Advertisement
ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಯು ಶಿವಮೊಗ್ಗ ನಗರದ ಊರ ಹಬ್ಬ ಎಂದು ಖ್ಯಾತಿ ಪಡೆದಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಕೊರೋನ ಹಿನ್ನೆಲೆ ಈ ಭಾರಿ ನಿಗದಿಗಿಂತಲೂ ಒಂದು ತಿಂಗಳು ತಡವಾಗಿ ಜಾತ್ರೆ ನಡೆಸಲಾಗುತ್ತಿದೆ. ಈ ನಡುವೆ ಮಳಿಗೆ ಹಂಚಿಕೆ ವಿವಾದ ಸೃಷ್ಟಿಯಾಗಿದೆ.
Related Articles
Advertisement
ಇನ್ನು, ಜಾತ್ರೆ ಹೊಸ್ತಿಲಲ್ಲಿ ವಿವಾದ ಹುಟ್ಟಿಕೊಂಡಿದ್ದರಿಂದ ಎಚ್ಚೆತ್ತುಕೊಂಡ ಕೋಟೆ ಶ್ರೀ ಮಾರಿಕಾಂಬ ದೇವಿ ಸಮಿತಿ ಪತ್ರಿಕಾಗೋಷ್ಠಿ ಕರೆದು, ತಮಗೂ ವಿವಾದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
‘ಮಳಿಗೆ ಹರಾಜು ಸಂಬಂಧ ನಾಗರಾಜು ಎಂಬವವರು ಟೆಂಡರ್ ಪಡೆದಿದ್ದಾರೆ. 9.01 ಲಕ್ಷ ರೂ.ಗೆ ಟೆಂಡರ್ ನೀಡಿದ್ದೇವೆ. ಅವರು ಮಳಿಗೆಗಳನ್ನ ಯಾರಿಗೆ ಬೇಕಿದ್ದರೂ ಕೊಡಬಹುದು. ಇದಕ್ಕೂ ದೇವಸ್ಥಾನದ ಆಡಳಿತ ಮತ್ತು ಜಾತ್ರೆ ಸಮಿತಿಗೂ ಸಂಬಂಧವಿಲ್ಲ’ ಎಂದು ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ತಿಳಿಸಿದರು.
‘ಜೀವ ಬೆದರಿಕೆ ಒಡ್ಡಿದ್ದಾರೆ’
ಇನ್ನು, ಟೆಂಡರ್ ವಿಚಾರವಾಗಿ ಜೀವ ಬೆದರಿಕೆ ಒಡ್ಡಿರುವ ಆರೋಪವು ಕೇಳಿ ಬಂದಿದೆ. ‘ಈ ಮೊದಲು ಚಿಕ್ಕ ಎಂಬುವವರು ಟೆಂಡರ್ ಪಡೆದಿದ್ದರು. ಅವರಿಗೆ ಕೆಲವರು ಜೀವ ಬೆದರಿಕೆ ಒಡ್ಡಿದ್ದರಿಂದ ಟೆಂಡರ್ ಹಿಂತಿರುಗಿಸಿದ್ದಾರೆ. ಆಮೇಲೆ ನಾಗರಾಜು ಎಂಬುವವರು ಬಂದು ಟೆಂಡರ್ ಪಡೆದುಕೊಂಡಿದ್ದಾರೆ’ ಎಂದು ಎಸ್.ಕೆ.ಮರಿಯಪ್ಪ ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಹೆಲ್ಮೆಟ್‌ನಂತೆ ಸುರಕ್ಷತೆಗಾಗಿ ಹಿಜಾಬ್ ಧಾರಣೆ : ಜಮೀರ್ ಅಹ್ಮದ್
ದೇಗುಲದ ಸುತ್ತಮುತ್ತ ಅಂಗಡಿಗಳಿಲ್ಲ
ಈ ಭಾರಿ ಕೋಟೆ ಮಾರಿಕಾಂಬ ದೇವಿ ದೇವಸ್ಥಾನದ ಸುತ್ತಮತ್ತ ಮಳಿಗೆ ಹಾಕಲು ಅವಕಾಶವಿಲ್ಲ. ಪೊಲೀಸ್ ಇಲಾಖೆ ಸೂಚನೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ‘ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊಳೆ ಬಸ್ ಸ್ಟಾಪ್’ಗೆ ತೆರಳುವ ರಸ್ತೆ, ಎಸ್.ಪಿ. ರಸ್ತೆ, ದೇವಸ್ಥಾನದ ಹಿಂಭಾಗ ಕೃಷ್ಣ ಕೆಫೆಗೆ ಹೋಗುವ ರಸ್ತೆಯಲ್ಲಿ ಮಳಿಗೆಗಳನ್ನು ಹಾಕಲು ಅವಕಾಶ ಕಲ್ಪಿಸಲಾಗಿದೆ. ಆದರೆ ದೇವಸ್ಥಾನದ ಸಮೀಪ ಮಳಿಗೆ ಹಾಕದಂತೆ ಷರತ್ತು ವಿಧಿಸಲಾಗಿದೆ’ ಎಂದು ಎಸ್.ಕೆ.ಮರಿಯಪ್ಪ ಸ್ಪಷ್ಟಪಡಿಸಿದರು.
