ಶಿವಮೊಗ್ಗ: ಪ್ರತಿಷ್ಠಿತ ಕ್ಯೂ.ಎಸ್. ಜಾಗತಿಕ ವಿಶ್ವವಿದ್ಯಾಲಯಗಳ ಶ್ರೇಣಿಯ ಏಷ್ಯಾ ವಿಭಾಗದಲ್ಲಿ ಕುವೆಂಪು ವಿವಿಯು ಮೊದಲ ಬಾರಿಗೆ ಸ್ಥಾನ ಪಡೆದಿದ್ದು, ಟಾಪ್ 500 ವಿವಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡ ಸಾಧನೆ ಮಾಡಿದೆ. ಸಿಂಗಪುರದಲ್ಲಿ ಬುಧವಾರ ಬಿಡುಗಡೆಗೊಳಿಸಲಾದ ಕ್ಯೂ.ಎಸ್.(ಕ್ವಾಕೆರೆಲಿ ಸಿಮಂಡ್ಸ್ ಲಿಮಿಟೆಡ್) ಜಾಗತಿಕ ಉನ್ನತ ವಿಶ್ವವಿದ್ಯಾಲಯಗಳು-2020 ರ್‍ಯಾಂಕಿಂಗ್ ವರದಿಯಲ್ಲಿ ಕುವೆಂಪು ವಿಶ್ವವಿದ್ಯಾಲಯವು ಉತ್ತಮ ಸಾಧನೆ ತೋರಿದೆ. ರ್‍ಯಾಂಕಿಂಗ್ ಪಟ್ಟಿಯ ಏಷ್ಯಾ ವಲಯದ ವಿಶ್ವವಿದ್ಯಾಲಯಗಳ ಶ್ರೇಣಿಯಲ್ಲಿ ವಿವಿಗೆ 451-500 ಸಂಸ್ಥೆಗಳ ಸಾಲಿನಲ್ಲಿ ಸ್ಥಾನ ದೊರೆತಿದೆ.
ಸ್ಥಾಪಿತ ವಿವಿಗಳ ಸಾಲಿನಲ್ಲಿ ಅಧ್ಯಯನ ವಿಷಯಗಳ ಸಮಗ್ರತೆ ಹೊಂದಿರುವಿಕೆ ಹಾಗೂ ಉತ್ತಮ ಸಂಶೋಧನಾ ಉತ್ಪಾದಕತೆಯನ್ನು ವಿವಿ ತೋರುತ್ತಿದೆ ಎಂದು ವರದಿ ಉಲ್ಲೇಖೀಸಿದೆ. ಕಳೆದ ಐದು ವರ್ಷಗಳ ಸಂಶೋಧನಾ ಜ್ಞಾನ ಸೃಷ್ಟಿಯನ್ನು ಸ್ಕೊಪಸ್ ಸಂಸ್ಥೆಯ ಮಾಹಿತಿ ಆಧಾರವಾಗಿ ಪರಿಗಣಿಸಿ ರ್‍ಯಾಂಕಿಂಗ್ ಅನ್ನು ನಿರ್ಧರಿಸಲಾಗಿದ್ದು, ಕುವೆಂಪು ವಿವಿ ಅಧ್ಯಾಪಕರ ಪ್ರತೀ ಸಂಶೋಧನಾ ಲೇಖನವು 133 ಬಾರಿ ಪರಾಮರ್ಶನಗೊಂಡಿವೆ.
