ಶಿವಮೊಗ್ಗ: ನಗರದ ಶಿವಪ್ಪನಾಯಕ ವೃತ್ತದ ಸುತ್ತಲಿನ ಪ್ರದೇಶಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗಿದ್ದ ತಳ್ಳುಗಾಡಿಯ ವ್ಯಾಪಾರಸ್ಥರನ್ನು ತೆರವುಗೊಳಿಸಲಾಯಿತು. ಈ ವೇಳೆ ಪೊಲೀಸರು ಮತ್ತು ವ್ಯಾಪಾರಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.
ಶಿವಪ್ಪನಾಯಕ ಪ್ರತಿಮೆ ಬಳಿ (ಗಾಂಧಿ ಬಜಾರ್ ಪ್ರವೇಶದ್ವಾರ) ತಳ್ಳುಗಾಡಿ ವ್ಯಾಪಾರಕ್ಕೆ ಅನುಮತಿ ನಿರಾಕರಿಸಲಾಗಿದೆ. ಆದರೆ ಬುಧವಾರ ಬೆಳಗ್ಗೆ ಕೆಲ ವ್ಯಾಪಾರಿಗಳು ತಳ್ಳುಗಾಡಿಯಲ್ಲಿ ಹಣ್ಣು ಮಾರಾಟ ಆರಂಭಿಸಿದ್ದರು. ಇದನ್ನು ಗಮನಿಸಿದ ಪೊಲೀಸರು, ಕೂಡಲೇ ಗಾಡಿಗಳನ್ನು ತೆರವುಗೊಳಿಸುವಂತೆ ಸೂಚಿಸಿದರು. ಈ ವೇಳೆ, ಪೊಲೀಸರು ಮತ್ತು ವ್ಯಾಪಾರಿಗಳ ನಡುವೆ ಮಾತಿಗೆ ಮಾತು ಬೆಳೆದಿದೆ.
ಶಿವಪ್ಪನಾಯಕ ಸರ್ಕಲ್ ಮುಂಭಾಗದಲ್ಲಿ ಹಣ್ಣು, ಹೂ ಮಾರಾಟ ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇಲ್ಲಿ ವ್ಯಾಪಾರ ಮಾಡಬೇಡಿ ಎಂದು ಪದೇ ಪದೇ ಹೇಳಿದರೂ ಕೂಡ ಮಾರಾಟ ಮಾಡುವುದನ್ನು ಬಿಡುತ್ತಿಲ್ಲ. ಇದರಿಂದ ರಸ್ತೆ ಎರಡೂ ಬದಿಗಳಲ್ಲಿ ಇಕ್ಕಟ್ಟಾಗಿದ್ದು, ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಜನರು ಓಡಾಡಲು ಕೂಡ ತೊಂದರೆಯಾಗುತ್ತಿದೆ ಎಂಬುದು ಪೊಲೀಸರ ವಾದವಾಗಿದೆ.
ನಾವು ಬಡವರು ಯಾರಿಗೂ ತೊಂದರೆಯಾಗದಂತೆ ಹೂ, ಹಣ್ಣು ಮಾರಿಕೊಂಡು ಅದರಲ್ಲೇ ಜೀವನ ನಿರ್ವಹಿಸುತ್ತಿದ್ದೇವೆ. ಪೊಲೀಸರು ಇದ್ದಕ್ಕಿದ್ದಂತೆ ಬಂದು ನಮ್ಮ ತಳ್ಳು ಗಾಡಿಯಲ್ಲಿದ್ದ ಹೂ, ಹಣ್ಣುಗಳನ್ನೆಲ್ಲ ರಸ್ತೆಗೆ ಚೆಲ್ಲಿದ್ದಾರೆ ಎಂದು ವ್ಯಾಪಾರಸ್ಥರು ಆರೋಪಿಸಿದರು.
ಶಿವಪ್ಪ ನಾಯಕ ಸರ್ಕಲ್ ಜನನಿಬಿಡ ಪ್ರದೇಶವಾಗಿದ್ದು, ವಾಹನ ದಟ್ಟಣೆ ಕೂಡ ಹೆಚ್ಚಾಗಿರುತ್ತದೆ. ಗಾಂಧಿಬಜಾರ್, ಕರ್ನಾಟಕ ಸಂಘ, ಅಮೀರ್ ಅಹಮ್ಮದ್ ವೃತ್ತ, ವೀರಶೈವ ಕಲ್ಯಾಣ ಮಂದಿರ ರಸ್ತೆಯಿಂದ ಹೆಚ್ಚಿನ ಸಂಖ್ಯೆಯ ಜನ ಮತ್ತು ವಾಹನ ಬಂದು ಹೋಗುವುದರಿಂದ ಸದಾಕಾಲ ಜನ, ವಾಹನಗಳಿಂದ ತುಂಬಿರುತ್ತದೆ. ಇಂತಹ ರಸ್ತೆಯಲ್ಲೆ ವ್ಯಾಪಾರಕ್ಕೆ ಗಾಡಿಗಳನ್ನು ನಿಲ್ಲಿಸುವುದರಿಂದ ಜನ ಓಡಾಡಲು ಕೂಡ ಕಷ್ಟವಾಗುತ್ತಿದೆ ಎಂಬುದು ಸಾರ್ವಜನಿಕರ ದೂರು ಆಗಿದೆ. ತೆರುವುಗೊಳಿಸಿದ್ದನ್ನು ವಿರೋಧಿಸಿ ವ್ಯಾಪಾರಸ್ಥರೆಲ್ಲರೂ ದಿಢೀರ್ ಪ್ರತಿಭಟನೆಗೆ ಇಳಿದು ಪೊಲೀಸರ ಕ್ರಮ ಖಂಡಿಸಿ ತಮಗೆ ಹೂ, ಹಣ್ಣು ಮಾರಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸುಮಾರು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈ ಮಾರ್ಗದಲ್ಲಿ ಸಂಪರ್ಕಿಸುವ ರಸ್ತೆಗಳಲ್ಲಿಯೂ ಸಂಚಾರಕ್ಕೆ ಅಡಚಣೆಯಾಗಿತ್ತು. ಬಿ.ಎಚ್. ರಸ್ತೆ ಸಂಪರ್ಕಿಸುವ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿತ್ತು. ಇದರಿಂದಾಗಿ ನಗರದ ಪ್ರಮುಖ ರಸ್ತೆ, ಕೂಡು ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದ ಸವಾರರು ಪರದಾಡುವಂತಾಯಿತು.