Advertisement

ಬಿಸಿಲು ನಾಡಾದ ಮಲೆನಾಡು!

04:56 PM Apr 29, 2019 | Team Udayavani |

ಶಿವಮೊಗ್ಗ: ಇಲ್ಲಿಯ ಬಿಸಿಲು ಬಯಲು ಸೀಮೆ ಬಳ್ಳಾರಿ ಬಿಸಿಲನ್ನೂ ಮೀರಿಸುವಂತಿದೆ. ಕಳೆದ ಒಂದು ತಿಂಗಳಿಂದ ಬಿಸಿಲಿನ ಝಳಕ್ಕೆ ಜನ ನಲುಗಿ ಹೋಗಿದ್ದಾರೆ. ಬೆಳಗ್ಗೆ 9 ಗಂಟೆ ಹೊತ್ತಿಗೆ ಆರಂಭವಾಗುವ ಬಿಸಿಲ ಝಳ ಸಂಜೆ 5 ಗಂಟೆಯಾದರೂ ಕಡಿಮೆಯಾಗುತ್ತಿಲ್ಲ. ರಾತ್ರಿ ಕೂಡ ಬಿಸಿ ಗಾಳಿಗೆ ಜನ ಹೈರಾಣಾಗಿದ್ದಾರೆ. ಜಿಲ್ಲೆಯ ಸರಾಸರಿ ಉಷ್ಣಾಂಶ 38.7 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದರೆ, ಶಿವಮೊಗ್ಗ ನಗರದಲ್ಲಿ ಶನಿವಾರ ಈ ವರ್ಷದ ಗರಿಷ್ಠ ತಾಪಮಾನ 39.5 ಡಿಗ್ರಿ ದಾಖಲಾಗಿದೆ.

Advertisement

ಏ.23ರಿಂದ ಜಿಲ್ಲೆಯ ಸರಾಸರಿ ಉಷ್ಣಾಂಶ ನಿರಂತರವಾಗಿ 38.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗುತ್ತಿದೆ. ಒಂದು ಕಾಲದಲ್ಲಿ ಮಲೆನಾಡು ಸದಾ ತಂಪಾಗಿರುತ್ತಿತ್ತು. ವರ್ಷದಲ್ಲಿ ಸತತ ಏಳು ತಿಂಗಳ ಮಳೆ, ಸಮೃದ್ಧ ಹಸಿರು ಹೊದ್ದು ಮಲಗಿರುತ್ತಿದ್ದ ದಟ್ಟ ಅರಣ್ಯದಿಂದ ಎಂತಹ ಬೇಸಿಗೆಯಾದರೂ ವಾತಾವರಣ ತಂಪು ತಂಪಾಗಿರುತ್ತಿತ್ತು. ಈಗ ಪರಿಸ್ಥಿತಿ ತಿರುವು ಮುರುವಾಗಿದೆ. ಮಲೆನಾಡು ಬಿಸಿಲ ನಾಡಾಗಿದೆ.

ನಡು ಮಧ್ಯಾಹ್ನದ ಹೊತ್ತಿಗೆ ನೆತ್ತಿ ಮೇಲೆ ಕಾದ ಕಬ್ಬಿಣದಂತೆ ಬರೆ ಹಾಕುತ್ತಿದೆ. ಝಳಕ್ಕೆ ಹೆದರಿ ಜನ ಮಧ್ಯಾಹ್ನ ಹೊರಗೆ ಬರುತ್ತಿಲ್ಲ. ಉಷ್ಣಾಂಶ ಮತ್ತು ಧ‌ಗೆ ಹೆಚ್ಚಳದಿಂದ ದೇಹಕ್ಕೆ ಬೆಂಕಿ ಬಿದ್ದಂತಾಗಿದೆ. ಧಗೆ ಕಡಿಮೆ ಮಾಡಿಕೊಳ್ಳಲು ಫ್ಯಾನ್‌ ಗಾಳಿಗೆ ಮೈಯೊಡ್ಡಿದರೆ ಬಿಸಿ ಗಾಳಿಯೇ ಬರುತ್ತಿದೆ. ಝಳದಿಂದ ಜನರು ಅನಾರೋಗ್ಯಕ್ಕೆ ಒಳಗಾಗುವುದು ಹೆಚ್ಚಾಗುತ್ತಿದೆ.

