ಶಿವಮೊಗ್ಗ: ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬ ಗಾದೆಯಂತೆ. ನಾಲ್ಕು ತಿಂಗಳಿನಿಂದ ಕಷ್ಟಪಟ್ಟು ಮಾಡಿದ್ದ ಗಣೇಶ ಮೂರ್ತಿಗಳು ತುಂಗೆ ಪಾಲಾಗಿವೆ. ವಿಘ್ನ ನಿವಾರಕನಿಗೇ ವಿಘ್ನ ಆವರಿಸಿದೆ.
ಆ.9ರಂದು ತುಂಗೆ ಉಕ್ಕಿ ಹರಿದ ಪರಿಣಾಮ ಕುಂಬಾರಗುಂಡಿಯ ಮನೆಗಳಿಗೆ ನೀರು ನುಗ್ಗಿ ಗಣೇಶ ಚತುರ್ಥಿಗೆ ಸಿದ್ಧವಾಗಿದ್ದ ಮೂರ್ತಿಗಳು ನೀರಿನಲ್ಲಿ ಮುದ್ದೆಯಾಗಿವೆ. ಹಬ್ಬ ಹತ್ತಿರವಿರುವ ಕಾರಣ ಗಣೇಶ ಮೂರ್ತಿ ಮತ್ತೆ ತಯಾರು ಮಾಡಲಾಗದೆ ಅತಂತ್ರರಾಗಿದ್ದಾರೆ. ಪ್ರತಿ ವರ್ಷ ಮೂರರಿಂದ ನಾಲ್ಕು ಲಕ್ಷ ಮೌಲ್ಯದ ಗಣೇಶ ಮೂರ್ತಿಗಳನ್ನು ಒಬ್ಬೊಬ್ಬ ಕುಂಬಾರರು ಮಾರಾಟ ಮಾಡುತ್ತಾರೆ. ಹತ್ತಕ್ಕೂ ಹೆಚ್ಚು ಕುಂಬಾರರು ತಲೆಮಾರುಗಳಿಂದ ಇಲ್ಲಿ ನೆಲೆಸಿದ್ದಾರೆ. ನಾಲ್ಕು ತಲೆಮಾರುಗಳಿಂದ ಗಣೇಶ ಮೂರ್ತಿ ಮಾರಾಟದಿಂದ ಒಂದಿಷ್ಟು ಹಣ ಕಾಣುವ ಈ ಕುಟುಂಬಗಳು ಈ ಬಾರಿ ಬೀದಿಗೆ ಬಂದಿವೆ. ಮನೆಯಲ್ಲಿದ್ದ ಬಟ್ಟೆ, ವಸ್ತುಗಳು ಸಹ ನೀರು ಪಾಲಾಗಿದ್ದು ಈ ಕುಟುಂಬಗಳು ಅಕ್ಷರಶಃ ಬೀದಿಗೆ ಬಂದಿವೆ.
ಹಿಂದೂ ಮಹಾಸಭಾ ಗಣೇಶನಿಗೂ ತೊಂದರೆ: ಶಿವಮೊಗ್ಗದ ಹಿಂದೂ ಮಹಾಸಭಾವು 75ನೇ ವರ್ಷ ಉತ್ಸವಕ್ಕೆ ಅದ್ಧೂರಿಯಾಗಿ ರೆಡಿಯಾಗುತ್ತಿದೆ. ಈ ಗಣೇಶ ಉತ್ಸವ ಇಡೀ ದೇಶಕ್ಕೆ ಹೆಸರುವಾಸಿ. ವಿ.ಡಿ. ಸಾವರ್‌ಕರ್ ಆರಂಭಿಸಿದ ಈ ಉತ್ಸವವು ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ನಡೆಯತ್ತಿದೆ. ಆದರೆ ಈ ಬಾರಿ ಪ್ರವಾಹದ ಕಾವು ಅದಕ್ಕೂ ತಗುಲಿದೆ. ಕುಂಬಾರ ಗುಂಡಿಯ ಗಣೇಶಪ್ಪ ಕುಟುಂಬವು ಸುಮಾರು ಶತಮಾನದಿಂದ ಗಣೇಶ ಮೂರ್ತಿ ತಯಾರು ಮಾಡುತ್ತಿದೆ. ಹಿಂದೂ ಮಹಾಸಭಾಗೆ 75ನೇ ವರ್ಷದಿಂದ ಮೂರ್ತಿ ತಯಾರು ಮಾಡಿಕೊಡುತ್ತಿರುವುದೂ ಅವರೇ. ಈ ಬಾರಿ 75ನೇ ಸಂಭ್ರಮಕ್ಕೆ ಹೆಚ್ಚು ಆಸ್ಥೆಯಿಂದ ಗಣೇಶ ಮೂರ್ತಿ ತಯಾರು ಮಾಡಿದ್ದರು. ಶುಕ್ರವಾರ ಮಧ್ಯರಾತ್ರಿ ಮನೆಯೊಳಗೆ ಮಳೆ ನೀರು ನುಗ್ಗಿದ್ದ ಪರಿಣಾಮ ಹುಟ್ಟಿದ ಬಟ್ಟೆಯಲ್ಲೇ ಮಧ್ಯರಾತ್ರಿ ಬೋಟ್‌ನಲ್ಲಿ ಗಂಜಿ ಕೇಂದ್ರ ಸೇರಿದ್ದಾರೆ. ಮರು ದಿನ ಬಂದು ನೋಡಿದರೆ ನಾಲ್ಕು ತಿಂಗಳಿನಿಂದ ಮಾಡಿದ್ದ ಶ್ರಮವೆಲ್ಲ ನೀರು ಪಾಲಾಗಿತ್ತು. 10 ದಿನ ಕಳೆದಿದ್ದರೆ ನಾಲ್ಕು ತಿಂಗಳ ಶ್ರಮ ಫಲ ಕೊಡುತಿತ್ತು. ಅಷ್ಟರಲ್ಲರಾಗಲೇ ತುಂಗೆ ಮಣ್ಣಿನ ಗಣೇಶ ಮೂರ್ತಿಗಳನ್ನು ಅಪೋಶನ ತೆಗೆದುಕೊಂಡಿತ್ತು.
ಲಕ್ಷ ಲಕ್ಷ ಲಾಸ್: ಗಣೇಶಪ್ಪ ಕುಟುಂಬವೇ 75 ವರ್ಷದಿಂದ ಹಿಂದೂ ಮಹಾಸಭಾಗೆ ಗಣೇಶ ಮೂರ್ತಿ ತಯಾರು ಮಾಡಿಕೊಡುತ್ತಿರುವುದು. ಗಣೇಶ್ ಅವರ ಮುತ್ತಜ್ಜಿ ಚಂದಮ್ಮ ಗಣೇಶ ಮೂರ್ತಿ ತಯಾರು ಮಾಡುತ್ತಿದ್ದರು. ಅವರ ಮಗ ನಂಜುಂಡಪ್ಪ, ನಂತರ ಅವರ ಮಗ ನಾಗೇಶಪ್ಪ, ಪ್ರಸ್ತುತ ನಾಗೇಶಪ್ಪ ಅವರ ಮನ ಗಣೇಶ್ ಮುಂದುವರಿಸಿಕೊಂಡು ಬಂದಿದ್ದಾರೆ. ಮೂರು ಅಡಿ, ನಾಲ್ಕು ಅಡಿ 11 ಗಣಪತಿ ಹಾಗೂ 1 ಅಡಿ ಎತ್ತರದ 150 ಗಣೇಶ ಮೂರ್ತಿಗಳನ್ನು ತಯಾರು ಮಾಡಿ ಇಟ್ಟಿದ್ದರು. ಆದರೆ ವಿಧಿ ಎಲ್ಲವನ್ನೂ ನಾಶ ಮಾಡಿದೆ. 75 ವರ್ಷದ ಗಣೇಶ ಮಾಡಲೇಬೇಕೆಂಬ ಹಠ ತೊಟ್ಟ ಅವರು, ಮಂಗಳವಾರದಿಂದ ಗಣೇಶ ಮೂರ್ತಿ ತಯಾರು ಮಾಡಲು ಶುರುವಿಟ್ಟುಕೊಂಡಿದ್ದಾರೆ. ತಿಂಗಳ ಕೊನೆಯೊಳಗೆ ಮೂರ್ತಿ ಪೂರ್ತಿಯಾಗಲಿದೆ. ನನಗೆ ನಾಲ್ಕು ಲಕ್ಷ ಲಾಸ್ ಆಗಿದೆ. ಆದರೂ ಹಿಂದೂ ಮಹಾಸಭಾ ಗಣೇಶ ಮೂರ್ತಿ ಮಾಡುತ್ತಿದ್ದೇನೆ. ಅದೇ ನನಗೆ ಹೆಸರು ತಂದುಕೊಟ್ಟಿದೆ. ಹಾಗಾಗಿ ಅದೊಂದು ಗಣಪತಿ ಮೂರ್ತಿ ಮಾಡಿಕೊಡುವೆ ಎನ್ನುತ್ತಾರೆ ಗಣೇಶಪ್ಪ. ಗಣೇಶ್ ಅವರ ಸಂಪರ್ಕ ಸಂಖ್ಯೆ 9844850853.
