Advertisement
ಸಾವು ಮೆಟ್ಟಿ ಬಂದವರು!18 ದಿನಗಳ ಕಾಲ ಮಣಿಪಾಲದ ಐಸಿಯುನಲ್ಲಿದ್ದು ಬಂದ ನೆಲ್ಲಿಮಕ್ಕಿಯ ದಿವಾಕರ, 12 ದಿನ ಜೀವನ್ಮರಣ ಸನ್ನಿವೇಶ ಅನುಭವಿಸಿದ ಸಂಪದ ರಾಮಚಂದ್ರ ಶಾಸ್ತ್ರಿ, ಇನ್ನು 10 ನಿಮಿಷ ಉಳಿಸಿಕೊಳ್ಳುವುದು ಕಷ್ಟವಿದೆ ಎಂಬ ವೈದ್ಯರ ಉದ್ಘಾರಕ್ಕೆ ಕಾರಣವಾಗಿದ್ದ ಮರಾಠಕೇರಿಯ ಸಂತೋಷ್, ಪತಿ ಪತ್ನಿಯರಿಬ್ಬರೂ ಮಂಗನ ಕಾಯಿಲೆಗೆ ಸರದಿಯಂತೆ ಮಣಿಪಾಲಕ್ಕೆ ಹೋಗಿ 12 ದಿನವಿದ್ದ ಬಣ್ಣುಮನೆಯ ಬಿ.ಎಸ್. ರಾಘವೇಂದ್ರ ಹಾಗೂ ರತ್ನಾವತಿ ಮೊದಲಾದ ಹಲವರು ಮತದಾನ ಕೇಂದ್ರದ ಬಳಿ ಗ್ರಾಮದ ಉಳಿದವರಿಗೆ ಕಾಣಿಸಿಕೊಂಡರು. ಬಹುತೇಕ ಜನ ಸಾಗರ ಸೇರಿದಂತೆ ಬೇರೆ ಬೇರೆ ಕಡೆ ಬಂಧುಗಳ ಅಥವಾ ಬಾಡಿಗೆ ಮನೆಯಲ್ಲಿ ತಾತ್ಕಾಲಿಕ ನಿವಾಸದಲ್ಲಿದ್ದರು ಮತದಾನಕ್ಕಾಗಿಯೇ ಅರಳಗೋಡಿನತ್ತ ಮಂಗಳವಾರ ಮುಖ ಮಾಡಿದ್ದರು.
ಮಂಗನ ಕಾಯಿಲೆ ಸಂಬಂಧ ಈ ಭಾಗದ ಸುಮಾರು 400 ಜನರಲ್ಲಿ ಪಾಸಿಟಿವ್ ಬಂದಿದೆ. ಬಹುತೇಕ ಜನ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ವಾರಗಟ್ಟಲೆ ಇದ್ದು ಚಿಕಿತ್ಸೆ ಪಡೆದು ಬಂದಿದ್ದಾರೆ. 22 ಜನ ಜೀವವನ್ನೇ ತೆತ್ತಿದ್ದಾರೆ. ಜ್ವರ ಮರುಕಳಿಸಿದ ಹಿನ್ನೆಲೆಯಲ್ಲಿ ಸಂಪದ ಲಕ್ಷ್ಮೀನಾರಾಯಣ್ ಅವರನ್ನು ಮತ್ತೆ ಸೋಮವಾರ ಕೆಎಂಸಿಗೆ ಕರೆದೊಯ್ಯಲಾಗಿದೆ. ಸಾವುಗಳ ಮಧ್ಯೆಯೂ ಜನರ ಮತದಾನದ ಹಕ್ಕು ಪ್ರಜ್ಞೆ ಜೀವಂತವಾಗಿದೆ. ಮತ್ತೆ ಮಂಗನ ಕಾಯಿಲೆ ಬರುವುದೆಂಬ ಭಯವಿರುವ ಕಾರಣ ಮಂಡವಳ್ಳಿ ಬೂತ್ ವ್ಯಾಪ್ತಿಯ 25 ಕುಟುಂಬಗಳಲ್ಲಿ 15 ಕುಟುಂಬದವರು ಮತದಾನಕ್ಕಾಗಿಯೇ ಮರಳಿ ಬಂದು ಮತ ಹಾಕಿ ಮತ್ತೆ ತಾವಿದ್ದಲ್ಲಿಗೆ ಮರಳಿದ್ದಾರೆ.
