ಶಿವಮೊಗ್ಗ: ಸವರ್‌ಲೈನ್ ರಸ್ತೆ, ಗಾರ್ಡನ್ ಏರಿಯಾ, ಓಟಿರಸ್ತೆ ಮುಂತಾದ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿ ದೊಡ್ಡ ಗಾತ್ರದ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ರಾತ್ರಿ ಮಾತ್ರವಲ್ಲದೇ ಹಗಲಿನ ಕೆಲ ಹೊತ್ತು ಅನುಮತಿ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ| ಎಂ. ಅಶ್ವಿನಿ ಭರವಸೆ ನೀಡಿದ್ದಾರೆ.
ಸೋಮವಾರ ತಮ್ಮನ್ನು ಭೇಟಿಯಾದ ಲಾರಿ ಮಾಲೀಕರ ಸಂಘ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಪದಾಧಿಕಾರಿಗಳ ನಿಯೋಗದೊಂದಿಗೆ ಚರ್ಚಿಸಿದ ಅವರು, ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಹಗಲಿನ ವೇಳೆ ಭಾರೀ ಗಾತ್ರದ ಸರಕು ಸಾಗಣೆ ವಾಹನಗಳಿಗೆ ಕೆಲವೆಡೆ ಪ್ರವೇಶ ನೀಡುತ್ತಿಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ವಲ್ಪ ಮಟ್ಟಿನ ವಿನಾಯಿತಿ ನೀಡಲು ಸಾಧ್ಯವೇ? ಎಂಬ ಬಗ್ಗೆ ಪರಿಶೀಲಿಸುತ್ತೇನೆ ಎಂದರು.
ಆದರೆ ಲಘು ಸರಕು ಸಾಗಣೆ ವಾಹನದಲ್ಲಿ ಹಮಾಲರನ್ನು ಕರೆದೊಯ್ಯಲು ಅನುಮತಿ ನೀಡುವುದು ಸಾಧ್ಯವಿಲ್ಲ. ಇದಕ್ಕೆ ಸುಪ್ರೀಂ ಕೋರ್ಟ್ ಆದೇಶ ಅವಕಾಶ ನೀಡುವುದಿಲ್ಲ. ನಾವು ಅನುಮತಿ ನೀಡಿ ನಂತರ ಏನಾದರೂ ಅವಘಡ ಸಂಭವಿಸದರೆ ಅದರ ಪರಿಣಾಮ ತೀರಾ ಗಂಭೀರವಾಗುತ್ತದೆ ಎನ್ನುವ ಮೂಲಕ ಲಾರಿ ಮಾಲೀಕರ ಬೇಡಿಕೆಯನ್ನು ನಯವಾಗಿ ತಿರಸ್ಕರಿಸಿದರು.
ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮಿಗಳೂ ತಮ್ಮ ಉದ್ಯಮದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಅದು ರಾತ್ರಿ ಸಮಯದಲ್ಲೂ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಇದರಿಂದ ಅಪರಾಧಗಳನ್ನು ತಡೆಗಟ್ಟುವ ಇಲ್ಲವೇ ಪತ್ತೆ ಮಾಡಲು ಅನುಕೂಲವಾಗುತ್ತದೆ ಎಂದರು.
ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಿ.ಆರ್. ವಾಸುದೇವ್, ವಿಆರ್‌ಎಲ್ ಶಿವಮೊಗ್ಗ ವಿಭಾಗದ ಎ.ಜಿ.ಎಂ. ಆನಂದ್, ಪ್ರಮುಖರಾದ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಜಿ.ವಿಜಯಕುಮಾರ್, ವಸಂತ್ ಹೋಬಳಿದಾರ್, ಸಂದೀಪ್, ಲಕ್ಷ್ಮೀಕಾಂತ್, ಉಪಾಧ್ಯಕ್ಷ ಎಸ್.ಎಸ್. ಉದಯಕುಮಾರ್, ಡಿ.ಎಸ್. ಅರುಣ್, ಡಿ.ಎಂ. ಶಂಕರಪ್ಪ ಮತ್ತಿತರರು ಇದ್ದರು.