Advertisement

ಫಸಲ್ ವಿಮಾ ಯೋಜನೆ ಅನುಷ್ಠಾನ

05:34 PM Jun 03, 2019 | Naveen |

ಶಿವಮೊಗ್ಗ: ರೈತರಿಗೆ ಕೃಷಿಯಲ್ಲಿ ನಿಶ್ಚಿತ ಆದಾಯ ದೊರಕಿಸಿಕೊಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲೆಯಲ್ಲಿ ಅಗ್ರಿಕಲ್ಚರ್‌ ಇನ್ಶೂರೆನ್ಸ್‌ ಕಂಪನಿ ಇವರ ಸಹಯೋಗದೊಂದಿಗೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹೋಬಳಿ ಹಾಗೂ ಗ್ರಾಪಂ ಮಟ್ಟದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಜಿಲ್ಲೆಯ ಎಲ್ಲಾ ರೈತರು ಈ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಅವರು ತಿಳಿಸಿದರು.

Advertisement

ಶನಿವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಬೆಳೆ ವಿಮೆ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಅರ್ಹ ರೈತರು ನಿಗದಿಪಡಿಸಿದ ಅವಧಿಯೊಳಗಾಗಿ ವಿಮಾ ನೋಂದಣಿ ಮಾಡಿಸಿಕೊಳ್ಳಲು ಅನುಕೂಲವಾಗುವಂತೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಕೃಷಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಹಾಗೂ ಬ್ಯಾಂಕುಗಳ ವ್ಯವಸ್ಥಾಪಕರ ಸಭೆ ನಡೆಸಿ, ವ್ಯಾಪಕ ಪ್ರಚಾರ ಕೈಗೊಂಡು ಅತಿ ಹೆಚ್ಚಿನ ರೈತರು ನೋಂದಾಯಿಸಿಕೊಳ್ಳಲು ಪ್ರೇರಣೆ ನೀಡುವಂತೆ ಕ್ರಮ ಕೈಗೊಳ್ಳಲು ಅವರು ಅಧಿಕಾರಿಗಳಿಗೆ ಸೂಚಿಸಿದರು.

ರಾಷ್ಟ್ರೀಕೃತ ಹಾಗೂ ರಾಷ್ಟ್ರೀಕೃತವಲ್ಲದ ಸಹಕಾರಿ ಬ್ಯಾಂಕುಗಳಿಂದ ಬೆಳೆಸಾಲ ಪಡೆದ ಸಾಲಗಾರ ರೈತರಿಗೆ ಬ್ಯಾಂಕುಗಳಲ್ಲಿಯೇ ಕಡ್ಡಾಯವಾಗಿ ಬೆಳೆವಿಮೆ ಮಾಡಿಸಲಾಗುತ್ತದೆ. ಆದರೆ, ಸಾಲಗಾರರಲ್ಲದ ರೈತರು ಬೆಳೆವಿಮೆಗೆ ಹೆಸರು ನೋಂದಾಯಿಸಿಕೊಳ್ಳಲು ಬ್ಯಾಂಕುಗಳಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದ ಅವರು, ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಬೆಳೆಗಾರರು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಸೂಚಿಸಿದರು.

