟದಲ್ಲಿ ಕಾರ್ಯಕರ್ತರು ಹೆಚ್ಚಿನ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಅಲ್ಲದೇ ಬಡ ರೈತರಿಗೆ ಹಕ್ಕುಪತ್ರ ಹಾಗೂ ನೀರಾವರಿ ಯೋಜನೆಗಾಗಿ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿರುವ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪನವರಿಗೆ ತಾಲೂಕಿನಿಂದ ಅಧಿಕ ಮತಗಳು ಚಲಾವಣೆಯಾಗಿವೆ.
ಎಚ್. ಗಣಪತಿ,
ತಾಲೂಕು ಜೆಡಿಎಸ್‌ ಅಧ್ಯಕ್ಷ

ಸೊರಬ ತಾಲೂಕಿನ ಐದು ಹೋಬಳಿ ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಒಂದು ಹೋಬಳಿ ಸೇರಿದಂತೆ ಒಟ್ಟು 6 ಹೋಬಳಿಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳು ಚಲಾವಣೆಯಾಗಿದ್ದು, ಅದರಲ್ಲೂ ಆನವಟ್ಟಿ ಮತ್ತು ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯಲ್ಲಿ ನಿರೀಕ್ಷೆಗೂ ಮೀರಿ ಬಿ.ವೈ. ರಾಘವೇಂದ್ರ ಅವರಿಗೆ ಮತಗಳು ಬಂದಿವೆ. ಪ್ರಧಾನಿ ಮೋದಿ ಅವರ ಐದು ವರ್ಷಗಳ ಜನಪರ ಆಡಳಿತದ ಅಲೆಯಿಂದಾಗಿ ತಾಲೂಕಿನಲ್ಲಿ ಸುಮಾರು 15 ರಿಂದ 20 ಸಾವಿರ ಅಧಿಕ ಮತಗಳು ಬರುವ ನಿರೀಕ್ಷೆ ಇದೆ.
ಎ.ಎಲ್. ಅರವಿಂದ್‌,
ತಾಲೂಕು ಬಿಜೆಪಿ ಅಧ್ಯಕ್ಷ

ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next