Advertisement

ಪಕ್ಷಗಳಿಂದ ಅಭಿವೃದ್ಧಿ ಮಂತ್ರ-ಮತಗಳಿಕೆಗೆ ತಂತ್ರ

05:15 PM Apr 19, 2019 | Naveen |

ಶಿವಮೊಗ್ಗ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ
ಕೇಂದ್ರ ಶಿವಮೊಗ್ಗದಲ್ಲಿ ಎಲ್ಲ ಪಕ್ಷಗಳ ಪ್ರಚಾರ ಜಿಲ್ಲೆಯ ಉಳಿದ
ವಿಧಾನಸಭಾ ಕ್ಷೇತ್ರಗಳಿಗಿಂತ ಜೋರಾಗಿದೆ. ಉಪ ಚುನಾವಣೆಯಲ್ಲಿ ಬಿಜೆಪಿಗೆ ಅತಿ ಹೆಚ್ಚು ಲೀಡ್‌ ಕೊಟ್ಟ ಕ್ಷೇತ್ರವಾದರೆ, ಕಾಂಗ್ರೆಸ್‌-
ಜೆಡಿಎಸ್‌ಗೆ ಸಾಂಪ್ರದಾಯಿಕ ಮತಗಳು ಕೈ ಚೆಲ್ಲಿ ಹೋಗಿದ್ದವು. ಹೀಗಾಗಿ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚಿನ ಮತಗಳಿಸಲು ಮನೆ
ಮನೆ ತಲುಪುತ್ತಿವೆ. ಉತ್ತಮ ಕಾರ್ಯಕರ್ತರಿಲ್ಲದ ಕಾಂಗ್ರೆಸ್‌- ಜೆಡಿಎಸ್‌ ಕೂಡ ಮನವೊಲಿಕೆಗೆ ಪ್ರಯತ್ನಿಸುತ್ತಿವೆ.

Advertisement

ಶಿವಮೊಗ್ಗ ನಗರ ಕ್ಷೇತ್ರದಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಶಾಸಕ ಕೆ.ಎಸ್‌. ಈಶ್ವರಪ್ಪ 1 ಲಕ್ಷ ಮತ ಪಡೆಯುವ ಮೂಲಕ ಭರ್ಜರಿ ಗೆಲುವು ಸಾ ಧಿಸಿದ್ದರು. ನಂತರ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಬಿಜೆಪಿ ಬಹುಮತ ಪಡೆದು ಅಧಿಕಾರ ಹಿಡಿಯಿತು. ಉಪ ಚುನಾವಣೆಯಲ್ಲೂ ಉತ್ತಮ ಲೀಡ್‌ ಸಿಕ್ಕಿತ್ತು.

ಈ ಎಲ್ಲ ಅಂಕಿಅಂಶಗಳಿಂದ ಸಂತಸಗೊಂಡಿರುವ ಬಿಜೆಪಿ ಪಾಳಯ ಮತದಾನ ಪ್ರಮಾಣ ಹೆಚ್ಚಾದರೆ ಬಿಜೆಪಿಗೆ ಲಾಭ ಎಂದು ತಿಳಿದು ಬಿರುಸಿನ ಪ್ರಚಾರ ಕೈಗೊಂಡಿದೆ. 20 ಮಂದಿ ಪಾಲಿಕೆ ಸದಸ್ಯರು, ಕಾರ್ಯಕರ್ತರು, ಮುಖಂಡರು ಆಸ್ಪತ್ರೆ, ಸ್ಟೇಡಿಯಂ ಎಲ್ಲ ತಾಣಗಳಲ್ಲೂ ಪ್ರಚಾರ ನಡೆಸುತ್ತಿದ್ದಾರೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಯಡಿಯೂರಪ್ಪ ಅವರು ಸಿಎಂ ಆದ ಕಾಲದಲ್ಲಿ ಶಿವಮೊಗ್ಗದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ದೇಶದ ರಕ್ಷಣೆ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮತ್ತೂಮ್ಮೆ ಅವಕಾಶ ಕೊಡಿ ಎಂದು ಮತ ಕೇಳುತ್ತಿದೆ.

