ಶಿವಮೊಗ್ಗ: ಮೈತ್ರಿಕೂಟದ ಪಾಲಿಗೆ ಆಶಾದಾಯಕವಾಗಿದ್ದ ಭದ್ರಾವತಿ ಕ್ಷೇತ್ರ ಮಧು ಬಂಗಾರಪ್ಪಗೆ ಕೈಕೊಟ್ಟಿದೆ. ಬಿಜೆಪಿ ನಿರೀಕ್ಷೆ ಮೀರಿ ಉತ್ತಮ ಮತ ಗಳಿಕೆ ಮಾಡಿದ್ದು ಜೆಡಿಎಸ್, ಕಾಂಗ್ರೆಸ್ ನಾಯಕರಲ್ಲಿ ದಿಗ್ಭ್ರಮೆ ಮೂಡಿಸಿದೆ.
20 ಸಾವಿರ, 30 ಸಾವಿರ ಲೀಡ್ ಪಡೆಯುತ್ತೇವೆ ಎನ್ನುತ್ತಿದ್ದ ಮೈತ್ರಿ ಪಕ್ಷದ ಮುಖಂಡರಿಗೆ ಮತದಾರರು ಗರ್ವ ಭಂಗ ಮಾಡಿದ್ದಾರೆ. ಉಪ ಚುನಾವಣೆಯಲ್ಲಿ 10 ಸಾವಿರ ಮತಗಳ ಲೀಡ್ ಕೊಟ್ಟಿದ್ದ ಭದ್ರಾವತಿ ಕ್ಷೇತ್ರ ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಲೀಡ್ ಕೊಡುತ್ತದೆ ಎಂದು ಭಾವಿಸಿತ್ತಾದರೂ ಮೋದಿ ಅಲೆ ಮುಂದೆ ಮೈತ್ರಿ ಲೆಕ್ಕಾಚಾರ ಉಲಾr ಆಗಿದೆ. ಮೋದಿ ಅಲೆ ಜತೆ ಬಿಜೆಪಿ ತಂತ್ರ ಫಲಕೊಟ್ಟಿದೆ.
ಬಿಜೆಪಿ ತಂತ್ರ: ಒಕ್ಕಲಿಗರು, ಲಿಂಗಾಯತರು, ಮುಸ್ಲಿಮರು ಸಮಾನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಖಾತೆಯನ್ನೇ ತೆರೆದಿಲ್ಲ. ಪ್ರತಿ ಬಾರಿಯೂ ಜೆಡಿಎಸ್- ಕಾಂಗ್ರೆಸ್ ಮುಖಾಮುಖೀಯಾಗುತ್ತಿದೆ. ಹಾಲಿ ಶಾಸಕ ಬಿ.ಕೆ. ಸಂಗಮೇಶ್, ಜೆಡಿಎಸ್ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ 30 ವರ್ಷದಿಂದ ಮುಖಾಮುಖೀಯಾಗುತ್ತಿದ್ದಾರೆ. ಬಿಜೆಪಿಯು ಹೆಚ್ಚೆಂದರೆ 10 ಸಾವಿರ ಮತ ಪಡೆಯಲಷ್ಟೇ ಸಾಧ್ಯವಾಗಿತ್ತು. ಕಳೆದು ನಾಲ್ಕು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಗಳಿಕೆ ಪ್ರಮಾಣ ಏರಿಕೆಯಾಗುತ್ತಿದೆ. ಬಿ.ಎಸ್. ಯಡಿಯೂರಪ್ಪ ಸಂಸತ್‌ಗೆ ಸ್ಪರ್ಧಿಸಿದ್ದಾಗ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತ ಪಡೆದಿದ್ದರು. 2018ರ ಉಪ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರರಿಗೆ ಲೀಡ್ ಸಿಕ್ಕಿರಲಿಲ್ಲ. ಇದನ್ನೇ ಸವಾಲಾಗಿ ಸ್ವೀಕರಿಸಿದ ಬಿಜೆಪಿ ಪಡೆ 5 ಸಾವಿರ ಮತಗಳ ಲೀಡ್ ಪಡೆದು ದಾಖಲೆ ನಿರ್ಮಿಸಿದೆ.
ಯುವಕರನ್ನು ಸೆಳೆಯಲು ಅಮಿತ್ ಶಾ ರೋಡ್ ಶೋ, ಮೋದಿ ಟೀಮ್ ಕೆಲಸ, ಪೇಜ್ ಪ್ರಮುಖರು, ಒಕ್ಕಲಿಗರ ಪ್ರಾಬಲ್ಯ ಇರುವ ಗ್ರಾಮಗಳಲ್ಲಿ ಒಕ್ಕಲಿಗ ಮುಖಂಡರನ್ನೇ ಬಳಸಿಕೊಂಡು ಮನ ಪರಿವರ್ತನೆ ಮಾಡಿದ್ದು, ಲಿಂಗಾಯತರ ಮತಬೇಟೆಗೆ ಖುದ್ದು ಯಡಿಯೂರಪ್ಪ ಇಳಿದಿದ್ದು ಎಲ್ಲವೂ ಪ್ಲಸ್ ಆಗಿದೆ.
