Advertisement

ಸಾಹಿತ್ಯಕ್ಕಿದೆ ಅಪಾರ ಶಕ್ತಿ: ದತ್ತಾತ್ರಿ ಭಗವಾನ್‌

01:26 PM Jul 29, 2019 | Naveen |

ಶಿವಮೊಗ್ಗ: ಈ ಹಿಂದೆ ನಡೆದದ್ದು, ಈಗ ನಡೆಯುತ್ತಿರುವುದು ಹಾಗೂ ಮುಂದೆ ನಡೆಯುವುದನ್ನು ಸಮಾಜದೊಂದಿಗೆ ಸನ್ನಡತೆಯಿಂದ ತೆಗೆದುಕೊಂಡು ಹೋಗುವ ಶಕ್ತಿ ಸಾಹಿತ್ಯಕ್ಕಿದೆ ಎಂದು ನಿವೃತ್ತ ಉಪನ್ಯಾಸಕ ದತ್ತಾತ್ರಿ ಭಗವಾನ್‌ ಹೇಳಿದರು.

Advertisement

ನಗರದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಜಿ.ಎಸ್‌. ರಾಮಭಟ್ಟರ ಸಂಸ್ಮರಣೆ ಮತ್ತು ಪುಸ್ತಕ ಅವಲೋಕನ ಕಾಯರರ್ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿ.ಎಸ್‌. ರಾಮಭಟ್ಟ ಅವರೊಂದಿಗೆ ನಿಕಟ ಪರಿಚಯ ಹಾಗೂ ಸಾಹಿತ್ಯಿಕ ಸಂಬಂಧವಿತ್ತು. ನನಗೆ ತಿರುಗುವ ಹುಚ್ಚು ಹಾಗೂ ಬರೆಯುವ ಆಸಕ್ತಿ ಇತ್ತು. ಇದಕ್ಕೆ ಪೂರಕವಾಗಿ ಮಾರ್ಗದರ್ಶನ ನೀಡಿದರು ಎಂದರು.

ಜಿಲ್ಲೆಯ ಕವಲೇದುರ್ಗದ ಕುರಿತು ಸಂಶೋಧನಾ ಕೃತಿ ಬರೆದೆ. ಅದಕ್ಕೆ ಜಿ.ಎಸ್‌. ರಾಮಭಟ್ಟ ಅವರು ಕಾರಣ ಎಂದ ಅವರು, ಬೇರೆಯವರು ಸಂಶೋಧನೆ ಮಾಡಿರುವುದನ್ನೇ ತಮ್ಮ ಸಂಶೋಧನೆ ಎಂದು ಹೇಳುವವರು ಇದ್ದಾರೆ. ಹೆಸರು ಬಯಸದೆ ಕೆಲಸ ಮಾಡಿರುವವರು ಸಹ ಇದ್ದಾರೆ. ಈ ಇಬ್ಬರೊಂದಿಗೂ ಸಂಬಂಧ ಅನಿವಾರ್ಯವಾಗಿದೆ ಎಂದರು.

ಸಂಶೋಧನೆ ಕಠಿಣವಾದುದು. ಅದನ್ನು ಸುಲಭವಾಗಿ ಮಾಡಲು ಸಾಧ್ಯವಿಲ್ಲ. ನಿರಂತರ ಪರಿಶ್ರಮ, ಖುಷಿ ಸದೃಶ ಭಾವನೆ ಇದ್ದವರು ಸಾಹಿತ್ಯಕಾರರಾಗುತ್ತಾರೆ. ಸಾಹಿತ್ಯ ಸಂಶೋಧಕರು ಆಧಾರಗಳನ್ನು ಇಟ್ಟುಕೊಂಡು ಸತ್ಯ ಹೊರತರುವ ಕೆಲಸಗಳನ್ನು ಮಾಡುತ್ತಾರೆ. ಅಂತಹವರು ನಿಜವಾದ ಸಾಹಿತ್ಯಕಾರರು. ಈಗ ಜನರನ್ನು ದಾರಿತಪ್ಪಿಸುವ ಸಂಶೋಧನಾ ಸಾಹಿತಿಗಳಿದ್ದಾರೆ. ಅವರು ಸಮಾಜವನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಿದ್ದಾರೆ ಎಂದ ಅವರು, ಐತಿಹಾಸಿಕ ಸಂಶೋಧನೆಯನ್ನು ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಅದಕ್ಕೆ ಕಠಿಣ ಪರಿಶ್ರಮ ಅಗತ್ಯ ಎಂದರು. ಸಾಹಿತಿಗಳು ಹೊರ ತರುವ ಪುಸ್ತಕಗಳು ಇಂಟರ್‌ನೆಟ್‌ನಲ್ಲಿ ಸಿಗುತ್ತವೆ. ಅವುಗಳನ್ನು ಅನೇಕರು ಹಿಂಬಾಲಿಸುತ್ತಾರೆ. ಮಾರ್ಗದರ್ಶನ ಪಡೆಯುತ್ತಾರೆ. ಅಲ್ಲದೆ ನಾವು ಬರೆದಿರುವುದನ್ನು ಕುರಿತು ಪ್ರಶ್ನಿಸುತ್ತಾರೆ. ಹಾಗಾಗಿ ಆಧಾರ ಸಹಿತವಾದ ಸಂಶೋಧನೆ ಸಾಹಿತ್ಯವನ್ನು ಬರೆಯಬೇಕು ಎಂದು ಸಲಹೆ ನೀಡಿದರು.

