Advertisement

ನಾಟಕ ರಂಗಕ್ಕೆ ತಿರುವು ನೀಡಿದ್ದ ಕಾರ್ನಾಡರು

04:58 PM Jul 14, 2019 | Naveen |

ಶಿವಮೊಗ್ಗ: ಗಿರೀಶ ಕಾರ್ನಾಡ ನಾಟಕ ರಂಗಕ್ಕೆ, ಅಭಿನಯ ಕ್ಷೇತ್ರಕ್ಕೆ ಅಸಾಮಾನ್ಯ ತಿರುವು ನೀಡಿದಂತ ವ್ಯಕ್ತಿ ಎಂದು ಸಾಹಿತಿ ಪ್ರೊ| ಎಂ.ಬಿ.ನಟರಾಜ್‌ ಅಭಿಪ್ರಾಯಪಟ್ಟರು.

Advertisement

ನಗರದ ಕುವೆಂಪು ರಂಗ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹೊಂಗಿರಣ ಶಿವಮೊಗ್ಗದ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಗಿರೀಶ ಕಾರ್ನಾಡರಿಗೆ ರಂಗನಮನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ರಂಗಭೂಮಿ ಜಡವಾಗಿದ್ದ ಕಾಲದಲ್ಲಿ ಗಿರೀಶ ಕಾರ್ನಾಡ ಅದಕ್ಕೆ ಹೊಸ ಆಯಾಮ ನೀಡಿದರು. ಇತಿಹಾಸದ ಕಲ್ಪನೆಯಲ್ಲಿ ಇಂದಿನ ಕಾಲದ ವಿಚಾರಗಳನ್ನು ಸಮ್ಮಿಲನ ಮಾಡಿ ನೋಡುವ ಮನಸ್ಥಿತಿಯೇ ಇಲ್ಲದ ಕಾಲದಲ್ಲಿ ಕಾರ್ನಾಡರ ಯಯಾತಿ, ತುಘಲಕ್‌, ಹಯವಧನ ಹೀಗೆ ಹಲವು ನಾಟಕಗಳು ಹೊಸ ವಿಚಾರಗಳನ್ನು ಪರಿಚಯಿಸಿದವು ಎಂದರು.

ಕಾರ್ನಾಡರಿಂದ ಕನ್ನಡ ನಾಟಕ ವಿಮರ್ಶೆಯೂ ಬೆಳೆಯಿತು. ನಾಟಕದ ಬಗ್ಗೆ, ಅಭಿನಯದ ಬಗ್ಗೆ, ನಿರ್ದೇಶಕನ ಪಾತ್ರ ಬಗ್ಗೆ ಹೆಚ್ಚೆಚ್ಚು ವಿಮರ್ಶೆಗಳು ಬರಲು ಪ್ರಾರಂಭಿಸಿದವು ಎಂದು ಹೇಳಿದರು.

ಮನುಷ್ಯನ ಇತಿ, ಮಿತಿ ಏನು ಎಂಬುದನ್ನು ಸಾಮಾಜಿಕ ನೆಲೆಗಟ್ಟಿನಲ್ಲಿ ನೋಡುವ ಪ್ರಯತ್ನವನ್ನು ಕಾರ್ನಾಡರ ನಾಟಕಗಳಲ್ಲಿ ನೋಡಬಹುದು. ಅವರ ನಾಟಕಗಳು ಓದುವುದಕ್ಕೂ ಸವಾಲು ಮತ್ತು ಅಭಿನಯಕ್ಕೂ ಸವಾಲಾಗಿವೆ. ಆದರೆ, ಅವರ ನಾಟಕಗಳು ನಮ್ಮಲ್ಲಿ ಮತ್ತೆ ಮತ್ತೆ ನಾಟಕಗಳನ್ನು ನೋಡುವ ಅಭಿರುಚಿಯನ್ನು ಬೆಳೆಸುತ್ತವೆ. ಅನಗತ್ಯ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಅಪರೂಪ ವ್ಯಕ್ತಿತ್ವದ ಕಾರ್ನಾಡರಿಗೆ ರಂಗನಮನ ಸಲ್ಲಿಸುತ್ತಿರುವುದು ಅತ್ಯಂತ ಅರ್ಥಪೂರ್ಣ ಎಂದರು. ರಂಗ ನಿರ್ದೇಶಕ ಕಾಂತೇಶ್‌ ಕದರಮಂಡಲಗಿ, ‘ಕನ್ನಡ ಸಾಹಿತ್ಯಲೋಕ ಹಾಗೂ ರಂಗಭೂಮಿ ಕ್ಷೇತ್ರವನ್ನು ಅತ್ಯಂತ ಶ್ರೀಮಂತಗೊಳಿಸಿದ ವ್ಯಕ್ತಿ ಕಾರ್ನಾಡರು’ ಎಂದು ತಿಳಿಸಿದರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಬಿ. ಶಂಕರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಬಾವಿಮನೆ ನಾಗರಾಜ್‌ ಇದ್ದರು. ಹಸನ್‌ ಬೆಳ್ಳಿಗನೂಡು ನಿರೂಪಿಸಿದರು. ಈ ಸಂದರ್ಭದಲ್ಲಿ ಡಾ| ಸಾಸ್ವೆಹಳ್ಳಿ ಸತೀಶ್‌ ನಿರ್ದೇಶನದ ಗಿರೀಶ ಕಾರ್ನಾಡರ ‘ಹೂವು’ ನಾಟಕ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next