ಶಿವಮೊಗ್ಗ: ಭದ್ರಾ ಅಣೆಕಟ್ಟಿನಿಂದ ಬಲ ಮತ್ತು ಎಡ ನಾಲೆಗಳಿಗೆ ಮೇ ತಿಂಗಳ ಕೊನೆಯವರೆಗೂ ನೀರು ಹರಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಬೇಸಿಗೆ ಹಂಗಾಮಿನಲ್ಲಿಬೆಳೆಗಳಿಗೆ ನೀರು ಹರಿಸಲಾಗುತ್ತಿದೆ. ಎಡ ಮತ್ತು ಭದ್ರಾ ನಾಲೆಯಿಂದ 25,574 ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತ ಬೆಳೆದಿದ್ಧಾರೆ. ಭತ್ತ ಹೂ ಕಟ್ಟುವ ಸಮಯವಾಗಿದ್ದು ಜೊತೆಗೆ ಅಡಕೆ ಹಿಂಗಾರು ಒಡೆಯುತ್ತಿದೆ. ಬೆಳೆ ಫಸಲಿಗೆ ಬರುವ ಸಂದರ್ಭದಲ್ಲಿ ನೀರಿನ ಅವಶ್ಯಕತೆ ಇದೆ ಎಂದರು.
ಭದ್ರಾ ಮತ್ತು ಎಡದಂಡೆ ನಾಲೆಗಳಿಗೆ ಜ.2ರ ಮಧ್ಯರಾತ್ರಿಯಿಂದ 125 ದಿನಗಳವರೆಗೆ ನೀರು ಹರಿಸಲು ವೇಳಾಪಟ್ಟಿ ನಿಗದಿ ಪಡಿಸಲಾಗಿದೆ. ಈ ದಿನಾಂಕ ಮೇ 6ಕ್ಕೆ ಕೊನೆಯಾಗುತ್ತದೆ. ಇದರಿಂದಾಗಿ ಕೃಷಿಯನ್ನೇ ನಂಬಿಕೊಂಡ ಸಾವಿರಾರು ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು
ಅಚ್ಚುಕಟ್ಟು ಪ್ರದೇಶದ ರೈತರು ಸಾಲ ಮಾಡಿ ಬಂಡವಾಳ ಹಾಕಿದ್ದಾರೆ. ಭತ್ತ ಬೆಳೆಯಲು ಎಕರೆಗೆ ಸುಮಾರು 30 ಸಾವಿರ ರೂ.ಖರ್ಚು ಮಾಡಿದ್ದಾರೆ. ನಾಲೆಗಳಿಗೆ ನೀರು ನಿಲ್ಲಿಸುವುದರಿಂದ ಭತ್ತ, ಅಡಕೆ, ತೆಂಗು, ಕಬ್ಬು ಇತರೆ ಬೆಳೆ ನಂಬಿ ಅವಲಂಬಿತರಾಗಿರುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ನೀರು ನಿಲ್ಲಿಸಿದರೆ ರೈತರು ಆರ್ಥಿಕ ಸಂಕಷ್ಟ ಎದುರಿಸಲಿದ್ದಾರೆ ಎಂದು ತಿಳಿಸಿದರು.
ಈ ಬಗ್ಗೆ ಗಮನ ಹರಿಸಿ ಮೇ ತಿಂಗಳ ಕೊನೆಯವರೆಗೆ ನಾಲೆಗಳಿಗೆ ನೀರು ಹರಿಸುವ ಮೂಲಕ ಬೆಳೆ ನಷ್ಟವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನಗರದ ಮಹದೇವಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಎಸ್. ಗಿರೀಶ್, ಶಿವಕುಮಾರ್, ಮಧುಸೂದನ್, ಚೇತನ್, ಬಿ.ಎ. ರಮೇಶ್ ಹೆಗ್ಡೆ, ನಿರಂಜನ್ ಮತ್ತಿತರರು ಇದ್ದರು.