Advertisement

ಪ್ರಜಾಪ್ರಭುತ್ವವೇ ಶ್ರೇಷ್ಠ: ಡಿಸಿ

05:24 PM Apr 26, 2019 | Team Udayavani |

ಶಿವಮೊಗ್ಗ: ಪ್ರಜಾಪ್ರಭುತ್ವವೇ ಅತ್ಯಂತ ಶ್ರೇಷ್ಠ ಪದ್ಧತಿ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಹೇಳಿದರು.

Advertisement

ಗುರುವಾರ ಬೆಳಗ್ಗೆ ಪ್ರಸ್‌ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಸಂವಾದ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರ್ವಾಧಿಕಾರ, ಕಮ್ಯೂನಿಸಂ, ಸಮತಾವಾದ, ಸಮಾಜವಾದ ಈ ಎಲ್ಲ ಪದ್ಧತಿಗಳಿಗಿಂತ ಪ್ರಜಾಪ್ರಭುತ್ವವೇ ಮೇಲು. ಆದರೆ ಇದರ ಅರಿವನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಲು ನಾವು ಸೋತಿದ್ದೇವೆ ಎಂದರು.

ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಚುನಾವಣೆಗಳೇ ಜೀವಾಳ. ಈ ಚುನಾವಣೆಗಳು ಯಶಸ್ವಿಯಾಗಲು ಮತದಾನದ ಅರಿವು ಜಾಗೃತಿಯಾಗಬೇಕು. ಹೆಚ್ಚು ಮತದಾನವಾದಂತೆ ಜನಸಾಮಾನ್ಯರಲ್ಲಿ ರಾಜಕೀಯ ಪ್ರಜ್ಞೆ ಬೆಳೆಯುವುದರ ಜೊತೆಗೆ ಪ್ರಜಾಪ್ರಭುತ್ವ ಗಟ್ಟಿಯಾಗಲು ಕಾರಣವಾಗುತ್ತದೆ. ಹಾಗಾಗಿಯೇ ಜಿಲ್ಲಾಡಳಿತ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಆಂದೋಲನವನ್ನೇ ಮಾಡಬೇಕಾಗಿ ಬಂತು. ಇದು ಯಶಸ್ವಿಯಾಗಿದೆ ಎಂಬ ಸಮಾಧಾನ ನಮಗಿದೆ ಎಂದರು.

ಹಾಗಂತ ಜಿಲ್ಲಾಡಳಿತ ಒಂದು ನೆಪ ಮಾತ್ರ. ಒಂದು ಒಳ್ಳೆಯ ಕೆಲಸ ಮಾಡಲು ಹೊರಟರೆ ಜನರಿಂದ ಖಂಡಿತ ಒಳ್ಳೆಯ ಸ್ಪಂದನೆ ಸಿಗುತ್ತದೆ ಎಂಬುದು ನಮಗೀಗ ಅರಿವಾಗಿದೆ. ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ಮಾಧ್ಯಮಗಳು, ಸಾರ್ವಜನಿಕರು ಹೀಗೆ ಎಲ್ಲ ನಿಟ್ಟಿನಿಂದ ನಮಗೆ ಸಹಕಾರ ನೀಡಿದ್ದಾರೆ. ಒಳ್ಳೆಯದನ್ನು ನಮ್ಮ ಜನರು ನಿಜಕ್ಕೂ ಸ್ವಾಗತಿಸುತ್ತಾರೆ. ಪ್ರೇರೇಪಿಸುತ್ತಾರೆ. ಈ ಬಾರಿ ಹೆಚ್ಚು ಮತದಾನವಾಗಲು ಇದೇ ಕಾರಣ. ಈ ನಿಟ್ಟಿನಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಪ್ರತಿಯೊಬ್ಬರಿಗೂ ವಂದನೆಗಳು ಎಂದರು.