ಪರ, ವಿರೋಧದ ಚರ್ಚೆ
ಇನ್ನು, ಮಾರಿಕಾಂಬ ಜಾತ್ರೆಯಲ್ಲಿ ಹಿಂದೂ ಧರ್ಮಿಯರ ಅಂಗಡಿಗಳಿಗೆ ಮಾತ್ರ ಅವಕಾಶ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ವೈರಲ್ ಆಗಿದೆ. ಇದರ ಪರ ಮತ್ತು ವಿರೋಧ ಚರ್ಚೆಗಳು ಶುರುವಾಗಿದೆ. ಈ ನಡುವೆ ಮರಿಕಾಂಬ ಜಾತ್ರೆ ಅಂಗವಾಗಿ ಸರ್ವ ಧರ್ಮಿಯರಿಗೂ ಲಷ್ಕರ್ ಮೊಹಲ್ಲಾದಲ್ಲಿ ಅಂಗಡಿ ಹಾಕಲು ಅವಕಾಶ ನೀಡಲಾಗುತ್ತದೆ ಎಂಬ ಪೋಸ್ಟರ್ ವೈರಲ್ ಆಗಿದೆ.
‘ಸರ್ವ ಧರ್ಮಿಯರಿಂದ ಆರಾಧನೆ’
ಪ್ರಸಿದ್ಧ ಕೋಟೆ ಮಾರಿಕಾಂಬ ದೇವಿ ದೇವಸ್ಥಾನಕ್ಕೆ ಶಿವಮೊಗ್ಗದ ಸರ್ವ ಧರ್ಮಿಯರು ನಡೆದುಕೊಳ್ಳುತ್ತಾರೆ. ‘ದೇವಸ್ಥಾನಕ್ಕೆ ಮುಸ್ಲಿಂ ಸಮುದಾಯದವರು ನಡೆದುಕೊಳ್ಳುತ್ತಾರೆ. ಜಾತ್ರೆಯ ಸಿದ್ಧತೆಯ ಹಲವು ಕೆಲಸಗಳಲ್ಲಿ ಅವರು ತೊಡಗಿಸಿಕೊಳ್ಳುತ್ತಾರೆ. ಕ್ರೈಸ್ತ ಸಮುದಾಯದ ನಿಯೋಗ ದೇವಸ್ಥಾನಕ್ಕೆ ಭೇಟಿ ನೀಡಿತ್ತು. ವಾಹನಗಳ ಪಾರ್ಕಿಂಗ್’ಗೆ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚೆ ಮಾಡಿದ್ದಾರೆ. ಆದರೆ ಕೆಲವರು ಗೊಂದಲ ಸೃಷ್ಟಿ ಮಾಡಿದ್ದಾರೆ. ಜಾತ್ರೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬಹುದು, ಎಲ್ಲರೂ ದೇವಿಯ ಪೂಜೆ ಮಾಡಬಹುದು’ ಎಂದು ಮಾರಿಕಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಸಷ್ಟಪಡಿಸಿದ್ದಾರೆ.
ವದಂತಿಗೆ ಕವಿಗೊಡಬೇಡಿ
ಊರ ಜಾತ್ರೆಯನ್ನು ಎಲ್ಲರೂ ಖುಷಿಯಿಂದ ಮಾಡಬೇಕು. ಯಾವುದೆ ವದಂತಿಗೂ ಕವಿಗೊಡಬೇಡಿ ಎಂದು ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಎನ್.ಮಂಜುನಾಥ್ ಮನವಿ ಮಾಡಿದ್ದಾರೆ.
ಈ ನಡುವೆ ಕೋಟೆ ಮಾರಿಕಾಂಬ ದೇವಿ ಜಾತ್ರೆಯ ಕೊನೆಯ ಹಂತದ ಸಿದ್ಧತೆಗಳು ನಡೆಯುತ್ತಿವೆ. ಮಾರ್ಚ್ 22ರಿಂದ ಜಾತ್ರೆ ನಡೆಯಲಿದೆ. ಹಿಂದಿನ ಹಾಗೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಇರಲಿವೆ.