Advertisement

ಕೇಳುವ ಕಲೆ ಯುವಕರಿಂದ ಮಾಯ

05:57 PM Feb 07, 2020 | Naveen |

ಶಿವಮೊಗ್ಗ: ಡಿಜಿಟಲ್‌ ಯುಗದ ಯುವ ಜನಾಂಗವು ಮಾಹಿತಿಯ ಮಹಾಪೂರದಲ್ಲಿ ಸಿಲುಕಿದ್ದು, ಕೇಳುವ ಕಲೆಯನ್ನು ಕಳೆದುಕೊಂಡಿದೆ ಎಂದು ಮಲಯಾಳಿ ಸಾಹಿತಿ, ಕಾದಂಬರಿಕಾರ ಮಾಧವನ್‌ ಎನ್‌. ಎಸ್‌. ಅಭಿಪ್ರಾಯಪಟ್ಟರು.

Advertisement

ಕುವೆಂಪು ವಿವಿಯ ಇಂಗ್ಲಿಷ್‌ ವಿಭಾಗವು ಪ್ರೊ| ಎಸ್‌. ಪಿ. ಹಿರೇಮಠ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ “ಸಂಸ್ಕೃತಿಯೊಂದಿಗೆ ಸಂವಾದ: ದಕ್ಷಿಣ ಏಷ್ಯಾದ ಬರಹಗಾರರ ರಾಷ್ಟ್ರೀಯ ಮಟ್ಟದ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

15ನೇ ಶತಮಾನದಲ್ಲಿ ಗುಟೆನ್‌ಬರ್ಗ್‌ ಮುದ್ರಣ ಯಂತ್ರ ಕಂಡುಹಿಡಿದ ನಂತರ ಜಗತ್ತು ಭಾರೀ ಬದಲಾವಣೆ ಕಂಡಿತು. ತದನಂತರದಲ್ಲಿ ಪತ್ರಿಕೆ, ರೇಡಿಯೋ, ಟೆಲಿವಿಷನ್‌ ಸೇರಿದಂತೆ ವಿವಿಧ ರೀತಿಯ ಮಾಧ್ಯಮಗಳು ಅಭಿವೃದ್ಧಿಗೊಂಡು ಜನರ ನಡುವೆ ಬಳಕೆಯಲ್ಲಿವೆ. ಆದರೆ ಇತ್ತೀಚಿನ ಇಂಟರ್‌ನೆಟ್‌ ಆಧರಿತ ನವಮಾಧ್ಯಮವು ಮಾಹಿತಿಯ ಮಹಾಪೂರವನ್ನೇ ಜನರಿಗೆ ತಲುಪಿಸುತ್ತಿದೆ. ಸಹಜವಾಗಿ ಬರಹಗಾರ ಮತ್ತು ಓದುಗರಿಬ್ಬರೂ ಮಾಹಿತಿ ಮಹಾಪೂರದಲ್ಲಿ ಕಳೆದುಹೋಗುತ್ತಿದ್ದು, ವಿಷಯಗಳನ್ನು ಅರಿಯುವ, ಗುರುತಿಸುವ ಮತ್ತು ಕೇಳುವಂತಹ ಸೂಕ್ಷ್ಮ ಕೌಶಲ್ಯಗಳನ್ನು ಕಳೆದುಕೊಳ್ಳುತ್ತಿರುವ ಅಪಾಯ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಯುವಸಮೂಹವು ಸಾಮಾಜಿಕ ಜಾಲತಾಣಗಳಿಂದ ಸ್ವಕೇಂದ್ರೀಯ ಮನೋಭಾವಕ್ಕೆ ಸೀಮಿತವಾಗಿದೆ. ಆಧುನಿಕ ಕಾಲದ ಓದು ಇ-ಓದು ಆಗಿ ಬದಲಾಗಿದ್ದು, ಬರಹಗಾರರಿಗೆ ಹೊಸ ಸವಾಲುಗಳನ್ನು ತಂದಿತ್ತಿದೆ. ಆಡಿಯೋ ಬುಕ್‌ಗಳನ್ನು ಪ್ರಕಾಶಕರು ಹೊರತರುತ್ತಿರುವುದು ಓದುಗರ ಯೋಚನಾ ಶಕ್ತಿಯನ್ನು ಮತ್ತಷ್ಟು ಕುಗ್ಗಿಸಬಲ್ಲದು. ನವ ಮಾಧ್ಯಮಗಳ ನವೀನ ಸಾಧ್ಯತೆಗಳಿಂದಾಗಿ, ಸಾಕ್ಷರತೆಯು ಸಾಹಿತ್ಯವನ್ನು ಓದಲು ಇರಬಲ್ಲ ಅರ್ಹತೆಯಾಗಿ ಇಂದು ಉಳಿದಿಲ್ಲ ಎಂದರು.

ಕುಲಪತಿ ಪ್ರೊ| ಬಿ.ಪಿ. ವೀರಭದ್ರಪ್ಪ ಮಾತನಾಡಿ, ಸಾಹಿತ್ಯದ ವಿವಿಧ ಅಭಿವ್ಯಕ್ತಿಗಳು ಕೇವಲ ಅಕ್ಷರ ವೃತ್ತಿಗೆ ಸೀಮಿತವಾದವುಗಳಲ್ಲ. ಪುರಾಣಗಳಿಂದ ಆರಂಭಿಸಿ ಆಧುನಿಕ ಕಾಲದ ರಾಷ್ಟ್ರೀಯ- ಅಂತಾರಾಷ್ಟ್ರೀಯ ಬರಹಗಾರರ ಸಾಹಿತ್ಯವು ಜನರಲ್ಲಿ ವಿಷಯಗಳನ್ನು ನೋಡುವ, ಸಮಸ್ಯೆಗಳನ್ನು ಅರಿಯುವ, ಸಂದಿಗ್ಧಗಳನ್ನು ಪರಿಹರಿಸಲು ಬೇಕಿರುವ ಸಾಮಾಜೋ-ರಾಜಕೀಯ ಮೌಲ್ಯಗಳನ್ನು ಬಿತ್ತುವ ಕಾರ್ಯವನ್ನು ಮಾಡಿವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next