ಶಿವಮೊಗ್ಗ: ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸಣ್ಣಪುಟ್ಟ ದೋಷಗಳಿದ್ದರೂ ಭಾರತದ ಆರ್ಥಿಕ ವ್ಯವಸ್ಥೆ ತಳಹದಿ ಗಟ್ಟಿಗೊಳಿಸುವ ಬಜೆಟ್ ಇದಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ| ಕೆ.ಸಿ. ಬಸವರಾಜ್ ಅಭಿಪ್ರಾಯಪಟ್ಟರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶಿವಮೊಗ್ಗ ಎಕಾನಾಮಿಕ್ಸ್ ಫೋರಂ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕೇಂದ್ರ ಬಜೆಟ್ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಸ್ವಲ್ಪ ಮಟ್ಟಿನ ಕುಸಿತ ಕಾಣುವುದಕ್ಕೆ ವಿಶ್ವ ಮಟ್ಟದಲ್ಲಿ ಉಂಟಾದ ಆರ್ಥಿಕ ಹಿನ್ನಡೆಯೂ ಕಾರಣ ಎಂದು ತಿಳಿಸಿದರು. ರಾಜಕೀಯ ಮತ್ತು ಆರ್ಥಿಕ ನಿರ್ವಹಣೆ ದೃಷ್ಟಿಯಿಂದ ಬಜೆಟ್ ಮೇಲೆ ವಿಶ್ವಾಸ ಇಡಬಹುದು. ಭಾರೀ ಬಹುಮತದಿಂದ ಬಿಜೆಪಿ ಆಡಳಿತಕ್ಕೆ ಬಂದ ಹಿನ್ನಲೆಯಲ್ಲಿ ಜನರ ನಿರೀಕ್ಷೆ ಸಹಜವಾಗಿ ಹೆಚ್ಚಿತ್ತು. ಆದರೆ ನಿರೀಕ್ಷೆ ಮಟ್ಟದಲ್ಲಿ ಬಜೆಟ್ ಮಂಡಿಸಿಲ್ಲ. ಆದರೂ ಬಜೆಟ್ ಉತ್ತಮ ಅಂಶಗಳಿಂದ ಕೂಡಿದೆ ಎಂದರು.
ಕಳೆದ ವರ್ಷದಲ್ಲಿ ವಿತ್ತೀಯ ಕೊರತೆ ಶೇ 3.4 ರಷ್ಟು ಹಂತಕ್ಕೆ ಇಳಿಸಿರುವುದು 5 ವರ್ಷಗಳಲ್ಲಿ ಕಂಡುಬಂದಿರುವ ಸಾಧನೆಯಾಗಿದೆ. ನೇರ ತೆರಿಗೆಗಳ ಮೂಲಕ ಶೇ. 70ರಷ್ಟು ಆದಾಯ ಸಂಗ್ರಹ ಮಾಡಲಾಗಿದೆ. ಅಪ್ರತ್ಯಕ್ಷ ತೆರಿಗೆ ಮೂಲಕವೂ ಆದಾಯ ಹೆಚ್ಚಿಸುವಲ್ಲಿ ನಿರ್ವಹಣೆ ಚೆನ್ನಾಗಿದೆ ಎಂದು ಡಾ| ಕೆ.ಸಿ. ಬಸವರಾಜ್ ಹೇಳಿದರು. ಜಿ.ಎಸ್.