Advertisement

ಶಾಂತಿ ಕಾಪಾಡಿ, ಕರುನಾಡಿನ ಮಾನ ಉಳಿಸಿ

11:54 PM Feb 21, 2022 | Team Udayavani |

ಧಾರ್ಮಿಕ ಸಂಗತಿಗಳ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಪದೇ ಪದೆ ರಾಜ್ಯದಲ್ಲಿ ಸಂಘರ್ಷಗಳುಂಟಾಗುತ್ತಿವೆ. ಮೊದಲಿಗೆ ಹಿಜಾಬ್‌ ಧರಿಸುವಿಕೆಯ ವಿವಾದ, ಬಳಿಕ ಕೇಸರಿ ಧ್ವಜ ವಿವಾದ ಈಗ ಶಿವಮೊಗ್ಗದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತನ ಕೊಲೆ ವಿಚಾರದಲ್ಲಿ ಸಂಘರ್ಷಗಳಾಗುತ್ತಿವೆ. ಈ ಘಟನೆಗಳಿಂದಾಗಿ ಇಡೀ ದೇಶದ ಮುಂದೆ ರಾಜ್ಯ ತಲೆತಗ್ಗಿಸುವಂತಾಗಿದೆ.

Advertisement

ಆರಂಭದಿಂದಲೂ ಕರ್ನಾಟಕದ ಜನತೆ ಎಂದರೆ, ಶಾಂತಿಪ್ರಿಯರು ಎಂಬ ಮಾತಿತ್ತು. ಆದರೆ ಅನಂತರದ ದಿನಗಳಲ್ಲಿ ಕೋಮು ಸಂಘರ್ಷ ರಾಜ್ಯಕ್ಕೆ ಕಾಲಿಟ್ಟುಬಿಟ್ಟಿತು. ಇದು ರಾಜ್ಯದ ಯಾವುದೋ ಒಂದು ಮೂಲೆಯಲ್ಲಿ ಕಾಣಿಸಿಕೊಂಡು ಅಲ್ಲೇ ತಣ್ಣಗಾಗುವ ಪರಿಸ್ಥಿತಿಯೂ ಇತ್ತು. ಆದರೆ ಈಗ ಯಾವುದೇ ರೀತಿಯ ಸಂಘರ್ಷಗಳಿಗೆ ರಾಜಕೀಯ ಬಣ್ಣ ಸಿಕ್ಕಿ, ಇಂಥ ಘಟನೆಗಳು ರಾಜ್ಯವ್ಯಾಪಿ ಪಸರಿಸುತ್ತಿವೆ. ಯಾವುದೇ ನಾಗರಿಕ ಸಮಾಜದಲ್ಲಿ ಸಂಘರ್ಷಕ್ಕೆ ಅವಕಾಶವೇ ಇಲ್ಲ. ಯಾವುದೇ ಧರ್ಮೀಯರಾದರೂ ಸರಿ ಹೊಂದಿಕೊಂಡು ಬಾಳುವುದೇ ಮಾನವ ಧರ್ಮ. ಸಂಘರ್ಷ, ಸಾವು ನೋವುಗಳು ಯಾರಿಗೂ ಒಳ್ಳೆಯ ಹೆಸರನ್ನು ತಂದುಕೊಡುವುದಿಲ್ಲ. ಆದರೆ ಇಂಥ ಘಟನೆಗಳು ರಾಜಕೀಯವಾಗಿ ಒಂದಷ್ಟು ಲಾಭ ತಂದುಕೊಡಬಹುದು. ಹಾಗೆಂದು ರಾಜಕೀಯ ಲಾಭಕ್ಕಾಗಿ ಜನರ ನಡುವೆಯೇ ಕಿಚ್ಚು ಹಚ್ಚುವುದು ಸರ್ವಥಾ ಒಪ್ಪುವಂಥದ್ದಲ್ಲ.

