Advertisement

ಸಂಸದರಿಂದ ಜನರಿಗೆ ವಂಚನೆ

11:36 AM Jul 07, 2019 | Team Udayavani |

ಶಿವಮೊಗ್ಗ: ಸಂಸದರಾಗಿ ಕಳೆದ 15 ವರ್ಷಗಳಿಂದ ಪ್ರತಿನಿಧಿಸುತ್ತಿರುವ ಅಪ್ಪ- ಮಕ್ಕಳು ಜಿಲ್ಲೆಯ ಪ್ರತಿಷ್ಠಿತ ಎಂಪಿಎಂ ಹಾಗೂ ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸಲು ಸಂಪೂರ್ಣ ವಿಫಲರಾಗಿದ್ದು, ಚುನಾವಣಾ ಸಂದರ್ಭದಲ್ಲಿ ಮಾತ್ರ ಮತದಾರರಿಗೆ ಸುಳ್ಳು ಹೇಳುತ್ತಾ ಜಿಲ್ಲೆಯ ಜನರಿಗೆ ವಂಚಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ‌ ಎಚ್.ಎಸ್‌. ಸುಂದರೇಶ್‌ ವಾಗ್ಧಾಳಿ ನಡೆಸಿದರು.

Advertisement

ಶನಿವಾರ ಕಾಂಗ್ರೆಸ್‌ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್‌ನ ಎಲ್ಲ ಪದಾಧಿಕಾರಿಗಳ ಮತ್ತು ಬ್ಲಾಕ್‌ ಮಟ್ಟದ ಪದಾಧಿಕಾರಿಗಳು ಹಾಗೂ ಹಿರಿಯ ಕಾಂಗ್ರೆಸ್ಸಿಗರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇವತ್ತಿನ ಸಭೆಯಲ್ಲಿ ಮೂರು ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗಿದೆ. ಮೊದಲನೆಯದಾಗಿ ಶರಾವತಿ ನದಿ ನೀರನ್ನು ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಬಿಡಬಾರದು. ಈಗಾಗಲೇ ಶರಾವತಿ ಪಾತ್ರದ ಜನರಿಗೆ ಅನ್ಯಾಯವಾಗಿದೆ. ಇನ್ನೂ ನ್ಯಾಯ ದೊರೆತಿಲ್ಲ. ಆದ್ದರಿಂದ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಜು.10ರ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ತೀರ್ಮಾನಿಸಲಾಯಿತು.

ವಿಐಎಸ್‌ಎಲ್ ಉಳಿಸಲು ಜಿಲ್ಲೆಯಲ್ಲಿ ಕಾಂಗ್ರೆಸ್‌ ದೊಡ್ಡ ಮಟ್ಟದ ಹೋರಾಟಕೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲು ಬಿಡುವುದಿಲ್ಲ. ಶೀಘ್ರದಲ್ಲೇ ವಿಐಎಸ್‌ಎಲ್ ಉಳಿಸಲು ಪಕ್ಷ‌ ದೊಡ್ಡಮಟ್ಟದ ಹೋರಾಟ ಹಮ್ಮಿಕೊಳ್ಳಲಿದ್ದು, ದಿನಾಂಕವನ್ನು ಪ್ರಕಟಿಸಲಾಗುವುದು ಎಂದರು.

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ಮಹಿಳಾ ವಿತ್ತ ಸಚಿವೆ ಮಹಿಳೆಯರಿಗಾಗಲಿ, ಯುವಕರಿಗಾಗಲಿ ಯಾವುದೇ ಕೊಡುಗೆ ನೀಡಿಲ್ಲ. ಸಣ್ಣ ಕೈಗಾರಿಕೆಗಳಿಗೂ ಏನನ್ನೂ ನೀಡದೆ ಅನ್ಯಾಯ ಮಾಡಿದೆ. 2014ರ ಚುನಾವಣೆಯಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದರೂ ಜನ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಈಗ ಮೋದಿ ಸರ್ಕಾರದ ನಿಜ ಬಣ್ಣ ಬಯಲಾಗಿದ್ದು, ಇನ್ನಾದರೂ ಮತದಾರರು ಎಚ್ಚೆತ್ತುಕೊಳ್ಳಬೇಕು ಎಂದರು.

Advertisement

ಪಕ್ಷ‌ ಸಂಘಟನೆಗೆ ಒತ್ತು ನೀಡಿದ್ದು, ಜಿಲ್ಲೆಯಲ್ಲಿ ಯುವಕರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ‌ಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಪ್ರತಿ ಬ್ಲಾಕ್‌ ಮಟ್ಟದಲ್ಲಿ ಪಕ್ಷ‌ ಸಂಘಟಿಸಲಾಗುವುದು. ಹೊಸ ಸದಸ್ಯತ್ವ ನೋಂದಣಿ ಮಾಡಲಾಗುವುದು ಹಾಗೂ ಪಕ್ಷ‌ಕ್ಕೆ ಮುಜುಗರ ತರುವವರಿಗೆ ಇನ್ನು ಮುಂದೆ ಕಾಂಗ್ರೆಸ್‌ನಲ್ಲಿ ಜಾಗವಿಲ್ಲ. ಗುಂಪುಗಾರಿಕೆಗೆ ಅವಕಾಶವಿಲ್ಲ. ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಂಗ್ರೆಸ್‌ ಅಧ್ಯಕ್ಷ‌ ರಾಹುಲ್ ಗಾಂಧಿ ಅವರ ರಾಜೀನಾಮೆ ಅಂಗೀಕರಿಸಬಾರದು. ಅವರೇ ಅಧ್ಯಕ್ಷ‌ರಾಗಿ ಮುಂದುವರಿಯಬೇಕು. ರಾಹುಲ್ ಗಾಂಧಿ ಅವರು ರಾಜೀನಾಮೆ ವಾಪಸ್‌ ಪಡೆಯಬೇಕೆಂಬ ತೀರ್ಮಾನವನ್ನು ಎಐಸಿಸಿಗೆ ಕಳುಹಿಸಲಾಯಿತು.

ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್‌, ಪ್ರಮುಖರಾದ ಬೇಳೂರು ಗೋಪಾಲಕೃಷ್ಣ, ಇಸ್ಮಾಯಿಲ್ ಖಾನ್‌, ಎಸ್‌.ಪಿ. ದಿನೇಶ್‌, ಎಚ್.ಎಂ. ಚಂದ್ರಶೇಖರಪ್ಪ, ರಾಮೇಗೌಡ, ವೇದಾ ವಿಜಯಕುಮಾರ್‌, ಎಸ್‌.ಪಿ. ಶೇಷಾದ್ರಿ, ಬಲ್ಕಿಷ್‌ ಬಾನು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next