ಇದು ಸಂಶೋಧನಾ ಗುಣಮಟ್ಟವನ್ನು ಖಚಿತಪಡಿಸುತ್ತಿದೆ ಎಂದು ವರದಿ ಹೇಳಿದೆ. ಈಗಾಗಲೇ ವಿಶ್ವವಿದ್ಯಾಲಯವು ನ್ಯಾಕ್‌ನಿಂದ “ಎ’ ಶ್ರೇಣಿ, ಎನ್.ಐ.ಆರ್.ಎಫ್.ನಿಂದ 73ನೇ ರ್‍ಯಾಂಕ್, ಕೆ.ಎಸ್.ಯು.ಆರ್.ಎಫ್.ನಿಂದ ಮೂರನೇ ರ್‍ಯಾಂಕ್ ಹಾಗೂ ಸೈಮ್ಯಾಗೋ ರ್‍ಯಾಂಕಿಂಗ್‌ನಲ್ಲಿ ಭಾರತಕ್ಕೆ 45ನೇ ಸ್ಥಾನ ಪಡೆದಿದ್ದು, ಪ್ರಸ್ತುತ ವಿವಿಯು ಪ್ರತಿಷ್ಠಿತ ಕ್ಯೂ.ಎಸ್. ರ್‍ಯಾಂಕಿಂಗ್‌ನಲ್ಲಿ ಸ್ಥಾನ ಪಡೆದಿದ್ದು ಗಮನಾರ್ಹ ಸಾಧನೆಯಾಗಿದೆ.
ಅದರಲ್ಲಿ ಮೊದಲ 500ರ ರ್‍ಯಾಂಕ್ ಪಡೆದಿರುವುದು ಶೈಕ್ಷಣಿಕ ಮತ್ತು ಸಂಶೋಧನಾ ಗುಣಮಟ್ಟ ಉತ್ತಮಗೊಳ್ಳುತ್ತಿರುವುದನ್ನು ತೋರ್ಪಡಿಸುತ್ತದೆ ಎಂದು ಕುಲಪತಿ ಪ್ರೊ| ಬಿ.ಪಿ. ವೀರಭದ್ರಪ್ಪ ಹರ್ಷ ವ್ಯಕ್ತಪಡಿಸಿದರು.
ಕ್ಯೂ.ಎಸ್ ಜಾಗತಿಕ ವಿವಿ ರ್‍ಯಾಂಕಿಂಗ್: ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮತ್ತು ಸಂಶೋಧನಾ ಗುಣಮಟ್ಟವನ್ನು ಪರಾಮರ್ಶಿಸಿ ಜಾಗತಿಕ ಮಟ್ಟದಲ್ಲಿ ರ್‍ಯಾಂಕಿಂಗ್ ನೀಡುವ ಪ್ರತಿಷ್ಠಿತ ಮೂರು ರ್‍ಯಾಂಕಿಂಗ್‌ಗಳಲ್ಲಿ ಕ್ಯೂ. ಎಸ್. (ಕ್ವಾಕೆರೆಲಿ ಸಿಮಂಡ್ಸ್ ಲಿಮಿಟೆಡ್) ಜಾಗತಿಕ ಉನ್ನತ ವಿಶ್ವವಿದ್ಯಾಲಯಗಳ ರ್‍ಯಾಂಕಿಂಗ್ ಕೂಡ ಒಂದು. ಶೈಕ್ಷಣಿಕ ವಾತಾವರಣ ಮತ್ತು ಸಿಬ್ಬಂದಿಗೆ ಇರುವ ಸಾಮಾಜಿಕ ಮನ್ನಣೆ, ವಿದ್ಯಾರ್ಥಿ- ಶಿಕ್ಷಕರ ಅನುಪಾತ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನುರಿತ ಅಧ್ಯಾಪಕ ವರ್ಗ ಮತ್ತು ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ, ವಿದೇಶಿ ವಿನಿಮಯ ಕಾರ್ಯಕ್ರಮಗಳು ಹಾಗೂ ಸಂಶೋಧನಾ ಪ್ರಕಟಣೆಗಳು ಸೇರಿದಂತೆ 11 ಮಾನದಂಡಗಳನ್ನು ಪರಿಗಣಿಸಿ ರ್‍ಯಾಂಕಿಂಗ್ ನೀಡಲಾಗುತ್ತದೆ.