Advertisement

ಕನಸಲೂ ಕಾಡುವ ಕವಲೇ ದುರ್ಗ

01:19 PM Nov 22, 2018 | |

ಅದು ಬೇಸಗೆ ಸಮಯ. ದಿನನಿತ್ಯದ ಕೆಲಸದ ಜಂಜಾಟಕ್ಕೆ ವಿಶ್ರಾಂತಿ ನೀಡಿ ಪ್ರವಾಸ ಕೈಗೊಳ್ಳುವ ಬಗ್ಗೆ ಯೋಚಿಸತೊಡಗಿದೆವು. ಹಲವಾರು ಸ್ಥಳಗಳ ಬಗ್ಗೆ ಚರ್ಚಿಸಿ ಕೊನೆಗೆ ನಾವು ಆಯ್ಕೆ ಮಾಡಿಕೊಂಡ ಸ್ಥಳ ಶಿವಮೊಗ್ಗದಲ್ಲಿರುವ ಕವಲೇದುರ್ಗದಕೋಟೆ.

Advertisement

ದೀರ್ಘ‌ ಪ್ರಯಾಣ
6 ಮಂದಿಯ ನಮ್ಮ ತಂಡ ಬೆಳಗ್ಗೆ 7-15ಕ್ಕೆ ಸರಿಯಾಗಿ ಗೆಳೆಯನ ಕಾರು ಹತ್ತಿ ಮಂಗಳೂರಿನಿಂದ ಸುಮಾರು 133 ಕಿ.ಮೀ. ದೂರದಲ್ಲಿರುವ ಕವಲೇದುರ್ಗಕೋಟೆಗೆ ಹೊರಟೆವು. ದೀರ್ಘ‌ಕಾಲದ ಪ್ರಯಾಣದ ಅನಂತರ ಸಮಯ 10-15ಕ್ಕೆ ಕೋಟೆಯ ಮುಂದೆ ನಾವೆಲ್ಲರೂ ಹಾಜರಾಗಿದ್ದೆವು.

ಸೂರ್ಯಾಸ್ತಮಾನ
ಅನಂತರ ಅಲ್ಲಿಯೇ ಸ್ವಲ್ಪ ಹೊತ್ತು ಕಳೆದು, ಕೋಟೆಯ ಒಳಕ್ಕೆ ಹೋಗಿ ಅಲ್ಲಿನ ಸೌಂದರ್ಯವನ್ನು ಅನುಭವಿಸಿದೆವು. ಗೆಳೆಯರೊಂದಿಗೆ ಕೂಡಿ ಹತ್ತಾರು ಆಟಗಳನ್ನು ಆಡಿ ತಮ್ಮ ಬಾಲ್ಯವನ್ನು ಮತ್ತೊಮ್ಮೆ ನೆನಪಿಸಿಕೊಂಡೆವು. ಸಂಜೆಯ ಸೂರ್ಯಾಸ್ತಮಾನವನ್ನು ಕೋಟೆಯ ಮಧ್ಯೆ ನಿಂತು ನೋಡಿದ ಅನುಭವ ಮನೋಹರವಾಗಿತ್ತು.

ಕೋಟೆಯ ವಿಶೇಷತೆ
ಪ್ರಕೃತಿ ರಮಣೀಯ, ಇತಿಹಾಸ ಸ್ಮರಣೀಯ ಕವಲೇ ದುರ್ಗಕೋಟೆ ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳಲ್ಲಿ ಒಂದು. ಹೆಜ್ಜೆ ಮೇಲೆ ಹೆಜ್ಜೆಯಿಟ್ಟರೂ ಸದ್ದು ಪ್ರತಿಧ್ವನಿಸುವಷ್ಟು ಪ್ರಶಾಂತ ಹಾಗೂ ಮೌನದ ಪರಿಸರ. ಹಸಿರನ್ನು ಕಣ್ತುಂಬಿಕೊಳ್ಳುವುದು ಮಾತ್ರವಲ್ಲ ಇತಿಹಾಸದ ಅರಿವನ್ನು ಮನದುಂಬಿಕೊಳ್ಳಬಹುದು. ಕವಲೇದುರ್ಗದ ಕೋಟೆಯ ತುತ್ತತುದಿಯಲ್ಲಿ ನಿಂತು ಮೇಲೆ ನೋಡಿದರೆ ಕಣ್ಣಿಗೆ ಕಾಣುವ ಕೊನೆ ಇಲ್ಲದ ಆಕಾಶ, ಬಿಸಿಲಿಗೆ ಪಳಪಳ ಹೊಳೆಯುತ್ತಿದ್ದ ವರಾಹಿ ನೀರಿನ ಚೆಲುವು, ಹಾಗೆ ಹೊರಳಿ ನೋಡಿದರೆ ಕಾಣುವ ಕುಂದಾದ್ರಿ ಬೆಟ್ಟ ನಮ್ಮ ಮನಸ್ಸನ್ನು ಸರೆ ಹಿಡಿದಿತ್ತು. ಇಲ್ಲಿನ ಆಕರ್ಷಣೆಗಳಲ್ಲಿ ತಿಮ್ಮಣ್ಣನಾಯಕನ ಕೆರೆಯೂಒಂದು. 18 ಎಕರೆ ವಿಸ್ತೀರ್ಣದ ಈ ಕೆರೆ, ಹಕ್ಕಿಗಳ ಚಿಲಿಪಿಲಿ ಕಲರವ, ಮೀನುಗಳ ಮುಳುಗಾಟದಿಂದ, ಬೆಳ್ಳಕ್ಕಿಯ ಹಿಂಡಿನಿಂದ ಗಮನ ಸೆಳೆಯಿತು. ಕರೆಯ ಮೇಲಿನಿಂದ ತೇಲಿ ಬರುವ ತಂಗಾಳಿಗೆ ನಾವೆಲ್ಲರೂ ಮೈಯೊಡ್ಡಿ ನಿಂತು ಜಲಚರಗಳ ದನಿ ಕೇಳಿಸಿಕೊಂಡು ಮುಂದಕ್ಕೆ ನಡೆದೆವು.

