Advertisement

ನಗರ ಸ್ವಚ್ಛಗೊಳಿಸಲು ಯೋಜನೆ: ಚೆನ್ನಬಸಪ್ಪ

04:24 PM Jul 15, 2019 | Naveen |

ಶಿವಮೊಗ್ಗ: ಒಂದು ತಿಂಗಳು ನಿಗದಿಪಡಿಸಿ ಇಡೀ ನಗರವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ ಎಂದು ಉಪ ಮೇಯರ್‌ ಎಸ್‌. ಎನ್‌. ಚೆನ್ನಬಸಪ್ಪ ಹೇಳಿದರು.

Advertisement

ಗೋಪಾಳದ ಆಲ್ಅರೀಮ್‌ ಬಡಾವಣೆಯಲ್ಲಿ ವನಸಿರಿ ಗೋಪಾಳ ನಿವಾಸಿಗಳ ಸಂಘದ ಆಶ್ರಯದಲ್ಲಿ ಬೃಂದಾವನ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಈ ಒಂದು ತಿಂಗಳಲ್ಲಿ ಇಡೀ ನಗರದಲ್ಲಿ ಎಲ್ಲಿಯೂ ಯಾವುದೇ ರೀತಿಯ ಕಸ ಇರಬಾರದು. ಈ ರೀತಿ ಯೋಜನೆ ರೂಪಿಸಲಾಗುತ್ತಿದೆ. ಇಂತಹ ಯೋಜನೆಗಳಿಗೆ ಜನರು ಮತ್ತು ನಾಗರಿಕ ಸಂಘಟನೆಗಳು ಕೈಜೋಡಿಸಬೇಕು. ಆಗ ಮಾತ್ರ ಇವುಗಳನ್ನು ಯಶಸ್ವಿಯಾಗಿ ಸಾಕಾರಗೊಳಿಸಲು ಸಾಧ್ಯ ಎಂದು ಹೇಳಿದರು.

ಇದೇ ರೀತಿ ನಗರ ವ್ಯಾಪ್ತಿಯಲ್ಲಿ ಒಟ್ಟು 100 ಪಾರ್ಕ್‌ಗಳನ್ನು ಗುರುತಿಸಲಾಗಿದ್ದು, ಇವುಗಳನ್ನು ಅಭಿವೃದ್ಧಿಪಡಿಸಲು ಯೋಜನೆ ಸಿದ್ಧಗೊಳ್ಳುತ್ತಿದೆ. ಈ ಯೋಜನೆಯಲ್ಲಿ ಈ ಪಾರ್ಕ್‌ ಅನ್ನು ಸೇರಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದೇ ರೀತಿ ನಗರ ವ್ಯಾಪ್ತಿಯಲ್ಲಿನ ಕೆರೆಗಳನ್ನು ಗುರುತಿಸಲಾಗಿದೆ. ಇವುಗಳನ್ನು ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ರೀತಿ ಹಸ್ತಾಂತರವಾದ ಬಳಿಕ ಇವುಗಳನ್ನು ಸ್ವಚ್ಛಗೊಳಿಸಿ, ಮಳೆ ನೀರು ಕೊಯ್ಲು ಮೂಲಕ ನೀರು ಸಂಗ್ರಹಿಸುವ ಕಾರ್ಯ ಮಾಡಲಾಗುವುದು. ಇವುಗಳ ಮೂಲಕ ಆಯಾ ಬಡಾವಣೆಗೆ ನೀರು ಒದಗಿಸುವ ಚಿಂತನೆಯಿದೆ. ಬೆಂಗಳೂರಿನಲ್ಲಿ ರೂಪಿಸಲಾಗುತ್ತಿರುವ ಮಾದರಿಯನ್ನು ಅಧ್ಯಯನ ಮಾಡಲಾಗುತ್ತಿದೆ. ಇದೆಲ್ಲ ಇನ್ನೂ ಪ್ರಾಥಮಿಕ ಹಂತದ ಚಿಂತನೆ. ಇದಕ್ಕೆ ಸರ್ಕಾರದ ನೆರವು ಇದ್ದರೆ ಮಾತ್ರ ಸಾಧ್ಯ. ಶಾಸಕರಾದ ಈಶ್ವರಪ್ಪ ಅವರ ಜೊತೆ ಈ ವಿಷಯದಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