ನೀರಿನ ಮೂಲಗಳ ಕೊರತೆ: ಪರಿಸರದಲ್ಲಿನ ಜೀವ ವೈವಿಧ್ಯತೆ ಕಾಪಾಡಲು ಹಸಿರು ಪ್ರಮುಖವಾಗಿದೆ. ಹಸಿರು ಹೊದಿಕೆ ವಾತಾವರಣದಲ್ಲಿನ ತೇವಾಂಶ ಹಿಡಿದಿಡಲು ಕಾರಣವಾಗಿದೆ. ಆದರೆ ಶಿವಮೊಗ್ಗ ನಗರ ಸುತ್ತಮುತ್ತ ಕಾಂಕ್ರೀಟ್ ರಸ್ತೆ, ಕಟ್ಟಡಗಳು ಹೆಚ್ಚಾಗಿ ವಾತಾವರಣದಲ್ಲಿನ ಮಾಲಿನ್ಯ ಹಸಿರು ಹೊದಿಕೆಯನ್ನು ನಾಶ ಮಾಡಿದೆ. ಹೀಗಾಗಿ ಅತಿ ನೇರಳೆ ಕಿರಣಗಳು ಭೂಮಿಯನ್ನು ತಲುಪುತ್ತಿವೆ. ಮತ್ತೂಂದೆಡೆ ನೀರಿನ ಮೂಲಗಳಾದ ಕೆರೆ-ಕಟ್ಟೆಗಳು ಬರಿದಾಗಿವೆ. ಹೀಗಾಗಿ ಹಸಿರು ಹೊದಿಕೆ, ತೇವಾಂಶ ಎರಡೂ ಇಲ್ಲದೆ ವಾತಾವರಣದಲ್ಲಿ ಧಗೆ ಹೆಚ್ಚಾಗುತ್ತಿದೆ. ಝಳ ನಿಯಂತ್ರಿಸಬೇಕೆಂದರೆ, ಮರಗಳು, ನೀರಿನ ಮೂಲ ಹೆಚ್ಚಳವಾಗಬೇಕೆಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ತಜ್ಞರು ಹೇಳುವ ಪ್ರಕಾರ ಶಿವಮೊಗ್ಗದ ಉಷ್ಣಾಂಶದಲ್ಲಿ ಅಂತಹ ಗಣನೀಯ ಏರಿಕೆಯೇನೂ ಕಂಡು ಬಂದಿಲ್ಲ. ಆದರೆ, ವಾತಾವರಣದಲ್ಲಿ ತೇವಾಂಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದು ಬಿಸಿಲಿನ ಝಳ ಏರಿಕೆಗೆ ಕಾರಣವಾಗಿದೆ. ವಾತಾವರಣದಲ್ಲಿನ ತೇವಾಂಶ ಮತ್ತು ಉಷ್ಣಾಂಶ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿದೆ. ತೇವಾಂಶ ಕಡಿಮೆಯಾದಲ್ಲಿ ಸಹಜವಾಗಿ ಬಿಸಿಲಿನ ಧಗೆ ಹೆಚ್ಚಾಗಿ ಜನರನ್ನು ಸುಸ್ತಾಗಿಸುತ್ತದೆ. ಮರ ಗಿಡಗಳು, ಅರಣ್ಯದಂತಹ ಹಸಿರು ಹೊದಿಕೆ ವಾತಾವರಣದಲ್ಲಿನ ತೇವಾಂಶವನ್ನು ಹಿಡಿದಿಡುತ್ತದೆ. ಹಸಿರು ಹೊದಿಕೆಯೇ ಇಲ್ಲವೆಂದ ಮೇಲೆ ತೇವಾಂಶ ಎಲ್ಲಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿಯ ಮಂತ್ರಕ್ಕೆ ಶಿವಮೊಗ್ಗದಲ್ಲಿ ರಸ್ತೆ ಬದಿಯ ಲಕ್ಷಾಂತರ ಮರಗಳು ಧರೆಗುರುಳಿವೆ. ಮಾನವನ ಹಸ್ತಕ್ಷೇಪದಿಂದ ಅರಣ್ಯ ನಾಶ ನಿರಂತರವಾಗಿ ಮುಂದುವರಿದಿದೆ.