ಮನ ಮೋಹಕ
ಕೋಟೆಯ ತುದಿಯಲ್ಲಿನ ಒಂದು ಬೃಹತ್‌ ಬಂಡೆಯ ಮೇಲಿನ ಶಿವನ ಗುಡಿ ಪೂಜ್ಯಾರ್ಹವಾಗಿದ್ದು ಗಾಳಿಯ ಹೊಡೆತಕ್ಕೂ ಮುಕ್ಕಾಗದೇ ಗಟ್ಟಿಯಾಗಿತ್ತು. ಪ್ರಕೃತಿಯ ವೈಪರಿತ್ಯಕ್ಕೆ ಶಿಲಾ ಸ್ಮಾರಕಗಳು ನಾಶವಾಗಿದ್ದಕ್ಕಿಂತಲೂ, ದಾಳಿಯಲ್ಲಿಯೇ ನಾಶವಾದೆವು ಎಂದು ಅಲ್ಲಿನ ಕಲ್ಲು ಕಲ್ಲುಗಳು ಹೇಳುತ್ತಿತ್ತು. ಪಶ್ಚಿಮ ಘಟ್ಟಗಳ ಸೌಂದರ್ಯವನ್ನೆಲ್ಲ ಮೀರಿ ನಿಂತಿದ್ದ ಕವಲೇದುರ್ಗ ದುರ್ಗಮವಾಗಿರದೆ ಮನೋಹರವಾಗಿತ್ತು.

Advertisement

ಇತಿಹಾಸ
ಕವಲೇದುರ್ಗ ತೀರ್ಥಹಳ್ಳಿ ತಾಲೂಕಿನ ಹಸುರು ಸಿರಿಯಿಂದ ಸಮೃದ್ಧವಾದ ಮೋಹಕ ತಾಣ. ತೀರ್ಥಹಳ್ಳಿ-ಸಾಲೂರು ಮಾರ್ಗವಾಗಿ ದಟ್ಟ ಕಾಡುಗಳಿಂದ ಕೂಡಿದ ಸಹ್ಯಾದ್ರಿ ಶ್ರೇಣಿಯ ಮಡಿಲಲ್ಲಿ ಸಾಗಿದಾಗ ಸಿಗುತ್ತದೆ. ಇದೊಂದು ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ನೈಸರ್ಗಿಕ ಸುಂದರತಾಣ. ಕವಲೇದುರ್ಗಎನ್ನುವುದು ಕಾವಲು ದುರ್ಗ ಎಂಬ ಹೆಸರಿನ ಅಪಭ್ರಂಶ. ಕರ್ನಾಟಕದ ಇತಿಹಾಸದಲ್ಲಿ ನಾಗರ ಖಂಡ ಬನವಾಸಿ ನಾಡೆಂದು ಖ್ಯಾತಿಗೊಂಡಿದ್ದ ಮಲೆನಾಡು ಪ್ರದೇಶದ ಕವಲೇದುರ್ಗ ಒಂದು ಐತಿಹಾಸಿಕ ತಾಣ. 

ರೂಟ್‌ ಮ್ಯಾಪ್‌
·ಮಂಗಳೂರಿನಿಂದ-ಕವಲೇದುರ್ಗ ಕೋಟೆಗೆ ಸುಮಾರು 133 ಕಿ.ಮೀ. ದೂರ.
· ಇಲ್ಲಿಗೆ ಬಸ್ಸು ಸಂಚಾರ ಇಲ್ಲ; ಪ್ರವಾಸಿಗರು ಕಾರು, ಬೈಕ್‌ನಲ್ಲಿ ಹೋಗಬೇಕು.
· ಕೋಟೆಯ ಒಳಗಡೆ ಅಂದರೆ, ಹತ್ತಿರದಲ್ಲಿಯಾವುದೇ ಬಗೆಯ ತಿಂಡಿ-ಸಿನಿಸುಗಳು ಲಭ್ಯರುವುದಿಲ್ಲ.
· ಕೋಟೆಯಿಂದ ಸುಮಾರು 2ಕಿ.ಮೀ. ದೂರದಲ್ಲಿ ನೀರು, ಸ್ನಾಕ್ಸ್‌ ಸಹಿತ ತಿಂಡಿ ತಿನಿಸುಗಳು ಸಿಗುತ್ತವೆ.

 ಅಭಿಲಾಷ್‌ ಬಿ.ಸಿ.

Advertisement

Udayavani is now on Telegram. Click here to join our channel and stay updated with the latest news.

Next