ಮೂರು ಲಕ್ಷ ರೂ.ನಷ್ಟ
ನನ್ನ ತಂದೆ ಗಣೇಶ ಮೂರ್ತಿ ತಯಾರು ಮಾಡುತ್ತಿದ್ದರು. ಈಗ ನಾನು ಅದನ್ನು ಮುಂದುವರಿಸಿದ್ದೇನೆ. ಸಂಜೆ ಐಟಿಐ ಕಾಲೇಜು ಮುಗಿಸಿ ಬಂದು ನಾಲ್ಕು ತಿಂಗಳಿನಿಂದ ನಾನು, ನನ್ನ ತಾಯಿ ಕಷ್ಟಪಟ್ಟು ಗಣೇಶ ಮೂರ್ತಿ ತಯಾರು ಮಾಡಿದ್ದೆವು. 15 ದಿನ ಕಳೆದಿದ್ದರೆ ಎಲ್ಲವೂ ಮಾರಾಟವಾಗುತಿತ್ತು. ಮಳೆ ನಮ್ಮನ್ನ ಬೀದಿಗೆ ನಿಲ್ಲಿಸಿದೆ. ನಮಗೆ ಬೇರೆ ಆದಾಯದ ಮೂಲಗಳಿಲ್ಲ. ಇನ್ನೇನು ಹಣ ಕಾಣಬಹುದೆಂಬ ಸಂದರ್ಭದಲ್ಲಿ ಈ ರೀತಿಯಾಗಿದೆ. ನಮಗೆ ಏನು ಮಾಡುವುದು ತೋಚುತ್ತಿಲ್ಲ. ಸರಕಾರ ಇದಕ್ಕೆಲ್ಲ ಪರಿಹಾರ ಕೊಡುವುದಿಲ್ಲ. 9 ದೊಡ್ಡ, 100 ಚಿಕ್ಕ ಗಣೇಶ ಮೂರ್ತಿಗಳು ನೀರಲ್ಲಿ ಕರಗಿಹೋದವು. 3 ಲಕ್ಷ ರೂ. ನಷ್ಟವಾಗಿದೆ. ಇಂತಹ ಪರಿಸ್ಥಿತಿ ಯಾರಿಗೂ ಬರುವುದು ಬೇಡ. ಸರಕಾರ ನಮಗೂ ಸಹಾಯ ಮಾಡಲಿ ಎನ್ನುತ್ತಾರೆ ಕುಂಬಾರ ಕೇರಿಯ ಯುವಕ ಮನೋಜ್. ಇವರ ಸಂಪರ್ಕ ಸಂಖ್ಯೆ 9964791762.
ಸುಮಾರು 100 ವರ್ಷಗಳಿಂದ ನಮ್ಮ ಕುಟುಂಬ ಗಣೇಶ ಮೂರ್ತಿ ತಯಾರು ಮಾಡುತ್ತಿದೆ. 75 ವರ್ಷದಿಂದಲೂ ಹಿಂದೂ ಮಹಾಸಭಾ ಗಣೇಶ ಮೂರ್ತಿ ಮಾಡಿಕೊಂಡು ಬರುತ್ತಿದ್ದೇವೆ. ಇದೇ ಮೊದಲ ಬಾರಿ ಇಂತಹ ಪರಿಸ್ಥಿತಿ ಎದುರಾಗಿದೆ. ನಮಗೆ ಏನು ಮಾಡಬೇಕು ತೋಚದಾಗಿದೆ. 4 ಲಕ್ಷ ಮೌಲ್ಯದ ಗಣೇಶ ಮೂರ್ತಿ ನೀರು ಪಾಲಾಗಿದೆ. ಆದರೂ ಹಿಂದೂ ಮಹಾಸಭಾ ಗಣೇಶ ಮೂರ್ತಿ ಮರು ನಿರ್ಮಾಣ ಮಾಡಿ ಕೊಡುವೆ.
•
ಗಣೇಶ್,
ಗಣೇಶ ಮೂರ್ತಿ ತಯಾರಕರು