Advertisement

ಇವಿಎಂ ಕೈಬಿಡಲು ಆಗ್ರಹ

12:00 PM Jun 30, 2019 | Naveen |

ಶಿವಮೊಗ್ಗ: ಚುನಾವಣೆಯಲ್ಲಿ ಮತದಾನಕ್ಕೆ ಬಳಸಲಾಗುವ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಸಂಶಯಗಳಿರುವ ಹಿನ್ನೆಲೆಯಲ್ಲಿ ಇವುಗಳ ಬಳಕೆಯನ್ನು ಕೈಬಿಟ್ಟು ಹಿಂದಿನ ರೀತಿಯಲ್ಲಿ ಮತಪತ್ರ ಬಳಸಬೇಕೆಂದು ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಹಾಗೂ ಜಿಪಂ ಸದಸ್ಯೆ ಕೆ. ಅನಿತಾ ಕುಮಾರಿ ಆಗ್ರಹಿಸಿದರು.

Advertisement

ಜಿಲ್ಲಾ ಮಹಿಳಾ ಕಾಂಗ್ರೆಸ್‌ ವತಿಯಿಂದ ‘ಇವಿಎಂ ತೊಲಗಿಸಿ ಮತಪತ್ರ ಬಳಸಿ ಪ್ರಜಾಪ್ರಭುತ್ವ ಉಳಿಸಿ’ ಎಂಬ ಅಭಿಯಾನ ಹಮ್ಮಿಕೊಂಡಿದ್ದು, ಹೊಳೆಹೊನ್ನೂರು ಹೋಬಳಿ ವ್ಯಾಪ್ತಿಯ ಜಂಬೂರುಘಟ್ಟ ಮತ್ತು ಅರಹತೊಳಲಿನಲ್ಲಿ ರಾಷ್ಟ್ರಪತಿಗೆ ಪತ್ರ ಚಳವಳಿ ಹಿನ್ನೆಲೆಯಲ್ಲಿ ಪತ್ರ ಬರೆದು ಅಂಚೆ ಪೆಟ್ಟಿಗೆಗೆ ಹಾಕುವ ಮೂಲಕ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವತ್ರಿಕ ಚುನಾವಣೆಗಳು ಮಹತ್ತರ ಪಾತ್ರ ವಹಿಸಲಿವೆ. ಕೋಟ್ಯಂತರ ಮತದಾರರಿರುವ ನಮ್ಮ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವುದು ಸುಲಭದ ಕೆಲಸವಲ್ಲ. ಮತಗಟ್ಟೆ ಸ್ಥಾಪನೆ‌, ಅಕ್ರಮ ಮತದಾನ ತಡೆಗಟ್ಟುವಿಕೆ, ಮತ ಎಣಿಕೆ ಸುಲಭವಲ್ಲ ನ್ಯಾಯಸಮ್ಮತ ಹಾಗೂ ಸಮರ್ಪಕ ಚುನಾವಣೆ ನಡೆಸುವಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ. ಈ ಎಲ್ಲಾ ಸವಾಲುಗಳನ್ನು ಎದುರಿಸಲು ಇವಿಎಂಗಳನ್ನು ಬಳಸಲಾಗುತ್ತಿದೆ ಎಂದರು.

1952ರಿಂದ 1999ರವರೆಗೆ ನಡೆದ ಎಲ್ಲಾ ಸಾರ್ವತ್ರಿಕ ಚುನಾವಣೆ ಹಾಗೂ ಉಪ ಚುನಾವಣೆಗಳಲ್ಲಿ ಮತಪತ್ರಗಳ ಮೂಲಕ ಮತದಾನ ನಡೆಯುತ್ತಿತ್ತು. ನಂತರ ನಡೆದ ಕೆಲ ಸಾರ್ವತ್ರಿಕ ಹಾಗೂ ಉಪ ಚುನಾವಣೆಗಳಲ್ಲಿ ಇವಿಎಂಗಳು ಬಳಕೆಯಾದರೂ 2004ರಲ್ಲಿ ಜರುಗಿದ ಲೋಕಸಭಾ ಹಾಗೂ ಕರ್ನಾಟಕ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭಾ ಸಾರ್ವತ್ರಿಕ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಯಿತು.

ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ಜರುಗಿದ 2008ರ ವಿಧಾನಸಭಾ ಚುನಾವಣೆಯಲ್ಲಿಯೂ ಈ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಯಿತು ಎಂದು ತಿಳಿಸಿದರು.

Advertisement

ಬೆಂಗಳೂರಿನ ಬಿ.ಇ.ಎಲ್. ಮತ್ತು ಹೈದ್ರಾಬಾದಿನ ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಶನ್‌ ಆಫ್‌ ಇಂಡಿಯಾ 1989-90ರಲ್ಲಿ ರೂಪಿಸಿದ ಈ ವಿದ್ಯುನ್ಮಾನ ಮತಯಂತ್ರ ಬಳಕೆ ಸಾರ್ವಜನಿಕ ವಲಯದಲ್ಲಿ ಶಂಕೆಗೆ ಕಾರಣವಾಗಿದೆ. ಇಂದಿನ ಎಲೆಕ್ಟ್ರಾನಿಕ್‌ ಯುಗದಲ್ಲಿ ತಂತ್ರಾಂಶವನ್ನು ಅನುಕೂಲಕ್ಕೆ ತಕ್ಕಂತೆ ಬದಲಾಯಿಸಬಹುದಾಗಿದೆ. ನ್ಯಾಯ ಸಮ್ಮತ ಚುನಾವಣೆಗಾಗಿ ಮತಪತ್ರಗಳನ್ನು ಬಳಸುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆ ಲತಾ, ಕೆಪಿಸಿಸಿ ಸದಸ್ಯೆ ಎಂ.ವಿ. ಕವಿತಾ, ಗ್ರಾಪಂ ಸದಸ್ಯೆಯರು ಹಾಗೂ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next