ಶಿವಮೊಗ್ಗ: ನಗರದಲ್ಲಿ ಶಿಥಿಲಗೊಂಡಿರುವ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಕಟ್ಟಡಗಳ ದುರಸ್ತಿಗಾಗಿ ಶಾಸಕ ಕೆ.ಎಸ್. ಈಶ್ವರಪ್ಪ ಅವರ ಒತ್ತಾಯದ ಮೇರೆಗೆ ಜೂ.21 ಅಥವಾ 24ರಂದು ಪಾದಯಾತ್ರೆ ಮೂಲಕ ದಾನಿಗಳಿಂದ ನಿಧಿ ಸಂಗ್ರಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ. ತಮ್ಮಣ್ಣ ಒಪ್ಪಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯಲ್ಲಿ ಬಹಳಷ್ಟು ಸರಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿರುವ ಸಂಗತಿ ಚರ್ಚೆಗೆ ಬಂದು ಅಂತಿಮವಾಗಿ ಪಾದಯಾತ್ರೆ ಮೂಲಕ ದಾನಿಗಳಿಂದ ನಿಧಿ ಸಂಗ್ರಹಿಸಲು ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಹಿಂದಿನ ತ್ತೈಮಾಸಿಕ ಕೆಡಿಪಿ ಸಭೆ ನಡವಳಿಯ ಅನುಪಾಲನಾ ವರದಿ ಮೇಲೆ ನಡೆಸಿದ ಚರ್ಚೆ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಈಶ್ವರಪ್ಪ ಅವರು, ‘ಶಿಥಿಲಗೊಂಡಿರುವ ಶಾಲೆ ಕಟ್ಟಡಗಳ ದುರಸ್ತಿಗೆ ಅಗತ್ಯವಾದಷ್ಟು ಅನುದಾನವನ್ನು ಸರಕಾರ ಬಿಡುಗಡೆ ಮಾಡುತ್ತಿಲ್ಲ. ಅತಿವೃಷ್ಟಿ ಹಾನಿ ಪರಿಹಾರದಲ್ಲಿ ಗರಿಷ್ಠ 1.50 ಲಕ್ಷ ರೂ.ಗಳಿಗಿಂತ ಅಧಿಕ ವೆಚ್ಚ ನೀಡಲು ಸಾಧ್ಯವಿಲ್ಲವೆಂದು ಡಿಸಿ ಹೇಳುತ್ತಾರೆ. ಮಕ್ಕಳು, ಶಿಕ್ಷಕರು ಜೀವ ಭಯದಲ್ಲಿದ್ದಾರೆ. ಶಾಲೆ ಕಟ್ಟಡ ದುರಸ್ತಿಗೆ ದಾನಿಗಳು ದಾನ ನೀಡಲು ಸಿದ್ಧರಿದ್ದಾರೆ. ಜಿಲ್ಲೆಯ ಎಲ್ಲ ಶಾಲೆಗಳನ್ನು ಇದೇ ಮಾದರಿಯಲ್ಲಿ ದುರಸ್ತಿ ಮಾಡಬಹುದು. ನಗರವನ್ನೇ ಮಾದರಿಯಾಗಿಟ್ಟುಕೊಳ್ಳೋಣ. ನಿಮ್ಮ ಜತೆಗೆ ನಾವೂ ನಿಧಿ ಸಂಗ್ರಹಕ್ಕೆ ಬರುತ್ತೇವೆ. ಇಂದೇ ದಿನಾಂಕ ನಿಗದಿಪಡಿಸಿ, ಇಲ್ಲವಾದರೆ ಮುಂದಿನ ಕೆಡಿಪಿಗೆ ನಾನು ಬರುವುದಿಲ್ಲ’ ಎಂದು ಪಟ್ಟು ಹಿಡಿದರು. ಈಶ್ವರಪ್ಪ ಅವರ ಒತ್ತಾಸೆಗೆ ಮಣಿದ ಸಚಿವರು ಜೂ.21 ಅಥವಾ 24ರಂದು ಕಾರ್ಯಕ್ರಮ ನಿಗದಿಪಡಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗವು ನಡೆಸುತ್ತಿರುವ ಕಾಮಗಾರಿಗಳು ಹಲವು ವರ್ಷಗಳಿಂದ ಕುಂಟುತ್ತಾ ನಡೆಯುತ್ತಿರುವ ಬಗ್ಗೆ ಎಲ್ಲ ಶಾಸಕರು ಸಚಿವರ ಗಮನ ಸೆಳೆದರು. ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಗ್ರಾಮೀಣ ಕುಡಿವ ನೀರು ಯೋಜನೆಗಳು ಏಳೆಂಟು ವರ್ಷಗಳಿಂದ ನಡೆಯುತ್ತಲೇ ಇವೆ. ಒಂದು ಹನಿ ನೀರು ಹರಿಯದಿದ್ದರೂ ಯೋಜನೆ ಪೂರ್ಣವಾಗಿ ಹಸ್ತಾಂತರಿಸಲಾಗಿದೆ ಎಂದು ವರದಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗೆ ಇನ್ನೊಂದು ವಾರದೊಳಗೆ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಎಲ್ಲ ಕುಡಿವ ನೀರು ಯೋಜನೆಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ಜಲಧಾರೆ ಯೋಜನೆಯಲ್ಲಿ ನದಿಯಲ್ಲಿನ ಹೆಚ್ಚುವರಿ ನೀರನ್ನು ಕೆರೆಗಳಿಗೆ ಹರಿಸುವುದರ ಜತೆಗೆ ಕುಡಿಯುವುದಕ್ಕೂ ಬಳಸುವಂತಹ ವಿವಿಧೋದ್ದೇಶ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದಕ್ಕಾಗಿ ಸರಕಾರ 50 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿ ತಮ್ಮ ಭಾಗದಲ್ಲಿ ಜಾರಿಗೊಳಿಸಬಹುದಾದ ಯೋಜನೆಗಳ ಪಟ್ಟಿ ಮಾಡಿ ಸಲ್ಲಿಸುವಂತೆ ಸಚಿವರು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಬಹಳಷು ಇಲಾಖೆಗಳು ಖಾಸಗಿ ಕಟ್ಟಡದಲ್ಲಿದ್ದು ಬಾಡಿಗೆ ಕಟ್ಟುತ್ತಿವೆ. ಕೆಲವೆಡೆ ಸರಕಾರಿ ಕಟ್ಟಡಗಳು ಖಾಲಿ ಬಿದ್ದಿವೆ. ಅದಂತಹ ಕಟ್ಟಡಗಳಿಗೆ ಖಾಸಗಿ ಕಟ್ಟಡದಲ್ಲಿರುವ ಇಲಾಖೆ ಕಚೇರಿಗಳನ್ನು ಸ್ಥಳಾಂತರಿಸಬೇಕೆಂದು ಶಾಸಕರು ಆಗ್ರಹಿಸಿದರು. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ಸಚಿವರು, ಸರಕಾರಿ ಇಲಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಶಾಸಕರಿಗೆ ಸಲಹೆ ನೀಡಿದರು. ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ. ಕಾಂತೇಶ್ ಮಾತನಾಡಿ, ಕಳೆದ ವರ್ಷ ಶಾಲೆ ಮಕ್ಕಳಿಗೆ ಕೊಟ್ಟ ಸೈಕಲ್ಗಳು ಕಳಪೆಯಾಗಿದ್ದವು. ಕಳೆದ ವರ್ಷದಂತಹ ಸೈಕಲ್ಗಳು ಮತ್ತೆ ಬಂದಲ್ಲಿ ಅವುಗಳನ್ನು ಹಂಚಿಕೆ ಮಾಡುವುದಿಲ್ಲ. ಐಎಸ್‌ಐ ಗುಣಮಟ್ಟದ ಸೈಕಲ್ಗಳನ್ನು ವಿತರಣೆ ಮಾಡಬೇಕೆಂದು ಆಗ್ರಹಿಸಿದರು. ಸಚಿವರು ಇದರ ಬಗ್ಗೆ ಸಿಎಂ ಅವರೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.