ಈಗ ಆಗಿರುವ ಘಟನೆಯನ್ನೇ ತೆಗೆದುಕೊಂಡರೆ ರವಿವಾರ ಸಂಜೆವರೆಗೂ ಮಲೆನಾಡು ಭಾಗದ ಪ್ರಮುಖ ಜಿಲ್ಲೆ ಶಿವಮೊಗ್ಗ ಶಾಂತಿಯುತ

ವಾಗಿಯೇ ಇತ್ತು. ರಾತ್ರಿ ವೇಳೆಗೆ ಹಿಂದೂ ಸಂಘಟನೆಯೊಂದರ ಯುವಕ ಹರ್ಷ ಎಂಬಾತನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದರು. ಇದಾದ ಕೆಲವೇ ಹೊತ್ತಿನಲ್ಲಿ ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ಕಂಡು ಬಂದಿತು. ರವಿವಾರ ರಾತ್ರಿಯಿಂದ ಬೂದಿಮುಚ್ಚಿದ ಕೆಂಡಂದಂತಿದ್ದ ಶಿವಮೊಗ್ಗ, ಸೋಮವಾರ ಬೆಳಗ್ಗೆ ದಿಗ್ಗನೇ ಹೊತ್ತಿಕೊಂಡಿತು. ಅದರಲ್ಲೂ ಮೆಗ್ಗಾನ್‌ ಆಸ್ಪತ್ರೆಯಿಂದ ಮೃತ ಯುವಕನ ನಿವಾಸಕ್ಕೆ ಮೆರವಣಿಗೆಯಲ್ಲೇ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲಾಯಿತು. ಈ ವೇಳೆ ಕೆಲವು ದುಷ್ಕರ್ಮಿಗಳು, ದಾರಿಯಲ್ಲಿ ಸಿಕ್ಕ ಸಿಕ್ಕ ಅಂಗಡಿಗಳು, ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದರು. ಸಂಜೆ ವೇಳೆಗೆ ಪೊಲೀಸ್‌ ಜೀಪೊಂದಕ್ಕೆ ಬೆಂಕಿ  ಹಚ್ಚಿದರು.

ಹಿಂದೂ ಯುವಕ ಹರ್ಷನ ಕೊಲೆ ವಿಚಾರ ಈಗ ದೇಶಾದ್ಯಂತ ಸುದ್ದಿಯಾಗಿದೆ. ಶಿವಮೊಗ್ಗ ಹೊತ್ತಿ ಉರಿದದ್ದೂ ರಾಷ್ಟ್ರೀಯ ಸುದ್ದಿಯಾಗಿದೆ. ಕಳೆದ ಕೆಲವು ದಿನಗಳಿಂದ ಹಿಜಾಬ್‌ ಮತ್ತು ಕೇಸರಿ ಧ್ವಜ ವಿಚಾರ ಸಂಬಂಧ ಕೋಮು ಘರ್ಷಣೆಯಂಥ ಸುದ್ದಿಯಲ್ಲೇ ಇದ್ದ ರಾಜ್ಯ ಈಗ ಮತ್ತೂಂದು ಅಂಥದ್ದೇ ಸುದ್ದಿಗೆ ಕುಖ್ಯಾತಿ ಪಡೆದುಕೊಂಡಿತು.

Advertisement

ಇಂಥ ಸೂಕ್ಷ್ಮ ವಿಚಾರಗಳನ್ನು ನಿಭಾಯಿಸುವ ವಿಚಾರದಲ್ಲಿ ಸರಕಾರಗಳು ಮತ್ತು ವಿಪಕ್ಷಗಳು ತೀರಾ ಜಾಗ್ರತೆಯಿಂದ ಹೆಜ್ಜೆ ಇಡಬೇಕಾದ ಅನಿವಾರ್ಯ ಸ್ಥಿತಿ ಸದ್ಯದ ಮಟ್ಟಿಗಂತೂ ಇದ್ದೇ ಇದೆ. ಈ ಘಟನೆಯ ಆರೋಪಿಗಳನ್ನು ಬಂಧಿಸಿ ಕಾನೂನಿನಡಿ ಶೀಘ್ರ ಅಗತ್ಯ ಕ್ರಮ ಕೈಗೊಳ್ಳಬೇಕು. ಜಾಗತಿಕವಾಗಿ ಬೆಂಗಳೂರಿನ ಮೂಲಕ ಗುರುತಿಸಿಕೊಂಡಿರುವ ರಾಜ್ಯಕ್ಕೆ ಕೆಟ್ಟ ಹೆಸರು ಬರುವುದು ಬೇಡ. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು, ಇಂಥ ವಿಚಾರದಲ್ಲಿ ರಾಜಕೀಯ ಮಾಡದೇ ಬೇಗನೇ ಪರಿಸ್ಥಿತಿಯನ್ನು ಶಾಂತಗೊಳಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಆಗಷ್ಟೇ ರಾಜ್ಯದ ಮರ್ಯಾದೆ ಉಳಿಯಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next