ಬ್ರಾಹ್ಮಣರು, ಲಿಂಗಾಯತರು, ಮುಸ್ಲಿಮರು, ಹಿಂದುಳಿದ ಜನಾಂಗದ ಮತಗಳು ನಿರ್ಣಾಯಕವಾಗಿದ್ದು ಜಾತಿ ಕೇಂದ್ರದ ಸ್ನೇಹ ಸಮ್ಮಿಲನಗಳು ಸಹ ಜೋರಾಗಿವೆ. ಮೋದಿಯನ್ನು ಬೆಂಬಲಿಸುವ ಯುವ ಪಡೆ ಸೋಶಿಯಲ್‌ ಮೀಡಿಯಾದಲ್ಲಿ ಮೋದಿ ಮತ್ತೂಮ್ಮೆ ಎಂದು ಅಬ್ಬರಿಸುತ್ತಿದೆ. ಇತ್ತ ಜೆಡಿಎಸ್‌- ಕಾಂಗ್ರೆಸ್‌ ಮುಖಂಡರು ಕೊನೆ ಕ್ಷಣದಲ್ಲಿ ಬಿರುಸಿನ ಪ್ರಚಾರಕ್ಕೆ ಅಣಿಯಾಗಿದ್ದಾರೆ. ಎರಡೂ ಪಕ್ಷಗಳು ಒಗ್ಗೂಡಿರುವುದರಿಂದ ಮುಖಂಡರು, ಕಾರ್ಯಕರ್ತರ ನಡುವೆ ಉತ್ತಮ ಹೊಂದಾಣಿಕೆ ಇಲ್ಲ. ಹಣಕಾಸಿನ ವಿಷಯದಲ್ಲೂ ಕೆಲವರನ್ನು ವಿಶ್ವಾಸಕ್ಕೆ
ತೆಗೆದುಕೊಂಡಿಲ್ಲ ಎಂದು ಸಣ್ಣಪುಟ್ಟ ಗಲಾಟೆಗಳು ನಡೆದಿವೆ.

ಇದೆಲ್ಲವನ್ನು ಹೊರತುಪಡಿಸಿದರೆ ಬಿಜೆಪಿ ಕಾರ್ಯತಂತ್ರಕ್ಕೆ ಮೈತ್ರಿಕೂಟ ಕೌಂಟರ್‌ ಕೊಡುತ್ತಿದೆ. 10 ವರ್ಷ ಸುದೀರ್ಘ‌
ಬಿ.ಎಸ್‌. ಯಡಿಯೂರಪ್ಪ ಹಾಗೂ ಬಿ.ವೈ. ರಾಘವೇಂದ್ರ ಸಂಸದರಾಗಿದ್ದಾರೆ, ನನಗೂ ಒಂದು ಅವಕಾಶ ಕೊಡಿ ಎಂದು
ಮೈತ್ರಿ ಅಭ್ಯರ್ಥಿ ಕೇಳುತ್ತಿದ್ದಾರೆ. ಇತ್ತ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚಿನ ಲೀಡ್‌ ಪಡೆಯಲು ಈಗಾಗಲೇ ಎರಡೆರಡು ಬಾರಿ ಮನೆ ಮನೆ ತಲುಪಿದೆ.

Advertisement

ಶಿವಮೊಗ್ಗ ಗ್ರಾಮಾಂತರ: ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಿರುವ ಗ್ರಾಮಾಂತರ ಕ್ಷೇತ್ರ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾಗಿದೆ. ಲಂಬಾಣಿಗರೇ ಹೆಚ್ಚಿರುವ ಈ ಕ್ಷೇತ್ರ ಈಗ ಬಿಜೆಪಿ ಪಾಲಾಗಿದೆ. ಉಪ ಚುನಾವಣೆಯಲ್ಲೂ ಅತಿ ಹೆಚ್ಚು ಮತ ಕೊಡುವ ಮೂಲಕ ಬಿಜೆಪಿಗೆ ಭರವಸೆ ಮೂಡಿಸಿತ್ತು. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಕೂಡ ಇಲ್ಲಿ ಉತ್ತಮ ಮತ ಬ್ಯಾಂಕ್‌ ಹೊಂದಿದೆ. ಕೃಷಿಕರೇ ಹೆಚ್ಚಾಗಿರುವ ಈ ಭಾಗದಲ್ಲಿ ಏತ ನೀರಾವರಿ ಯೋಜನೆಗೆ ಭಾರಿ ಬೇಡಿಕೆ ಇದೆ. ರಾಜ್ಯ ಬಜೆಟ್‌ನಲ್ಲಿ ಈ ಬಾರಿ ಈ ಭಾಗದ ಏತ ನೀರಾವರಿ ಯೋಜನೆಗೆ ಅನುದಾನ ಕೊಡಲಾಗಿದ್ದು, ಇದರ ಲಾಭ ಪಡೆಯಲು ಮಾತಿನ ಸಮರ ನಡೆದಿದೆ. ಬಹುತೇಕ ರೈತಾಪಿ ವರ್ಗವೇ ಇರುವುದರಿಂದ ಎರಡೂ ಪಕ್ಷಗಳು ತಮ್ಮ ಪಕ್ಷಗಳ ಕೊಡುಗೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿವೆ. ಜೆಡಿಎಸ್‌ ಬಂಗಾರಪ್ಪ ಕೊಡುಗೆಗಳನ್ನೂ ಪ್ರಚಾರಕ್ಕೆ ಬಳಸಿಕೊಳ್ಳಲು ಹಿಂದೆ ಬಿದ್ದಿಲ್ಲ. ಕಡಿಮೆ ಮತ ಬಂದ ಬೂತ್‌ಗಳತ್ತ ಎರಡೂ ಪಕ್ಷಗಳು ಹೆಚ್ಚು ಶ್ರಮ ವಹಿಸಿವೆ. ತನ್ನ ಸಂಘಟನೆ ಶಕ್ತಿಯಿಂದ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ, ಈಗಲೂ ಅದನ್ನೇ ನೆಚ್ಚಿಕೊಂಡಿದೆ. ಜೆಡಿಎಸ್‌- ಕಾಂಗ್ರೆಸ್‌ ಈ ಬಾರಿ ಎಚ್ಚರಿಕೆಯಿಂದ ಪ್ರಚಾರ ನಡೆಸಿವೆ.

ಸ್ನೇಹ ಮಿಲನ ರಾಜಕೀಯ
ಉಪ ಚುನಾವಣೆಯಲ್ಲಿ ಎಲ್ಲ ಜಾತಿ, ಸಮುದಾಯಗಳ ಸ್ನೇಹ
ಮಿಲನ ಮಾಡುವ ಮೂಲಕ ಬಿಜೆಪಿ ಎಲ್ಲರನ್ನೂ ವಿಶ್ವಾಸಕ್ಕೆ
ತೆಗೆದುಕೊಳ್ಳುವ ಕೆಲಸ ಮಾಡಿತು. ಇದು ಉತ್ತಮ ಫಲಿತಾಂಶ
ಕೂಡ ನೀಡಿತು. ಇದೇ ಸೂತ್ರವನ್ನು ಈ ಚುನಾವಣೆಯಲ್ಲಿ
ಮುಂದುವರಿಸಿದೆ. ಇದಕ್ಕೆ ಪ್ರತ್ಯುತ್ತರ ಕೊಡುವ ನಿಟ್ಟಿನಲ್ಲಿ
ಜೆಡಿಎಸ್‌- ಕಾಂಗ್ರೆಸ್‌ ಕೂಡ ಸಾಲು ಸಾಲು ಸ್ನೇಹ ಮಿಲನ
ಆಯೋಜಿಸಿದೆ. ಬಿಜೆಪಿ ಯಾವ ಸಮುದಾಯ ಮಾಡುತ್ತೋ
ಇವರು ಅದೇ ಸಮುದಾಯ ಸೆಳೆಯುವ ಎಲ್ಲ ಪ್ರಯತ್ನ
ಮಾಡುತ್ತಿದ್ದಾರೆ.

ಅಬ್ಬರದ ಪ್ರಚಾರ
ನಾಮಪತ್ರ ಸಲ್ಲಿಕೆ ವೇಳೆ ಎರಡೂ ಪಕ್ಷಗಳು ಶಕ್ತಿ ಪ್ರದರ್ಶನ
ನಡೆಸಿವೆ. ಶಿವಮೊಗ್ಗದಲ್ಲಿ ಮಹಿಳಾ ಮತದಾರರ ಸಂಖ್ಯೆ
ಹೆಚ್ಚಿರುವುದರಿಂದ ಬಿಜೆಪಿ ನಿರ್ಮಲಾ ಸೀತಾರಾಮನ್‌
ಅವರನ್ನು ಕರೆಸಿ ಮಹಿಳಾ ಸಮಾವೇಶ ಕೂಡ ನಡೆಸಿತು.
ಏ.21ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ
ರೋಡ್‌ ಶೋ ನಡೆಸಲಿದ್ದಾರೆ. ಏ.20ರಂದು ಶಿವಮೊಗ್ಗ
ಗ್ರಾಮಾಂತರ ಭಾಗದಲ್ಲಿ ಎಚ್‌.ಡಿ. ದೇವೇಗೌಡ, ಡಿ.ಕೆ.
ಶಿವಕುಮಾರ್‌ ಪ್ರಚಾರ ನಡೆಸಲಿದ್ದಾರೆ. ಘಟಾನುಘಟಿ
ನಾಯಕರು ಏ.21ರವರೆಗೂ ಕ್ಷೇತ್ರದಲ್ಲೇ ಉಳಿಯಲಿದ್ದು
ಪ್ರಚಾರ ಕಣ ರಂಗೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next