ಶಿವಮೊಗ್ಗ: ಎಡೆಬಿಡದೆ ಸುರಿಯುತ್ತಿರುವ ಮಳೆ, ನೆರೆಹಾನಿ, ಬೆಲೆ ಏರಿಕೆ ನಡುವೆಯೇ ಬೆಳಕಿನ ಹಬ್ಬ ದೀಪಾವಳಿಯ ಸಡಗರಕ್ಕೆ ಸಿದ್ಧತೆ ನಗರದೆಲ್ಲೆಡೆ ಸದ್ದಿಲ್ಲದೇ ನಡೆಯುತ್ತಿದೆ. ಕಳೆದ ಹಲವು ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿದೆ. ತಗ್ಗಿನ ಪ್ರದೇಶಗಳಿಗೆ ನೀರು ನುಗ್ಗಿ ಬಹಳಷ್ಟು ಜನರ ಬದುಕು ಸಂಕಷ್ಟಕ್ಕೆ ಈಡಾಗಿದೆ. ಈ ಹಿಂದೆ ನೆರೆಹಾನಿಗೆ ತುತ್ತಾದ ಸಂತ್ರಸ್ತರು ಇನ್ನೂ ಚೇತರಿಸಿಕೊಂಡಿಲ್ಲ. ಇವುಗಳ ಮಧ್ಯೆಯೇ ಹಬ್ಬಗಳು ಸಾಲುಸಾಲಾಗಿ ಬರುತ್ತಿವೆ. ಈಗಾಗಲೇ ದಸರಾ ಹಬ್ಬವನ್ನು ಆಚರಿಸಿದ ಜನರು ಇದೀಗ ಮತ್ತೆ ವಿಶೇಷ ದೀಪಾವಳಿ ಹಬ್ಬಕ್ಕೆ ಸಡಗರದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದರೂ ಮಾರುಕಟ್ಟೆಯಲ್ಲಿ ಜನಸಾಗರವನ್ನೇ
ನೋಡಬಹುದಾಗಿದೆ. ತರಕಾರಿ ಬೆಲೆಯಂತೂ ಗಗನಕ್ಕೆ ಏರಿದೆ. ಸೈನ್ಸ್ ಮೈದಾನ, ನೆಹರೂ ಕ್ರೀಡಾಂಗಣದ ಆವರಣ ಸೇರಿದಂತೆ ಹಲವೆಡೆ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ. ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ಗಾಂಧಿ ಬಜಾರ್, ಶಿವಪ್ಪ ನಾಯಕ ಮಾರುಕಟ್ಟೆ, ನೆಹರೂ ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆಗಳಲ್ಲಿ ಹಾಗೂ ಎಲ್ಲ ವೃತ್ತಗಳಲ್ಲಿ ಜನಜಂಗುಳಿ ಹೆಚ್ಚಾಗಿದ್ದು, ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಾರುಕಟ್ಟೆಯಲ್ಲಿ ಹೂವು ಹಣ್ಣಿನ ಬೆಲೆ ಏರಿಕೆ ಕಂಡಿದೆ. ಸೇವಂತಿಗೆ ಮಾರೊಂದಕ್ಕೆ 100 ರೂ. ಗೆ ಮಾರಾಟವಾಗುತ್ತಿದೆ. ಆದರೆ ಚೆಂಡು ಹೂವಿನ ಬೆಲೆ ಮಾತ್ರ ತುಸು ದುಬಾರಿಯಾಗಿದೆ.
ಇನ್ನು ಸೇಬು ಹಣ್ಣಿನ ಬೆಲೆ 80ರಿಂದ 100ರೂ. ಮೂಸಂಬಿ ಪ್ರತಿ ಕೆ.ಜಿ.ಗೆ 80ರೂ., ದ್ರಾಕ್ಷಿ 100ರೂ., ಕಿತ್ತಳೆ 60 ರೂ., ಸೀತಾಫಲ 80ರೂ., ಸಪೋಟ 60ರೂ. ಆಸುಪಾಸಿನಲ್ಲಿದೆ. ದೀಪಾವಳಿ ಹಬ್ಬವೆಂದರೆ ಬೆಳಕಿನ ಹಬ್ಬವೆಂದೇ ಪ್ರಸಿದ್ಧಿ ಪಡೆದಿದೆ. ಹೀಗಾಗಿಯೇ ಹಬ್ಬದ ದಿನದಂದು ಹಣತೆಗಳ ಖರೀದಿಗೆ ಜನತೆ ಹೆಚ್ಚಿನ ಆಸಕ್ತಿ ತೋರುತ್ತಾರೆ. ಈ ವರ್ಷ ವಿಧ- ವಿಧವಾದ ಹಣತೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಗ್ರಾಹಕರ ಅಭಿರುಚಿ ಹಾಗೂ ಆರ್ಥಿಕ ಸ್ಥಿತಿಗೆ ತಕ್ಕಂತೆ ಹಣತೆಗಳನ್ನು ಕೊಂಡುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಪ್ರಯಾಣಿಕರ ಅನುಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ. ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಬೆಂಗಳೂರು- ಶಿವಮೊಗ್ಗ ಮಧ್ಯ ಸಂಚರಿಸುವ ಬಹುತೇಕ ಬಸ್ ಗಳಲ್ಲಿ ಮುಂಗಡ ಕಾಯ್ದಿರಿಸುವಿಕೆಯ ಸೀಟುಗಳು ಭರ್ತಿಯಾಗಿದ್ದವು. ರೈಲುಗಳಲ್ಲೂ ಮುಂಗಡ ಕಾಯ್ದಿರಿಸುವಿಕೆಯ ಸೀಟುಗಳು ಭರ್ತಿಯಾಗಿದ್ದವು. ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಹಬ್ಬಕ್ಕೆ ಬರುವವರಿಂದ ಜನಜಂಗುಳಿ ಉಂಟಾಗಿತ್ತು.