ಆರ್ಥಿಕ ಮತ್ತು ಸಾಂಖ್ಯೀಕ ಇಲಾಖೆಯ ಮೂಲಕ ಬೆಳೆಹಾನಿಗೆ ಸಂಬಂಧಿಸಿದಂತೆ ಕೃಷಿ, ಕಂದಾಯ, ತೋಟಗಾರಿಕೆ, ಪಂಚಾಯತ್‌ ಅಭಿವೃದ್ಧಿ ಇಲಾಖೆಯ ನಿಯೋಜಿತ ಅಧಿಕಾರಿಗಳ ತಂಡವು ತಂತ್ರಜ್ಞಾನಾಧಾರಿತ ಅಂದರೆ, ಮೊಬೈಲ್ ಆ್ಯಪ್‌ ಬಳಸಿ, ಜಿಪಿಎಸ್‌ ಆಧಾರದ ಮೇಲೆ ಕೈಗೊಳ್ಳಲಾಗುವ ಬೆಳೆ ಕಟಾವು ಪ್ರಯೋಗಗಳಿಂದ ಬಂದ ಮಾಹಿತಿಯನ್ನಾಧರಿಸಿ ಮೊತ್ತ ಪರಿಹಾರವನ್ನು ಇತ್ಯರ್ಥಪಡಿಸಲಾಗುವುದು ಎಂದ ಅವರು, ವಿಮಾ ಮೊತ್ತ ಪಾವತಿಸುವ ರೈತರು ಬಿತ್ತನೆಗೂ ಮೊದಲು ಹಣ ಪಾವತಿಸಬಹುದಾಗಿದೆ. ಅಲ್ಲದೇ ಹಣ ಪಾವತಿಯ ನಂತರವೂ ಬೆಳೆ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ. ಶಿವಮೊಗ್ಗ ತಾಲೂಕಿನ ಹಾರ್ನಳ್ಳಿ, ಹೊಳಲೂರು-1, ಕುಂಸಿ, ನಿಧಿಗೆ-1, ಶಿವಮೊಗ್ಗ-1 ಮತ್ತು ಶಿವಮೊಗ್ಗ-2 ಹೋಬಳಿ, ಭದ್ರಾವತಿ ತಾಲೂಕಿನ ಭದ್ರಾವತಿ-2 ಮತ್ತು ಕೂಡ್ಲಿಗೆರೆ ಹೋಬಳಿ, ಶಿಕಾರಿಪುರ ತಾಲೂಕಿನ ಅಂಜನಾಪುರ, ಹೊಸೂರು ಮತ್ತು ತಾಳಗುಂದ ಹೋಬಳಿ ಹಾಗೂ ಸೊರಬ ತಾಲೂಕಿನ ಆನವಟ್ಟಿ ಹೋಬಳಿಗಳು ಮಳೆ ಆಶ್ರಿತವಾಗಿ ಹಾಗೂ ಶಿಕಾರಿಪುರ ತಾಲೂಕಿನ ಹೊಸೂರು ಹೋಬಳಿಯನ್ನು ಮಳೆ ಆಶ್ರಿತ ಮೆಕ್ಕೆಜೋಳ ಬೆಳೆಯನ್ನು ನಿಗಪಡಿಸಲಾಗಿದೆ. ಶಿವಮೊಗ್ಗ ತಾಲೂಕಿನ 40ಗ್ರಾಪಂಗಳಲ್ಲಿ ನೀರಾವರಿ ಆಶ್ರಯದಲ್ಲಿ ಭತ್ತ, 13 ಪಂಚಾಯತ್‌ಗಳಲ್ಲಿ ಮಳೆ ಆಶ್ರಿತ ಭತ್ತ, 11ಪಂಚಾಯತ್‌ಗಳಲ್ಲಿ ನೀರಾವರಿ ಆಶ್ರಿತ ಮೆಕ್ಕೆಜೋಳ ಮತ್ತು 33ಪಂಚಾಯತ್‌ಗಳಲ್ಲಿ ಮಳೆ ಆಶ್ರಿತ ಮೆಕ್ಕೆಜೋಳ ಬೆಳೆಯನ್ನು ನಿಗದಿಪಡಿಸಲಾಗಿದೆ.ಭದ್ರಾವತಿ ತಾಲೂಕಿನ 40 ಪಂಚಾಯತ್‌ಗಳಲ್ಲಿ ನೀರಾವರಿ ಆಶ್ರಯದಲ್ಲಿ ಭತ್ತ ಮತ್ತು 18ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಮಳೆ ಆಶ್ರಿತ ಮೆಕ್ಕೆಜೋಳ, ತೀರ್ಥಹಳ್ಳಿ ತಾಲೂಕಿನ 38ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ನೀರಾವರಿ ಮತ್ತು ಮಳೆ ಆಶ್ರಿತ ಭತ್ತ, ಸಾಗರ ತಾಲೂಕಿನ 36 ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ನೀರಾವರಿ ಆಶ್ರಿತ ಭತ್ತ, 34 ಪಂಚಾಯತ್‌ಗಳಲ್ಲಿ ಮಳೆ ಆಶ್ರಿತ ಭತ್ತ ಹಾಗೂ 11ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಮಳೆ ಆಶ್ರಿತ ಮುಸುಕಿನ ಜೋಳ ಬೆಳೆಗಳನ್ನು ನಿಗದಿಪಡಿಸಲಾಗಿದೆ. ಹೊಸನಗರ ತಾಲೂಕಿನ 29 ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ನೀರಾವರಿ ಭತ್ತ, 30 ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಮಳೆ ಆಶ್ರಿತ ಭತ್ತ ಹಾಗೂ 6 ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಮಳೆ ಆಶ್ರಿತ ಮೆಕ್ಕೆಜೋಳ, ಶಿಕಾರಿಪುರ ತಾಲೂಕಿನ 46 ಪಂಚಾಯತ್‌ ವ್ಯಾಪ್ತಿಯಲ್ಲಿ ನೀರಾವರಿ ಭತ್ತ, 3ಪಂಚಾಯತ್‌ ವ್ಯಾಪ್ತಿಯಲ್ಲಿ ಮಳೆ ಆಶ್ರಿತ ಭತ್ತ, 27 ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ನೀರಾವರಿ ಆಶ್ರಿತ ಹಾಗೂ 45 ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಮಳೆ ಆಶ್ರಿತ ಮೆಕ್ಕೆಜೋಳ ಹಾಗೂ ಸೊರಬ ತಾಲೂಕಿನ 41 ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ನೀರಾವರಿ ಭತ್ತ ಹಾಗೂ 40 ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಮಳೆ ಆಶ್ರಿತ ಭತ್ತ, 7ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರಾವರಿ ಆಶ್ರಿತ ಮತ್ತು 41ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಮಳೆ ಆಶ್ರಿತ ಮೆಕ್ಕೆಜೋಳ ಬೆಳೆಯನ್ನು ವಿಮೆಗೆ ಆಯ್ಕೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next