Advertisement

ಲೈಂಗಿಕ ಶೋಷಿತರ ಮಕ್ಕಳಿಗೆ ಆದ್ಯತೆ

03:51 PM Sep 20, 2019 | Naveen |

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ವಿವಿಧ ಕೋರ್ಸ್‌ಗಳಲ್ಲಿ ಇನ್ಮುಂದೆ ಲೈಂಗಿಕ ಶೋಷಿತರ ಮಕ್ಕಳಿಗೆ ಸೀಟ್ ಕಾಯ್ದಿರಿಸಲು ತೀರ್ಮಾನಿಸಲಾಗಿದೆ. ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಲ್ನಲ್ಲಿ ನಡೆದ ವಿದ್ಯಾ ವಿಷಯಕ ಪರಿಷತ್‌ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕುವೆಂಪುವಿವಿ ಕುಲಪತಿ ಪ್ರೊ| ಬಿ.ಪಿ ವೀರಭದ್ರಪ್ಪ ತಿಳಿಸಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾ ವಿಷಯಕ ಪರಿಷತ್‌ ಸಾಮಾನ್ಯ ಸಭೆಯಲ್ಲಿ ಹಲವು ವಿಷಯಗಳು ಚರ್ಚೆಯಾಗಿದ್ದು ಅದರಲ್ಲಿ ಪ್ರಮುಖವಾಗಿ ಲೈಂಗಿಕ ಶೋಷಿತರ ಮಕ್ಕಳಿಗೆ ವಿವಿಯ ಪ್ರತಿ ವಿಭಾಗದ‌ಲ್ಲಿ ಒಂದು ಸೀಟು ಕಾಯ್ದಿರಿಸಲಾಗುವುದು ಎಂದರು.

ಕಲಾ ವಿಭಾಗದ ಕೆಲವೊಂದು ಕೋರ್ಸ್‌ಗಳಿಗೆ ನಿಗದಿಗಿಂತ ಕಡಿಮೆ ದಾಖಲಾತಿ ಇರುವುದನ್ನು ಮನಗಂಡು ಅಂಕ ಗಳಿಕೆ ಪ್ರಮಾಣ ಕಡಿಮೆ ಮಾಡಲು ತೀರ್ಮಾನಿಸಲಾಗಿದೆ. ಇದರಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೇ.40ಅಂಕ ಗಳಿಸಿದ್ದರೂ ವಿವಿಯಲ್ಲಿ ಪ್ರವೇಶ ಪಡೆಯಬಹುದಾಗಿದೆ. ಈ ಮೊದಲು ಯುಜಿಯಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಲ್ಲಿ ಶೇ.45 ಅಂಕ, ಪ್ರವರ್ಗ-1ರ ವಿದ್ಯಾರ್ಥಿಗಳಲ್ಲಿ ಶೇ.40 ಅಂಕ ಹಾಗೂ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಶೇ.35 ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಮಾತ್ರ ದಾಖಲಾತಿ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಪದವಿ ಬಯಸುವ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಶೇ. 40 ಕನಿಷ್ಠ ಅಂಕಗಳ ಅರ್ಹತೆ ನಿಗದಿಗೊಳಿಸಲಾಗಿದೆ. ಉಳಿದಂತೆ ಯಥಾ ಸ್ಥಿತಿ ಮುಂದುವರಿಯಲಿದೆ. ಎಂಸಿಎ, ಎಂಬಿಎ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಯಮಾವಳಿಗಳು ಅನ್ವಯವಾಗಲಿದ್ದು, ಪ್ರಸ್ತುತ ತೀರ್ಮಾನ ಅನ್ವಯವಾಗುವುದಿಲ್ಲ ಎಂದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕಡೂರು ಹಾಗೂ ಚಿಕ್ಕಮಗಳೂರು ಸ್ನಾತಕೋತ್ತರ ಕೇಂದ್ರದಂತೆ ಶಿವಮೊಗ್ಗದ ಶಿಕಾರಿಪುರದಲ್ಲೂ ಹೊಸದಾಗಿ ಸ್ನಾತಕೋತ್ತರ ಕೇಂದ್ರ ಆರಂಭಿಸುವ ಬಗ್ಗೆ ಚರ್ಚೆಯಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಅಲ್ಲಿ ಕೇಂದ್ರ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ಜವಾಬ್ದಾರಿ ಹೆಚ್ಚಿದೆ: ಕೆಎಸ್‌ಯುಆರ್‌ಎಫ್‌ ರ್‍ಯಾಂಕಿಂಗ್‌ನಲ್ಲಿ ಕುವೆಂಪು ವಿವಿಗೆ ಸರಕಾರಿ ವಿವಿಗಳಲ್ಲಿ ಮೊದಲನೇ ಸ್ಥಾನ ಸಿಕ್ಕಿರುವುದು ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಈ ಬಗ್ಗೆ ನಮ್ಮ ಅಧಿಕಾರಿ ವರ್ಗ, ಅಧ್ಯಾಪಕ ವರ್ಗ ಸಭೆ ನಡೆಸಿ ಶಪಥ ಮಾಡಿದ್ದೇವೆ. ಖಾಸಗಿ ಮತ್ತು ಸರಕಾರಿ ವಿವಿಗಳಲ್ಲಿ ನಾವು ಈ ವರ್ಷ ಮೂರನೇ ರ್‍ಯಾಂಕಿಂಗ್‌ನಲ್ಲಿದ್ದು ಮುಂದಿನ ವರ್ಷ ಎರಡು ಅಥವಾ ಮೊದಲನೇ ಸ್ಥಾನಕ್ಕೆ ಬರಲು ತೀರ್ಮಾನಿಸಿದ್ದೇವೆ. ನಮಗೆ ಇನ್ನೋವೇಶನ್‌ ವಿಭಾಗದಲ್ಲಿ ನಮಗೆ 2 ಸ್ಟಾರ್‌ ಸಿಕ್ಕಿದೆ. ಈ ವಿಭಾಗದಲ್ಲಿ ನಾವು ಹಿಂದುಳಿದಿದ್ದೇವೆ. ಅದನ್ನು ನಾವು ಸರಿಪಡಿಸಿಕೊಳ್ಳುತ್ತೇವೆ. ಈ ಸಾಧನೆಗೆ ಹಿಂದಿನ ಕುಲಪತಿ, ಕುಲಸಚಿವರೆಲ್ಲರೂ ಕಾರಣರಾಗಿದ್ದಾರೆ ಎಂದರು.

Advertisement

ಸಮಸ್ಯೆ ಬಗೆಹರಿಯಲಿದೆ: ಅರಣ್ಯ ಇಲಾಖೆ ಮತ್ತು ಕುವೆಂಪು ವಿವಿ ನಡುವೆ ಇರುವ ವ್ಯಾಜ್ಯ ಬಗ್ಗೆ ಉತ್ತರಿಸಿದ ಅವರು, ಅರಣ್ಯ ಇಲಾಖೆ 11 ಕೋಟಿ ಹಣ ಕಟ್ಟಲು ರೆಡಿ ಇದ್ದೇವೆ. ಬಾಕಿ 4 ಕೋಟಿ ರಾಜ್ಯ ಸರಕಾರ ಕೊಡಲು ಒಪ್ಪಿದೆ. ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದರು.

ಕುಲಪತಿ ಪ್ರೊ| ಬಿ.ಪಿ ವೀರಭದ್ರಪ್ಪ, ಕುಲಸಚಿವ ಪ್ರೊ| ಎಸ್‌. ಎಸ್‌. ಪಾಟೀಲ್, ಪರೀಕ್ಷಾಂಗ ಕುಲಸಚಿವ ಪ್ರೊ| ಎಂ. ವೆಂಕಟೇಶ್ವರಲು, ಹಣಕಾಸು ಅಧಿಕಾರಿ ಪ್ರೊ| ಹಿರೇಮಣಿ ನಾಯ್ಕ ಹಾಗೂ ವಿದ್ಯಾವಿಷಯಕ ಪರಿಷತ್‌ ಸದಸ್ಯರು ಸಭೆಯಲ್ಲಿ ಇದ್ದರು.

ಪ್ರಧಾನಿ ಪ್ರಶಂಸೆ
ಕೆಎಸ್‌ಯುಆರ್‌ಎಫ್‌ ರ್‍ಯಾಂಕಿಂಗ್‌ ಬಗ್ಗೆ ಖುದ್ದು ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆ ಕಾರ್ಯವನ್ನು ಬೇರೆ ರಾಜ್ಯಗಳೂ ಅಳವಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ. ರ್‍ಯಾಂಕಿಂಗ್‌ಗೆ ಅಳವಡಿಸಿಕೊಂಡಿರುವ ಮಾನದಂಡಗಳು ಚೆನ್ನಾಗಿವೆ. ಯಾವುದೇ ವಿಶ್ವವಿದ್ಯಾಲಯಗಳು ಈ ಬಗ್ಗೆ ಚಕಾರ ಎತ್ತಿಲ್ಲ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next