Advertisement

ಅವಿಶ್ವಾಸ ಗೊತ್ತುವಳಿಯಲ್ಲಿ ಶಿಮುಲ್ ಅಧ್ಯಕ್ಷರಿಗೆ ಸೋಲು: ಪ್ರಭಾರ ಅಧ್ಯಕ್ಷರ ನೇಮಕ

02:26 PM Oct 22, 2021 | keerthan |

ಶಿವಮೊಗ್ಗ: ಅವಿಶ್ವಾಸ ಗೊತ್ತುವಳಿಯಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಡಿ.ಆನಂದ್ ಗೆ ಸೋಲಾಗಿದೆ. ಎಲ್ಲಾ ನಿರ್ದೇಶಕರು ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿದ್ದಾರೆ. ಈ ಮಧ್ಯೆ ಡಿ.ಆನಂದ್ ಅವರು ಅವಿಶ್ವಾಸ ಗೊತ್ತುವಳಿ ಸಭೆಗೆ ಗೈರಾಗಿದ್ದರು.

Advertisement

ಶಿವಮೊಗ್ಗ ಹಾಲು ಒಕ್ಕೂಟದ ಆಡಳಿತ ಸಭಾಂಗಣದಲ್ಲಿ ಅವಿಶ್ವಾಸ ಸಭೆ ನಡೆಯಿತು. 14 ನಿರ್ದೇಶಕರ ಪೈಕಿ 13 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಎಲ್ಲಾ ನಿರ್ದೇಶಕರು ಶಿಮುಲ್ ಅಧ್ಯಕ್ಷ ಡಿ.ಆನಂದ್ ಅವರ ವಿರುದ್ಧ ಮತ ಚಲಾಯಿಸಿದ್ದಾರೆ. ಇದರಿಂದಾಗಿ ಡಿ.ಆನಂದ್ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತಾಗಿದೆ.

ಸಹಕಾರ ಸಂಘಗಳ ಉಪನಿಬಂಧಕ ನಾಗೇಶ್ ಎಸ್.ಡೋಂಗ್ರೆ ಅವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಬಸವರಾಜು ಅವರು ಸಭೆಯಲ್ಲಿದ್ದರು

ಶಿಮುಲ್ ನಲ್ಲಿ ಮುಂದೇನು?: ಅಧ್ಯಕ್ಷರ ಪದಚ್ಯುತಿಯ ಹಿನ್ನೆಲೆ ಆಡಳಿತಾತ್ಮಕ ದೃಷ್ಟಿಯಿಂದ ಶಿಮುಲ್ ಉಪಾಧ್ಯಕ್ಷರೇ ಅಧ್ಯಕ್ಷರ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಶಿಮುಲ್ ಉಪಾಧ್ಯಕ್ಷ ಹೆಚ್.ಕೆ.ಬಸಪ್ಪ ಅವರು ಪ್ರಭಾರ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ನೂತನ ಅಧ್ಯಕ್ಷರಿಗಾಗಿ ಚುನಾವಣೆ ನಡೆಯಲಿದೆ. ಇದಕ್ಕಾಗಿ ಸಹಕಾರ ಇಲಾಖೆ ಚುನಾವಣಾ ದಿನಂಕ ಪ್ರಕಟಿಸಲಿದೆ.

ಪದಚ್ಯುತಿ ಯಾಕೆ?:  ಅಧ್ಯಕ್ಷರ ಅವಧಿ ಮುಗಿದ ಹಿನ್ನೆಲೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ ಸ್ಥಾನ ಬಿಟ್ಟುಕೊಡಲು ಡಿ.ಆನಂದ್ ಅವರು ನಿರಾಕರಿಸಿದ್ದರು. ಹಾಗಾಗಿ 14 ನಿರ್ದೇಶಕರ ಪೈಕಿ 10 ನಿರ್ದೇಶಕರು ಡಿ.ಆನಂದ್ ಅವರ ವಿರುದ್ಧ ಅವಿಶ್ವಾಸ ಮಂಡನೆಗೆ ಸಭೆ ಕರೆಯಬೇಕು ಎಂದು ಜೂನ್ ತಿಂಗಳಲ್ಲಿ ನೊಟೀಸ್ ನೀಡಿದ್ದರು. ಈ ಹಿನ್ನೆಲೆ ಜೂನ್ 15ರಂದು ಸಭೆ ನಿಗದಿಪಡಿಸಲಾಗಿತ್ತು. ಆದರೆ ತಡೆಯಾಜ್ಞೆ ಕೋರಿ ಡಿ.ಆನಂದ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

Advertisement

ಇದನ್ನೂ ಓದಿ:ಕಾಂಗ್ರೆಸ್‍ಗೆ ನಾಯಕತ್ವ, ಸಂಘಟನೆ, ಸಾಧನೆ ಇಲ್ಲ: ಈಶ್ವರಪ್ಪ

ಕೋವಿಡ್ ಸಂದರ್ಭದಲ್ಲಿ ಯಾವುದೆ ಸ್ಥಳೀಯ ಸಂಸ್ಥೆ, ಸಹಕಾರಿ ಸಂಸ್ಥೆಗಳ ಚುನಾವಣೆ ನಡೆಸಬಾರದು ಎಂದು ಸರ್ಕಾರ ಆದೇಶಿಸಿದೆ. ಇಂತಹ ಸಂದರ್ಭ ಅವಿಶ್ವಾಸ ಮಂಡನೆಗೆ ಅವಕಾಶ ನೀಡುವುದು ಸರಿಯಲ್ಲ. ಒಂದು ವೇಳೆ ಅಧ್ಯಕ್ಷರ ಪದಚ್ಯುತಿಯಾದರೆ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ಅಧ್ಯಕ್ಷರಿಲ್ಲದೆ ಇದ್ದರೆ ಆಡಳಿತಾತ್ಮಕ ಸಮಸ್ಯೆ ಉಂಟಾಗಲಿದೆ. ಆದ್ದರಿಂದ ಅವಿಶ್ವಾಸ ಮಂಡನೆಗೆ ಅವಕಾಶ ನೀಡಬಾರದು ಎಂದು ಡಿ.ಆನಂದ್ ಅವರು ಕೋರ್ಟ್ ಮೊರೆ ಹೋಗಿದ್ದರು.

ಅರ್ಜಿ ವಜಾ: ಶಿಮುಲ್ ಅಧ್ಯಕ್ಷ ಡಿ.ಆನಂದ್ ಅವರು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ನಲ್ಲಿ ವಜಾಗೊಂಡಿತ್ತು. ಹಾಗಾಗಿ ಹೈಕೋರ್ಟ್ ನ ಮತ್ತೊಂದು ಪೀಠದಲ್ಲಿ ಡಿ.ಆನಂದ್ ಅವರು ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯೂ ವಜಾಗೊಂಡಿದ್ದರಿಂದ ಇವತ್ತು ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ನಿಗದಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next