Advertisement

ಫ್ಯಾಷನ್‌ ಪರಿಣಾಮ: ಮತ್ತೂಂದು ಕಡೆ ಯುರೋಪ್‌ ಕಟ್ಟಡಗಳ ಶೈಲಿಗೆ ಮಾರು ಹೋಗಿ ಕಟ್ಟಡಗಳಿಗೆ ಗಾಜುಗಳನ್ನು ಅಳವಡಿಸುತ್ತಿರುವುದು ಮನೆಯೊಳಗಿನ ಉಷ್ಣಾಂಶ ಏರಿಕೆ ಹಾಗೂ ವಾತಾವರಣದಲ್ಲಿನ ತೇವಾಂಶ ನಾಶಕ್ಕೆ ಕಾರಣವಾಗಿದೆ. ಹೆಚ್ಚು ಥಂಡಿ ವಾತಾವರಣವಿರುವ ಯುರೋಪ್‌ ದೇಶಗಳಲ್ಲಿ ಮನೆಯೊಳಗೆ ಚಳಿ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಕಟ್ಟಡಗಳಿಗೆ ಗಾಜು ಅಳವಡಿಸುತ್ತಾರೆ. ಆದರೆ, ನಮ್ಮ ದೇಶದಲ್ಲಿ ಫ್ಯಾಷನ್‌ ಎಂಬಂತೆ ಗಾಜುಗಳನ್ನು ಅಳವಡಿಸಿ ತಾವೇ ತಾವಾಗಿ ಉಷ್ಣಾಂಶ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂಬುದು ತಜ್ಞರ ಅಭಿಪ್ರಾಯ.

ವಾಯುಭಾರ ಕುಸಿತದಿಂದ ದಕ್ಷಿಣ ರಾಜ್ಯಗಳಲ್ಲಿ ಬಿಸಿಗಾಳಿ
ವಾಯುಭಾರ ಕುಸಿತವು ವಾತಾವರಣದಲ್ಲಿನ ತೇವಾಂಶ ಸೆಳೆದುಕೊಂಡಿರುವುದರಿಂದ ದಕ್ಷಿಣದ ರಾಜ್ಯಗಳಲ್ಲಿ ಬಿಸಿ ಗಾಳಿ ಬೀಸುತ್ತಿದೆ. ಹೀಗಾಗಿ ಮೂರ್‍ನಾಲ್ಕು ದಿನಗಳಿಂದ ಉಷ್ಣಾಂಶ 2ರಿಂದ 4 ಡಿಗ್ರಿಯಷ್ಟು ಏರಿಕೆ ಕಂಡು ಗರಿಷ್ಠ ಮಟ್ಟ ದಾಖಲಿಸಿದೆ. ಹೀಗಾಗಿ ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚಾಗಿ ಜನತೆ ನಲುಗುವಂತಾಗಿದೆ. ಚಂಡಮಾರುತ ಪರಿಣಾಮ ಮಲೆನಾಡು ಪ್ರದೇಶದಲ್ಲಿ ಮೇ. 1 ಮತ್ತು 2ರಂದು ಮಳೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು.

ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next