Advertisement

ರಾಜ್ಯ ಸಹಕಾರಿ ಮಂಡಳದ ಸದಸ್ಯ ಹಾಗೂ ಅಡಕೆ ಮಂಡಿ ವರ್ತಕರ ಸಂಘದ ಅಧ್ಯಕ್ಷ ಡಿ. ಬಿ. ಶಂಕರಪ್ಪ ಮಾತನಾಡಿ, ಕೇವಲ ಗಿಡ ನೆಡುವುದಲ್ಲ, ಬದಲಾಗಿ ಅವುಗಳನ್ನು ಉಳಿಸಿಕೊಳ್ಳಲು ಟ್ರೀಗಾರ್ಡ್‌ ಅನ್ನು ಕೂಡ ಈಗಲೇ ವ್ಯವಸ್ಥೆ ಮಾಡಿಕೊಂಡಿರುವುದು ಶ್ಲಾಘನೀಯ. ಇನ್ನಷ್ಟು ಜನರು ಕೈಜೋಡಿಸಬೇಕು ಎಂದರು.

ಪತ್ರಕರ್ತ ಗೋಪಾಲ್ ಯಡಗೆರೆ ಮಾತನಾಡಿ, ನಗರದ ಅತ್ಯುತ್ತಮ ನಾಗರಿಕ ಸಂಘಟನೆಗಳಲ್ಲಿ ವನಸಿರಿ ಸಂಘಟನೆಯೂ ಒಂದು. ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಘಟನೆಗೆ ಯುವ ಪಡೆ ಕೈಜೋಡಿಸಿ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದರು.

ಶಂಕರ ವಲಯದ ರೇಂಜರ್‌ ಅಧಿಕಾರಿ ಹಿರೇಮs್ ಮಾತನಾಡಿ, ಆರಂಭದಲ್ಲಿ ಇರುವ ಉತ್ಸಾಹ ಕೊನೆಯವರೆಗೂ ಇರುವುದಿಲ್ಲ. ಕೇವಲ ಪ್ರಚಾರಕ್ಕೋಸ್ಕರ ಕಾರ್ಯಕ್ರಮ ರೂಪಿಸುತ್ತಾರೆ. ಆದರೆ ಈ ಸಂಘಟನೆ ನಿಜವಾಗಿಯೂ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ. ಪ್ರತಿಯೊಬ್ಬರೂ ಈ ಕಾರ್ಯದಲ್ಲಿ ಕೈಜೋಡಿಸಬೇಕೆಂದರು. ಬಡಾವಣೆಯ ಹಿರಿಯ ನಾಗರಿಕ ವೆಂಕಟೇಶ್‌ ರೆಡ್ಡಿ ಇದ್ದರು. ವನಸಿರಿ ಗೋಪಾಳ ನಿವಾಸಿಗಳ ಸಂಘದ ಅಧ್ಯಕ್ಷ ಡಾ|ಶ್ರೀನಿವಾಸ ರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೊಡ್ಡ ಸಂಖ್ಯೆಯಲ್ಲಿ ಗಿಡ ನೆಟ್ಟು ಕಡಿಮೆ ಸಂಖ್ಯೆಯ ಗಿಡ ಉಳಿಸಿಕೊಳ್ಳುವ ಬದಲು ಕಡಿಮೆ ಸಂಖ್ಯೆಯ ಗಿಡ ನೆಟ್ಟು ಪ್ರತಿಯೊಂದನ್ನೂ ರಕ್ಷಿಸುವ ಗುರಿ ಹೊಂದಿದ್ದೇವೆ. ಇದಕ್ಕೆ ಟ್ರೀಗಾರ್ಡ್‌ ಒದಗಿಸಲು ದಾನಿಗಳು ನೆರವಾಗಿದ್ದಾರೆ ಎಂದರು. ಕಾರ್ಯದರ್ಶಿ ಉಮೇಶ್‌ ಬಾಪಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next