ಟಿ. ತೆರಿಗೆಯು ಅಪ್ರತ್ಯಕ್ಷ ತೆರಿಗೆ ಸಂಗ್ರಹದಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಬಳಕೆಯಲ್ಲಿರುವ ಉತ್ತಮ ಮಾದರಿಯಾಗಿದೆ. ಕೇಂದ್ರ ಸರ್ಕಾರ ಸಂಪನ್ಮೂಲ ಕ್ರೊಢೀಕರಿಸುವಲ್ಲಿ ಯಶಸ್ವಿಯಾಗಿದೆ. ಜಿಎಸ್‌ಟಿ ಅನುಷ್ಠಾನ ಮಾಡುವಲ್ಲಿ ಗೊಂದಲ ಉಂಟಾಗಿತ್ತು. ಆದರೆ ಹಂತ ಹಂತವಾಗಿ ಲೋಪಗಳನ್ನು ಸರಿಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ಕ್ಷೇತ್ರದಲ್ಲಿ ದ್ವಿದಳ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿರುವುದು ಉತ್ತರ ಭಾರತದ ಅನೇಕ ರಾಜ್ಯಗಳಿಗೆ ಉಪಯುಕ್ತ ಆಗುತ್ತಿದೆ. ಆದರೆ ರಾಜ್ಯದಲ್ಲಿ ಉಪಯುಕ್ತವಾಗುತ್ತಿಲ್ಲ. ಇದರಿಂದ ಸಾಲಮನ್ನಾ ಕೂಗು ಕೇಳಿಬರುತ್ತಿದೆ. ಕೃಷಿ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಯು ಕಾರ್ಪೊರೇಟ್‌ಗಳಿಗೆ ಲಾಭವಾಗುತ್ತದೆಯೇ ಹೊರತು ಉತ್ತೇಜನಕಾರಿಯಾಗುವುದಿಲ್ಲ. ಸಾಮಾನ್ಯ ರೈತನ ಸಮಸ್ಯೆಗಳಿಗೆ ಪರಿಹಾರ ನೀಡುವುದಿಲ್ಲ ಎಂದರು.
ಸಂಘದ ತೆರಿಗೆ ಸಲಹಾ ಸಮಿತಿ ಅಧ್ಯಕ್ಷ ಮಧುಸೂದನ್ ಐತಾಳ್ ಮಾತನಾಡಿ, ಬಜೆಟ್ ಅನ್ನು ಕೈಗಾರಿಕೆ ಮತ್ತು ಡಿಜಿಟಲ್ ಇಂಡಿಯಾಕ್ಕೆ ಪೂರಕ ಆಗಿರುವಂತೆ ರೂಪಿಸಲಾಗಿದೆ. 1.5 ಕೋಟಿ ರೂ.ಗಿಂತ ಕಡಿಮೆ ವಾರ್ಷಿಕ ವಹಿವಾಟು ನಡೆಸುವ ವ್ಯಾಪಾರಸ್ಥರಿಗೆ ವಿಮಾ ಯೋಜನೆ ಘೋಷಣೆಯಾಗಿದೆ. 3 ಕೋಟಿ ಸಣ್ಣ ವ್ಯಾಪಾರಿಗಳಿಗೆ ವಿಮಾ ಯೋಜನೆ, ಮಹಿಳಾ ಉದ್ದಿಮೆ ಪ್ರೋತ್ಸಾಹಿಸಲು ಸಾಲ ಸೌಲಭ್ಯ ಸೇರಿ ಉತ್ತಮ ಬಜೆಟ್ ಮಂಡನೆಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್. ವಾಸುದೇವ್, ನಿಕಟಪೂರ್ವ ಅಧ್ಯಕ್ಷ ಡಿ.ಎಂ. ಶಂಕರಪ್ಪ, ಶಿವಮೊಗ್ಗ ಎಕಾನಾಮಿಕ್ಸ್ ಫೋರಂ ಅಧ್ಯಕ್ಷ ಟಿ.ಆರ್. ಮಂಜುನಾಥ್, ಕಾರ್ಯದರ್ಶಿ ಬಿ.ಆರ್. ಸಂತೋಷ್, ಬಿ. ಗೋಪಿನಾಥ್, ಜಿ. ವಿಜಯಕುಮಾರ್, ಡಾ| ವೆಂಕಟೇಶ್, ಪ್ರೊ| ಸತ್ಯನಾರಾಯಣ್, ಎಸ್.ಎಸ್. ಉದಯ್‌ಕುಮಾರ್ ಇದ್ದರು.