ಶಿವಮೊಗ್ಗ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿವಿ ಪ್ಯಾಟ್ ಬಳಸುತ್ತಿಲ್ಲ. ಆದರೆ ಅಣಕು ಮತದಾನ ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಸೂಚನೆ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ನಿಯೋಜಿತ ಸಿಬ್ಬಂದಿಗಳಿಗೆ ಮಂಗಳವಾರ ನಗರದಲ್ಲಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಈ ಸೂಚನೆ ನೀಡಿದರು.
ಕಳೆದ ಆರು ತಿಂಗಳಲ್ಲಿ ಇದು ಮೂರನೇ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧಗೊಂಡಿದೆ. ಬಹುತೇಕ ಅದೇ ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ತೊಡಗಿದ್ದಾರೆ. ಸಾಕಷ್ಟು ತರಬೇತಿ ನೀಡಿದ ಬಳಿಕವೂ ಕೆಲವರು ತಪ್ಪುಗಳನ್ನು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿವಿ ಪ್ಯಾಟ್‌ನಲ್ಲಿ ಮೊದಲು ಅಣಕು ಮತದಾನ ನಡೆದ ಬಳಿಕ ಅವುಗಳನ್ನು ಅಳಿಸಿ ನಂತರ ಮತದಾನ ಪ್ರಕ್ರಿಯೆ ಆರಂಭಿಸಬೇಕು ಎಂದು ತರಬೇತಿ ವೇಳೆ ಸೂಚಿಸಲಾಗಿತ್ತು. ಆದರೂ ಮೂರು ಮತದಾನ ಕೇಂದ್ರಗಳಲ್ಲಿ ವಿವಿ ಪ್ಯಾಟ್‌ನಲ್ಲಿನ ಅಣಕು ಮತಗಳನ್ನು ಅಳಿಸದೆಯೇ ಮತದಾನ ಪ್ರಕ್ರಿಯೆ ನಡೆಸಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ ಎರಡು ಹಾಗೂ ಶಿಕಾರಿಪುರ ತಾಲೂಕಿನ ಒಂದು ಮತದಾನ ಕೇಂದ್ರದಲ್ಲಿ ಈ ರೀತಿ ಆಗಿದೆ. ಇಂತಹ ಪ್ರಕರಣಗಳು ನಡೆದಾಗ ಚುನಾವಣಾ ಆಯೋಗ ಶಿಕ್ಷೆಗೆ ಗುರಿಪಡಿಸುವುದು ಖಚಿತ. ಹಾಗಾಗಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.
ಹೆಸರು ಬೇರೆ ವಾರ್ಡ್‌ಗೆ ಹೋಗಿರಬಹುದು: ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗೂ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಮತದಾರರ ಪಟ್ಟಿಗೂ ಅಲ್ಪ ವ್ಯತ್ಯಾಸ ಆಗುತ್ತದೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ವಾರ್ಡ್‌ವಾರು ಜನಸಂಖ್ಯೆ ಆಧರಿಸಿ ಭೌತಿಕ ವಿಂಗಡಣೆ ಮಾಡಿದಾಗ ಮತದಾರರ ಹೆಸರು ವಾರ್ಡ್‌ವಾರು ಬದಲಾಗಿರುವ ಸಾಧ್ಯತೆ ಇರುತ್ತದೆ. ಮತದಾರರು ಈ ಬಗ್ಗೆ ಸರಿಯಾದ ಮಾಹಿತಿಯೊಂದಿಗೆ ಮತಗಟ್ಟೆಗೆ ಆಗಮಿಸಲಿ ಎಂದು ಮನವಿ ಮಾಡಿದರು.