Advertisement

ಶಿವಮೊಗ್ಗದಲ್ಲಿ ಫಾರ್ಮ್ ಪಾರ್ಕ್‌

12:14 PM Jun 27, 2019 | Naveen |

ಶಿವಮೊಗ್ಗ: ಶಿವಮೊಗ್ಗದಲ್ಲಿ ಫಾರ್ಮ್ ಪಾರ್ಕ್‌ ಸ್ಥಾಪನೆಗೆ ಇದಕ್ಕೆ ಸಂಬಂಧಪಟ್ಟ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ತಾವು ಮನವಿ ಮಾಡಿಕೊಂಡಿದ್ದು, ಕೇಂದ್ರ ಬಜೆಟ್‌ನಲ್ಲಿ ಇದನ್ನು ಸೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಾರ್ಮ್ ಪಾರ್ಕ್‌ ಸ್ಥಾಪನೆಯಿಂದ ಔಷಧ ತಯಾರಿಕಾ ಕಂಪೆನಿಗಳು ಬರಲಿದ್ದು, ಔಷಧ ತಯಾರಿಕೆಗೆ ಸಂಬಂಧಪಟ್ಟ ಎಲ್ಲ ಘಟಕಗಳು ಹಾಗೂ ಬಿ- ಫಾರ್ಮ್ ಮಾಡಿಕೊಂಡ ವಿದ್ಯಾರ್ಥಿಗಳಿಗೆ ತರಬೇತಿ ಕೇಂದ್ರಗಳು ಆರಂಭವಾಗಲಿವೆ. ಇದರಿಂದ ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕಂತಾಗುತ್ತದೆ ಎಂದರು.

ಈ ಪಾರ್ಕ್‌ ಸ್ಥಾಪನೆಗೆ ಸೋಗಾನೆ ಗ್ರಾಮದ ಸ.ನಂ. 120ರಲ್ಲಿ ಕೆಎಚ್ಬಿ ವಶಪಡಿಸಿಕೊಂಡಿರುವ 604 ಎಕರೆಯಲ್ಲಿ 200 ಎಕರೆ ನೀಡಲು ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಈ ಪಾರ್ಕ್‌ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸಚಿವ ಕೆ.ಜೆ. ಜಾರ್ಜ್‌ ಅವರ ಕಚೇರಿಯಲ್ಲಿ ಜೂ.27ರಂದು ಸಂಜೆ 4 ಗಂಟೆಗೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ ಎಂದರು.

ಶಿವಮೊಗ್ಗದಲ್ಲಿ ಮೊರಾರ್ಜಿ ದೇಸಾಯಿ ಇನ್ಸಿಸ್ಟಿಟ್ಯೂಟ್ ಆಫ್‌ ಯೋಗ ಕೇಂದ್ರ ಸ್ಥಾಪನೆಗೆ ಕೇಂದ್ರ ಸಚಿವ ಶ್ರೀಪಾದ ನಯಕ್‌ ಭರವಸೆ ನೀಡಿದ್ದು, ಈ ಕೇಂದ್ರ ಸ್ಥಾಪನೆಗೆ ಸೋಗಾನೆ ಗ್ರಾಮದ ಸ.ನಂ.120ರಲ್ಲಿ ಕೆಎಚ್ಬಿ ವಶಪಡಿಸಿಕೊಂಡಿರುವ 604 ಎಕರೆಯಲ್ಲಿ 10 ಎಕರೆ ಜಾಗ ನೀಡಲು ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ರೈಲ್ವೆ ಅಭಿವೃದ್ಧಿಗಾಗಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರನ್ನು ಭೇಟಿ ಮಾಡಿದ್ದು, ಜು.7 ಮತ್ತು 8 ರಂದು ಅವರು ಶಿವಮೊಗ್ಗಕ್ಕೆ ಭೇಟಿ ನೀಡಿ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಜಿಲ್ಲೆಯ ರೈಲ್ವೆ ಅಭಿವೃದ್ಧಿಗಾಗಿ ಸಾರ್ವಜನಿಕರು ಆಗಬೇಕಾಗಿರುವ ಅಂಶಗಳನ್ನು ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಯವರಿಗೆ ತಲುಪಿಸಬೇಕು ಎಂದರು.

