ಶಿವಮೊಗ್ಗ: ಯಾವುದೇ ಭಾಷೆಯನ್ನು ದ್ವೇಷಿಸಬಾರದು ಮತ್ತು ಸಂಕುಚಿತ ಭಾವನೆಯನ್ನು ತೋರಬಾರದು ಎಂದು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಹೇಳಿದರು.
ಶನಿವಾರ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯಭಾಷಾ ಸಂಘರ್ಷ ಸಮಿತಿ ಶಿವಮೊಗ್ಗ ಶಾಖೆ ವತಿಯಿಂದ ಆಯೋಜಿಸಿದ್ದ ಹಿಂದಿ ಸಾಹಿತ್ಯ ಪೂರ್ಣಿಮಾ ಸಮಾರಂಭ, ಊಸರವಳ್ಳಿ ಪುಸ್ತಕ ಬಿಡುಗಡೆ, ಕಾವ್ಯಗೋಷ್ಠಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆ ಎಂಬುದು ನಮ್ಮ ಬದುಕಿಗೆ ಪೂರಕ ಮತ್ತು ಪ್ರೇರಕ. ಆದರೆ ಭಾರತದಲ್ಲಿ ಭಾಷೆಗೆ ಸಂಬಂಧಿಸಿದಂತೆ ದ್ವೇಷಗಳು ಹುಟ್ಟಿಕೊಳ್ಳುತ್ತಿರುವುದು ಅಪಾಯ ಮತ್ತು ವಿಪರ್ಯಾಸವಾಗಿದೆ. ಯಾವುದೇ ಭಾಷೆಯು ನಮ್ಮ ಬುದ್ಧಿಶಕ್ತಿ ಮತ್ತು ವಿವೇಕವನ್ನು ವಿಸ್ತರಿಸಬೇಕೇ ಹೊರತು ದ್ವೇಷಕ್ಕಾಗಿ ಅಲ್ಲ. ಮಾತೃಭಾಷೆಯ ಜೊತೆಗೆ ಉಳಿದೆಲ್ಲ ಭಾಷೆಗಳಿಗೆ ಗೌರವ ಕೊಡಬೇಕು. ಸಾಧ್ಯವಾದರೆ ಅವುಗಳನ್ನು ಕಲಿಸಬೇಕು ಎಂದರು.
ಭಾರತದ ಉದ್ದಗಲಕ್ಕೂ ಇರುವ ಭಾಷೆಗಳು ಸಾಮರಸ್ಯ ಸಂಪರ್ಕದ ಕೊಂಡಿಗಳಾಗಿವೆ. ಇದು ಐಕ್ಯತೆಯ ಸಂಕೇತ ಮತ್ತು ವ್ಯಕ್ತಿತ್ವ ರೂಪಿಸಲು ಸಹಾಯಕವಾಗುತ್ತದೆ. ಇದರಲ್ಲಿ ಹಿಂದಿ ಕೂಡ ಒಂದು ಸರಳ ಸುಂದರ ಭಾಷೆಯಾಗಿದೆ. ಹಿಂದಿ ಭಾಷೆ ಬಗ್ಗೆ ಉದಾಸೀನ ಮಾಡಬಾರದು. ಅದು ರಾಷೀr್ರಯ ಭಾಷೆಯಾಗಿದೆ ಎಂದರು.
ಕನ್ನಡ ಪ್ರೇಮಿ ಮತ್ತು ಕನ್ನಡತಿಯಾದ ನಾನು ಹಿಂದಿ ಭಾಷೆಯ ಕಾರ್ಯಕ್ರಮದಲ್ಲಿ ಹಿಂದಿಯಲ್ಲಿ ಮಾತನಾಡಿದರೆ ಕಲ್ಲು ತೆಗೆದುಕೊಂಡು ಹೊಡೆಯುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ. ಅದರಲ್ಲೂ ಹಿಂದಿ ಭಾಷೆಯನ್ನು ವಾಪಸ್ ಪಡೆಯಬೇಕೆಂಬ ಚಳವಳಿಗಳು ನಡೆಯುತ್ತಿವೆ. ಇದು ನಿಜಕ್ಕೂ ವಿಷಾದನೀಯ. ಯಾವುದೇ ಚಳವಳಿಗಳು ಮನುಷ್ಯನನ್ನು ಮನುಷ್ಯನನ್ನಾಗಿಸಲು ಇರಬೇಕೇ ಹೊರತು. ದ್ವೇಷಕ್ಕಾಗಿ ಅಲ್ಲ ಎಂದರು.
ಕಾರ್ಯಕ್ರಮದಲ್ಲಿ ಹಿಂದಿ ಕಥಾಸಂಕಲನ ಗಿರಗಿಟ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಊಸರವಳ್ಳಿ ಪುಸ್ತಕವನ್ನು ಲಖ್ನೋದ ಜಿಲ್ಲಾ ರಕ್ಷಣಾಧಿಕಾರಿ ಡಾ| ಅಖೀಲೇಶ್ ನಿಗಂ ಬಿಡುಗಡೆ ಮಾಡಿದರು. ಜಿಲ್ಲಾ ಶಾಖೆಯ ಅಧ್ಯಕ್ಷೆ ಡಾ| ಜಿ.ಎಸ್. ಸರೋಜ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ| ಎನ್. ಸಿದ್ದಯ್ಯ, ಜಿ.ವಿ. ನಾಗರತ್ನಮ್ಮ, ಜಯಸಿಂಹ, ಅಕ್ತಾರ್, ಓಂಕಾರಪ್ಪ, ಕವಿತಾ ಮತ್ತಿತರರು ಇದ್ದರು.