Related Articles
Advertisement
ಈಗಲೂ ಮಂಗ ಸಾಯುತ್ತಿದೆ!ಮಂಗನ ಕಾಯಿಲೆ ಈ ಭಾಗದಿಂದ ಒಂದಿನಿತೂ ಕಣ್ಮರೆಯಾಗಿಲ್ಲ ಎಂದು ಪ್ರತಿಪಾದಿಸುವ ಈ ಭಾಗದ ರಾಜೇಶ ಯಲಕೋಡು, ಇದೀಗ ಕೆರಿಯ ನಂದೋಡು ಎಂಬಾತ ತೀವ್ರ ತಲೆನೋವು, ಜ್ವರದಿಂದ ಅರಳಗೋಡು ಪಿಎಚ್ಸಿಗೆ ಸೇರ್ಪಡೆಯಾಗಿದ್ದಾರೆ. ನಂದೋಡಿಯ ಯಶೋಧಮ್ಮ ಅವರ ಮನೆಯ ಹಿತ್ತಲಿನಲ್ಲಿ ಬೆಳಗ್ಗೆ ಸತ್ತ ಮಂಗ ಪತ್ತೆಯಾಗಿದೆ. ಈ ಭಾಗದಲ್ಲಿ ಸುಮಾರು 1500 ಮಂಗಗಳು ಸತ್ತಿದ್ದರೆ ಅರಣ್ಯ ಇಲಾಖೆಯವರು 400ಕ್ಕಷ್ಟೇ ಅಗ್ನಿಸ್ಪರ್ಶ ಮಾಡಿದ್ದಾರೆ. ಕಾಯಿಲೆ ಗುಪ್ತಗಾಮಿನಿಯಾಗಿ ಈ ಪ್ರದೇಶದಲ್ಲಿಯೇ ಇದೆ. ನಂದೋಡಿ ಬೂತ್ ವ್ಯಾಪ್ತಿಯಲ್ಲಿ ಕಾಯಿಲೆ ಬಾಧಿಸಿದ 55 ಜನರಲ್ಲಿ 20 ಜನ ಮಾತ್ರವೇ ಮತದಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ. ಐದು ಮನೆಯವರು ಬಹಳ ದಿನಗಳಿಗೆ ವಲಸೆ ಹೋದವರು ಮರಳಿಲ್ಲ ಎಂಬುದರತ್ತ ಗಮನ ಸೆಳೆಯುತ್ತಾರೆ. ಮರಬಿಡಿಯ ಎಂ.ಜಿ. ಅಶೋಕ್, ಬಣ್ಣುಮನೆಯ ಬಿ.ಎಸ್. ರಾಘವೇಂದ್ರ ಮೊದಲಾದವರು, ಮಂಗನ ಕಾಯಿಲೆಯ ವೈರಾಣು ರೂಪಾಂತರಗೊಂಡಿರುವ ಬಗ್ಗೆಯೂ ಸಂಶೋಧನೆಗಳಾಗಬೇಕಿದೆ. ಎರಡೆರಡು ಬಾರಿ ತೆಗೆದುಕೊಂಡರೂ ಪ್ರಭಾವಶಾಲಿ ಅಲ್ಲದ ಲಸಿಕೆ ಮೇಲೆ ನಾವು ನಂಬಿಕೆ ಕಳೆದುಕೊಳ್ಳುತ್ತಿದ್ದೇವೆ. ಮಂಗನಿಗೆ ಕ್ಯಾಸನೂರು ಅರಣ್ಯ ಕಾಯಿಲೆ ಬರದಂತೆ ನೋಡಿಕೊಳ್ಳುವ ನಿಟ್ಟಿನಲ್ಲೂ ಪ್ರಯೋಗಗಳಾಗಬೇಕು. ಆಗಲೇ ಮನಷ್ಯ ಸುರಕ್ಷಿತನಾಗುತ್ತಾನೆ ಎಂದು ಪ್ರತಿಪಾದಿಸಿದರು. ಮತದಾನದ ದಿನವಾದ ಮಂಗಳವಾರ ಮಧ್ಯಾಹ್ನ ಅರಳಗೋಡು ಭಾಗದಲ್ಲಿ ಸುಮಾರು ಒಂದು ತಾಸಿಗೂ ಅಧಿಕ ಕಾಲ ಮಳೆ ಸುರಿಯಿತು. ಪ್ರಧಾನಿಗೆ ಮೊರೆ!
ನಮ್ಮಲ್ಲಿನ್ನೂ ಸಹನೆ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿದೆ. ಈ ಭಾಗದಲ್ಲಿ ಯಾವುದೇ ರಾಜಕೀಯ ಪಕ್ಷದ ನಾಯಕರು ಮಂಗನ ಕಾಯಿಲೆಗೆ ಹೆದರಿ ಪ್ರಚಾರಕ್ಕೆ ಬಾರದಿದ್ದರೂ ನಾವು ಮತ ಹಾಕುವ ಮೂಲಕ ಆಯ್ಕೆಯಾಗುವ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕು ಉಳಿಸಿಕೊಂಡಿದ್ದೇವೆ. ಪ್ರಧಾನ ಮಂತ್ರಿಗಳಿಗೆ ಸಾಮಾನ್ಯ ನಾಗರಿಕ ದೂರವಾಣಿಯಲ್ಲಿ ನೇರವಾಗಿ ಸಂಪರ್ಕಿಸಬಹುದು ಎಂದು ಕೇಳಿದ್ದೇನೆ. ನಾಳೆ ಈ ಪಕ್ಷದ ಕಾರ್ಯಕರ್ತರನ್ನು ಕೇಳಿ ನೇರವಾಗಿ ಮಂಗನ ಕಾಯಿಲೆಯ ಶಾಶ್ವತ ಪರಿಹಾರ ಪಡೆಯಲು ಪ್ರಧಾನ ಮಂತ್ರಿಯನ್ನೇ ಆಗ್ರಹಿಸುತ್ತೇವೆ ಎಂದು ಮಂಗನ ಕಾಯಿಲೆ ಪೀಡಿತ ಮಗನೋರ್ವನ ತಂದೆ ಹೇಳಿದ್ದು ಇಡೀ ಅರಳಗೋಡು ಭಾಗದ ಜನರ ಮನಸ್ಸಿನ ಪ್ರತಿಧ್ವನಿಯಂತೆ ಕೇಳಿಸುತ್ತದೆ.