ಶಿವಮೊಗ್ಗ: ನಗರದ ಪ್ರಸಿದ್ಧ ಗುಡ್ಡೇಕಲ್ಲು ಬಾಲಸುಬ್ರಹ್ಮಣ್ಯ ಸ್ವಾಮಿ ಆಡಿಕೃತ್ತಿಕೆ ಹರೋಹರ ಜಾತ್ರೆಯು ಗುರುವಾರ ವಿಜೃಂಭಣೆಯಿಂದ ಆರಂಭಗೊಂಡಿತು. ಸಾವಿರಾರು ಜನರು ಗುಡ್ಡೆಕಲ್ ಶ್ರೀ ಬಾಲಸುಬ್ರಮಣ್ಯ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ಭಕ್ತಿ ಭಾವದಿಂದ ವಿಶೇಷ ಪೂಜೆ ಸಲ್ಲಿಸಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಗುಡ್ಡೇಕಲ್ಲು ಬಾಲಸುಬ್ರಹ್ಮಣ್ಯ ಸ್ವಾಮಿ ಆಡಿಕೃತ್ತಿಕೆ ಹರೋಹರ ಜಾತ್ರೆಯಲ್ಲಿ ಭಕ್ತರು ಉದ್ದದ ತ್ರಿಶೂಲ ಕೆನ್ನೆಗೆ ಚುಚ್ಚಿಕೊಂಡು ಬಂದು ಹರಕೆ ತೀರಿಸಿದರು. ಕಾವಡಿ ಹರಕೆ ಹೊತ್ತ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಸಿಕೊಳ್ಳಲು ಮೈಯನ್ನು ದಂಡಿಸಿಕೊಂಡು ಹರಕೆ ಅರ್ಪಿಸಿದರು. ಅನೇಕ ಭಕ್ತರು ತಮ್ಮ ಮೈಯನ್ನು ದಂಡಿಸಿಕೊಂಡಿದ್ದ ಪರಿ ಮೈ ಜುಮ್ಮೆನ್ನಿಸುವಂತೆ ಮಾಡಿತ್ತು.
20 ಅಡಿ ತ್ರಿಶೂಲ: ಭಕ್ತರು ತಮ್ಮ ಹರಕೆ ಅನುಸಾರ ನಾನಾ ಅಡಿ ಉದ್ದದ ತ್ರಿಶೂಲಗಳನ್ನು ಕೆನ್ನೆಗೆ ಚುಚ್ಚಿಕೊಂಡು ಕಾಲ್ನಡಿಗೆಯಲ್ಲಿ ಬಂದಿದ್ದರು. ಈ ಬಾರಿ 5 ಅಡಿಯಿಂದ 20 ಅಡಿವರೆಗಿನ ಬೃಹತ್ ತ್ರಿಶೂಲಗಳು ಕಂಡು ಬಂದವು. 5 ವರ್ಷದ ಮಕ್ಕಳಿಂದ 60 ವರ್ಷದವರೆಗಿನ ವೃದ್ಧರು ಕಾವಡಿ ಹರಕೆ ತೀರಿಸಿದರು. ಕೆಲವರು ನಾಲಿಗೆಗೆ ಬೆಳ್ಳಿ ತ್ರಿಶೂಲದಿಂದ, ಇನ್ನೂ ಕೆಲವರು ನಿಂಬೆಹಣ್ಣುಗಳನ್ನು ಮೈಗೆ ಚುಚ್ಚಿಕೊಂಡಿದ್ದರು. ಕಾವಡಿ ಹೊತ್ತು ಬರುವ ಭಕ್ತರಿಗೆ ವಾದ್ಯಗಳು ದಣಿಯದಂತೆ ಪ್ರೋತ್ಸಾಹಿಸುತ್ತಿದ್ದವು. ಅಲಂಕೃತ ಬಾಲಸುಬ್ರಹ್ಮಣ್ಯನನ್ನು ಮರದ ತೇರಿನಲ್ಲಿ ಕೂರಿಸಿ ಅದನ್ನು ತೇರಿನ ಕೊಕ್ಕೆಯನ್ನು ಬೆನ್ನಿಗೆ ಸಿಕ್ಕಿಸಿಕೊಂಡು ಬರುತ್ತಿದ್ದುದು ವಿಶೇಷವಾಗಿತ್ತು.
ಮಳೆ ಸ್ವಲ್ಪ ವಿಶ್ರಾಂತಿ ಕೊಟ್ಟಿದ್ದರಿಂದ ದೇವರ ದರ್ಶನಕ್ಕೆ ಬರುವವರಿಗೆ ಅನುಕೂಲದ ವಾತಾವರಣವಿತ್ತು. ಸಂಚಾರಿ ವ್ಯವಸ್ಥೆ ಕೂಡ ಸುಗಮವಾಗಿದ್ದು, ಪೊಲೀಸ್ ಇಲಾಖೆ ವಾಹನಗಳಿಗೆ ಸಂಚಾರಿ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿತ್ತು. ಜಾತ್ರೆ ಅಂಗವಾಗಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲೆ ಸೇರಿದಂತೆ ರಾಜ್ಯ, ಹೊರ ರಾಜ್ಯಗಳಿಂದಲೂ ಹೆಚ್ಚಿನ ಭಕ್ತರು ಆಗಮಿಸಿದ್ದರು. ದೇವಸ್ಥಾನ ಸಮಿತಿ ವತಿಯಿಂದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಮತ್ತು ದೇವರ ದರ್ಶನಕ್ಕೆ ಯಾವುದೇ ನೂಕುನುಗ್ಗಲು ಆಗದಂತೆ ಕ್ರಮ ಕೈಗೊಳ್ಳಲಾಗಿತ್ತು.
ಜಾತ್ರೆ ಪ್ರದೇಶದ ರಸ್ತೆಯುದ್ದಕ್ಕೂ ಮಂಡಕ್ಕಿ, ಖಾರ, ಬೆಂಡು, ಬತ್ತಾಸು, ಹಣ್ಣು ಕಾಯಿ, ಆಟಿಕೆ, ಬಲೂನು, ಪೀಪಿ ಖರೀದಿ ಜೋರಾಗಿತ್ತು.ಮಹಿಳೆಯರು, ಮಕ್ಕಳು ಅಂಗಡಿಗಳ ಮುಂದೆ ನಿಂತು ಆಟಿಕೆಗಳ ಖರೀದಿ ದೃಶ್ಯ ಸಾಮಾನ್ಯವಾಗಿತ್ತು. ಜೊತೆಗೆ ತಮಗೆ ಬೇಕಾದ ಅಲಂಕಾರಿಕ ವಸ್ತುಗಳ ಖರೀದಿಯಲ್ಲೂ ತೊಡಗಿದ್ದರು. ಪೋಷಕರು ಮಕ್ಕಳಿಗಾಗಿ ಜಾತ್ರೆ ತೋರಿಸುತ್ತಾ ಅವರು ಕೇಳಿದ ವಸ್ತುಗಳನ್ನು ಕೊಡಿಸುತ್ತಾ ಸಂತಸ ಪಡುತ್ತಿರುವುದು ವಿಶೇಷವಾಗಿತ್ತು. ಅಲ್ಲಲ್ಲಿ ಹೊಸ ದಂಪತಿಗಳು ಜಾತ್ರೆಯಲ್ಲಿ ಸಡಗರದಿಂದ ಓಡಾಡುತ್ತಿದ್ದುದು ಕಂಡುಬಂದಿತು.
ಒಟ್ಟಾರೆ ಭಕ್ತಿ, ಶ್ರದ್ದೆ, ವಿಶೇಷ ಪೂಜೆ, ಸಡಗರ, ಸಂಭ್ರಮಗಳಿಂದ ಕೂಡಿರುವ ಈ ಜಾತ್ರೆ ಶಿವಮೊಗ್ಗ ನಗರದ ಐತಿಹಾಸಿಕವಾಗಿದೆ. ದೇವಸ್ಥಾನ ಮಂಡಳಿ ಇತ್ತೀಚೆಗೆ ಅಲ್ಲಿ ಮೂಲ ಸೌಕರ್ಯ ಕಲ್ಪಿಸಿರುವುದರಿಂದ ಭಕ್ತಾದಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಶುಕ್ರವಾರ ಇನ್ನೂ ಹೆಚ್ಚು ಜನ ಸೇರಲಿದ್ದು ಜಿಲ್ಲಾಡಳಿತ ಸೂಕ್ತ ಬಂದೋಬಸ್ತ್ ಮಾಡಿದೆ.