Advertisement

ಮತದಾನ ಜಾಗೃತಿ ಮೂಡಿಸಲು ಹೊರಟಾಗ ನಮಗೆ ಅನೇಕ ರೀತಿಯ ಪ್ರಶ್ನೆಗಳನ್ನು ಸಾರ್ವಜನಿಕರು ಕೇಳಿದರು. ವಿದ್ಯಾರ್ಥಿಗಳಂತೂ ಏಕೆ ಓಟು ಹಾಕಬೇಕು ಎಂದು ನೇರವಾಗಿಯೇ ಕೇಳುತ್ತಿದ್ದರು. ಅವರೆಲ್ಲರಿಗೂ ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸುವುದರ ಜೊತೆಗೆ ಸರ್ವಾಧಿಕಾರಿಯಿಂದ ಆಗುವ ಅಪಾಯಗಳು ಮತ್ತು ಸರ್ವಾಧಿಕಾರ ಇರುವ ರಾಷ್ಟ್ರಗಳಲ್ಲಿ ಏನಾಗುತ್ತಿದೆ ಎಂಬ ಸತ್ಯವನ್ನು ತಿಳಿಸುವ ಅವಕಾಶ ಸಿಕ್ಕಿದ್ದು, ಒಳ್ಳೆಯದೇ ಆಯಿತು ಎಂದುಕೊಂಡೆವು ಎಂದರು.

ಬಹುತೇಕವಾಗಿ ವಿದ್ಯಾರ್ಥಿಗಳು ನಮ್ಮ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಮಗಂತೂ ಹೆಮ್ಮೆಯಾಗಿದೆ. ಸುಮಾರು 100 ವಿದ್ಯಾರ್ಥಿಗಳು ಮತದಾನ ಜಾಗೃತಿಗಾಗಿಯೇ ಉಪವಾಸ ಕುಳಿತಿದ್ದು ಕೂಡ ಒಂದು ದಾಖಲೆಯೇ ಸರಿ. ಯಾರಿಗಾದರೂ ಹಾಕಿ ಮತ ಹಾಕಿ ಎಂದು ಹೇಳಿದಾಗ ಜನರ ಪ್ರತಿಕ್ರಿಯೆ ನಿಜಕ್ಕೂ ತುಂಬಾ ಗಂಭೀರ ಮತ್ತು ಮತ ಹಾಕಲೇಬೇಕು ಎಂಬ ನಿರ್ಧಾರಕ್ಕೆ ಬರುವುದನ್ನು ಕಂಡು ನಮಗಂತೂ ಖುಷಿಯಾಗಿತ್ತು ಎಂದರು.

ಚುನಾವಣಾ ಜಾಗೃತಿ ಮೂಡಿಸಲು ಒಂದು ರೀತಿಯ ಪಾಠ ಹೇಳಲು ಹೊರಟ ನಮ್ಮ ತಂಡಕ್ಕೆ ಪಾಠ ಹೇಳಿದ ತೃಪ್ತಿಗಿಂತ ಪಾಠ ಕಲಿತಿದ್ದೇ ಹೆಚ್ಚು ಎನಿಸಿತ್ತು. ಇದರ ಜೊತೆ ಜೊತೆಗೆ ಸಾಮಾಜಿಕ ನ್ಯಾಯದ ಅರಿವು ಕೂಡ ಮೂಡಿಸಲಾಗಿತ್ತು.

100ಕ್ಕೆ 100ರಷ್ಟು ನಾವು ಸಾಧನೆ ಮಾಡದೇ ಇದ್ದರೂ ಆ ಬಗ್ಗೆ ಅರಿವು ಮೂಡಿಸಿದ್ದಂತೂ ಹೊಸತನಕ್ಕೆ ದಾರಿಯಾಗಿತ್ತು. ಈಗ ನಾವು ಎರಡನೇ ಹಂತದ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಮತದಾನವಾಗಿ ಮೊದಲ ಸ್ಥಾನದಲ್ಲಿ ಇದ್ದೇವೆ ಎನ್ನುವುದು ನಮಗೆ ಹೆಮ್ಮೆಯ ವಿಷಯ ಎಂದರು.

ಹಣ, ಹೆಂಡ, ಜಾತಿ ಇವುಗಳಿಂದ ಚುನಾವಣೆಗಳು ಮುಕ್ತವಾಗಬೇಕಾಗಿದೆ. ಮುಂದಿನ ಯುವ ಜನಾಂಗ ಇದಕ್ಕೆ ಹತ್ತಿರವಾಗುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದ ಅವರು, ಮತದಾನ ಹೆಚ್ಚಳಕ್ಕೆ ಕಾರಣವಾದ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 18 ವರ್ಷಗಳ ನಂತರ ದಾಖಲೆ ಮಾಡಿದ್ದಕ್ಕಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.ಪ್ರಸ್ಟ್‌ ಟ್ರಸ್ಟ್‌ ಅಧ್ಯಕ್ಷ ಎನ್‌. ಮಂಜುನಾಥ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next