Advertisement

ಕೇಂದ್ರ ವಿಮಾನ ಖಾತೆ ಸಚಿವರನ್ನು ಭೇಟಿ ಮಾಡಿ ಶಿವಮೊಗ್ಗದಲ್ಲಿ ಅರ್ಧಕ್ಕೆ ನಿಂತಿರುವ ವಿಮಾನ ನಿಲ್ದಾಣವನ್ನು ಪೂರ್ಣಗೊಳಿಸುವಂತೆ ಮನವಿ ಮಾಡಿಕೊಂಡಿದ್ದು, ಇದಕ್ಕೆ ಸ್ಪಂದಿಸಿದ ಸಚಿವರು ದೇಶಕ್ಕೆ ಅರ್ಧಕ್ಕೆ ನಿಂತ ಎಲ್ಲ ವಿಮಾನ ನಿಲ್ದಾಣಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.

ಕಳೆದ ಎರಡು ದಿನ ತಾವು ದೆಹಲಿಗೆ ಭೇಟಿ ನೀಡಿ ಜಿಲ್ಲೆಗೆ ಆಗಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ ಎಂದ ಅವರು, ಶಿವಮೊಗ್ಗ ಜಿಲ್ಲೆಗೆ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ತಾವು ಗಮನ ಹರಿಸುತ್ತೇವೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಎಂ. ಶಂಕರ್‌, ಎನ್‌.ಜೆ. ರಾಜಶೇಖರ್‌, ಡಿ.ಎಸ್‌. ಅರುಣ್‌, ಎಸ್‌. ಜ್ಞಾನೇಶ್ವರ್‌, ಅನಿತಾ ರವಿಶಂಕರ್‌, ರತ್ನಾಕರ್‌ ಶೆಣೈ, ಕೆ.ವಿ. ಅಣ್ಣಪ್ಪ, ಮಧುಸೂದನ್‌, ಗಾಜನೂರು ಗಣೇಶ್‌, ಹಿರಣ್ಣಯ್ಯ, ನಾಗರಾಜ್‌ ಇದ್ದರು.

ಸದಸ್ಯತ್ವ ಅಭಿಯಾನ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ಕಾರ್ಯಾಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಿ ಶುಭಾಶಯ ಕೋರಿದ್ದು ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪಕ್ಷವನ್ನು ಶಕ್ತಿಶಾಲಿಯನ್ನಾಗಿ ಮಾಡಲು ಸೂಚಿಸಿದ್ದಾರೆ. ರಾಜ್ಯದಲ್ಲಿ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದು, ರಾಜ್ಯದಲ್ಲಿ 83 ಲಕ್ಷ ಸದಸ್ಯರನ್ನು ಹೊಂದಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಸದಸ್ಯರನ್ನಾಗಿಸಲಾಗಿದೆ. ಜು.1 ರಂದು ಶಿವಮೊಗ್ಗದಲ್ಲಿ ಸದಸ್ಯತ್ವ ಅಭಿಯಾನ ಕಾರ್ಯಾಗಾರ ನಡೆಯಲಿದ್ದು, ಜಿಲ್ಲೆಯಲ್ಲಿ 5 ಲಕ್ಷ ಸದಸ್ಯರನ್ನು ಮಾಡಿಸುವ ಗುರಿ ಹೊಂದಲಾಗಿದೆ ಎಂದರು. ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಇದು ರಾಜಕೀಯ ವಸ್ತುವಾಗಬಾರದು. ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳ ಪರಿಸ್ಥಿತಿಯನ್ನು ಒಮ್ಮೆ ನೋಡಬೇಕು. ಶಾಲೆಗಳ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದರು.
Advertisement

Udayavani is now on Telegram. Click here to join our channel and stay updated with the latest news.

Next