ಡಿಕೆಶಿ ಪ್ಲಾನ್ ವಿಫಲ: 30 ವರ್ಷಗಳಿಂದ ಎರಡು ಧ್ರುವಗಳಂತಿದ್ದ ಹಾಲಿ ಮತ್ತು ಮಾಜಿ ಶಾಸಕರನ್ನು ಒಟ್ಟುಗೂಡಿಸಿದರೂ ಮತದಾರರು ಈ ಮೈತ್ರಿಗೆ ಬೆಲೆ ಕಟ್ಟಿಲ್ಲ. ಬಹಿರಂಗ ಪ್ರಚಾರಕ್ಕೆ ಕೊನೆಯ ಎರಡು ದಿನ ಇಬ್ಬರನ್ನು ಒಂದು ಮಾಡಿ ಸಂದೇಶ ರವಾನಿಸಲಾಯಿತು. ಆದರೆ ಇಬ್ಬರೂ ಕ್ಷೇತ್ರಾದ್ಯಂತ ಪ್ರಚಾರ ಮಾಡಲು ಆಗಲಿಲ್ಲ. ಚುನಾವಣೆ ಆರಂಭದಿಂದಲೂ ಇಬ್ಬರೂ ಮೈತ್ರಿ ನಾಯಕರು ತಟಸ್ಥರಾಗಿದ್ದರು. ಯಾರೂ ಹಳ್ಳಿ ಹಳ್ಳಿಗೆ ಹೋಗಿ ಮೈತ್ರಿ ಅಭ್ಯರ್ಥಿ ಪರ ಮತ ಕೇಳಲಿಲ್ಲ. ಕೊನೆಯ ಎರಡು ದಿನದ ಆಟ ಕೈ ಹಿಡಿಯಲಿಲ್ಲ. ಲಿಂಗಾಯತರು ಸಂಪೂರ್ಣ ಬಿಜೆಪಿಗೆ, ಒಕ್ಕಲಿಗರ ಶೇ.50ರಷ್ಟು ಮತಗಳು ಬಿಜೆಪಿ ಪಾಲಾಗಿವೆ. ಒಂದು ಲಕ್ಷ ಮತ ಪಡೆಯಬೇಕೆಂಬ ಡಿಕೆಶಿ ಟಾರ್ಗೆಟ್ ಮುಟ್ಟಲು ಇಬ್ಬರೂ ನಾಯಕರಿಗೆ ಆಗಲಿಲ್ಲ.
ಮೈತ್ರಿ ಕೈ ಹಿಡಿದ ಮುಸ್ಲಿಮರು: ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿರುವ ದೊಣಬಘಟ್ಟ, ಅನ್ವರ್ ಕಾಲೋನಿ, ಹಳೇ ನಗರದ ಕೆಲ ಭಾಗ, ಖಾಜಿ ಮೊಹಲ್ಲಾ, ಹೊಸೂರು ಗ್ರಾಮಗಳಲ್ಲಿ ಜೆಡಿಎಸ್ ಶೇ.95ಕ್ಕಿಂತ ಹೆಚ್ಚು ಮತಗಳು ಬಂದಿವೆ. ಈ ಭಾಗದಲ್ಲಿ ಹೆಚ್ಚು ಜೆಡಿಎಸ್ ಪ್ರಚಾರ ಮಾಡಿರಲಿಲ್ಲ. ಅದೇ ರೀತಿ ಒಕ್ಕಲಿಗರು, ಲಿಂಗಾಯತರು ಹೆಚ್ಚಿರುವ ಗ್ರಾಮಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಜೆಡಿಎಸ್ – ಬಿಜೆಪಿ ನಡುವೆ ತೀವ್ರ ಪೈಪೋಟಿ ಕಂಡು ಬಂದಿದೆ. ಒಕ್ಕಲಿಗರು ಹೆಚ್ಚಾಗಿರುವ ಕಂಬದಾಳ್ ಹೊಸೂರು, ಕಾರೇಹಳ್ಳಿ, ಬಾಳೆಮಾರನಹಳ್ಳಿ, ಬಾರಂದೂರು, ಹಳ್ಳಿಕೆರೆ, ಹಿರಿಯೂರು ಗ್ರಾಮದಲ್ಲಿ ಶೇ.70ಕ್ಕಿಂತ ಹೆಚ್ಚು ಮತಗಳು ಬಿಜೆಪಿ ಪಾಲಾಗಿರುವುದು ಜೆಡಿಎಸ್ ನಾಯಕರಲ್ಲೇ ಆಶ್ಚರ್ಯ ಮೂಡಿಸಿದೆ. ನಗರ ಪ್ರದೇಶದಲ್ಲಿ ಬಿಜೆಪಿ ಶೇ.50ಕ್ಕಿಂತ ಹೆಚ್ಚು ಮತ ಪಡೆದಿದೆ.