Advertisement

ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಜನರು ಉತ್ತಮ ಕೆಲಸವನ್ನು ಮಾಡಿರುತ್ತಾರೆ. ಅಂತವರು ಬೇರೆ ಜನರಿಗೆ ಅಷ್ಟರ ಮಟ್ಟಿಗೆ ಪರಿಚಯವಾಗಿರುವುದಿಲ್ಲ. ಹೊಸ ಹೊಸ ವಿಷಯಗಳು ಬಂದಾಗ ಹಳೆಯದನ್ನು ಮರೆಯುವುದು ಸಹಜ. ಇಂತಹ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿರುವವನ್ನು ಗುರುತಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು. ಸಾಹಿತಿ ಹಾಗೂ ಸಂಶೋಧಕ ಅಂಬ್ರಯ್ಯಮಠ ಅವರು, ಜಯದೇವಪ್ಪ ಜೈನಕೇರಿ ಅವರ ಕೆಳದಿ ಅರಸರ ಯಶೋಗಾಥೆ ಪುಸ್ತಕ ಕುರಿತು ಮಾತನಾಡಿ, 215 ಪುಟಗಳ ಕೃತಿಯಲ್ಲಿ ಜಯದೇವಪ್ಪ ಜೈನಕೇರಿ ಅವರು ಸೊಗಸಾಗಿ ನಿರೂಪಣೆ ಮಾಡಿದ್ದಾರೆ. ಕವಿಗಳ ಬಗ್ಗೆ ವಿಸ್ತೃತವಾಗಿ ಬರೆದಿದ್ದಾರೆ. ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಬರೆದಿದ್ದಾರೆ. ಅಲ್ಲದೆ ಸಂಶೋಧನಾ ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಬರೆದಿದ್ದಾರೆ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಬಿ. ಶಂಕರಪ್ಪ ಮಾತನಾಡಿ, ಜಿ.ಎಸ್‌. ರಾಮಭಟ್ಟ ಅವರು ಅನೇಕ ಸಂಶೋಧನೆಗಳನ್ನು ಮಾಡಿದ್ದಾರೆ. ಆದರೆ ಅವರು ಮಾಡಿರುವ ಸಂಶೋಧನೆಗಳನ್ನು ಬೇರೆಯವರು ತಮ್ಮ ಹೆಸರಿನಲ್ಲಿ ಪ್ರಕಟಿಸಿಕೊಂಡಿದ್ದಾರೆ ಅದು ಬೇಸರದ ಸಂಗತಿ ಎಂದರು.

ಇತಿಹಾಸ ಸಂಶೋಧಕ ಮಧು ಗಣಪತಿರಾವ್‌ ಮಡೆನೂರು, ಸಾಹಿತಿಗಳಾದ ಕೆ. ಚೆನ್ನಪ್ಪ, ಎಂ.ಎನ್‌. ಸುಂದರರಾಜ್‌, ಲೇಖಕಿ ಎಸ್‌.ವಿ. ಚಂದ್ರಕಲಾ ಅರಸ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next