Advertisement

ಭದ್ರಾ ನಾಲೆಯಿಂದ ನೀರು ಬಿಡಲು ಒತ್ತಾಯ

01:25 PM May 05, 2019 | Naveen |

ಶಿವಮೊಗ್ಗ: ಭದ್ರಾ ಅಣೆಕಟ್ಟಿನಿಂದ ಬಲ ಮತ್ತು ಎಡದಂಡೆ ನಾಲೆಗಳಿಗೆ ಮೇ ತಿಂಗಳ ಅಂತ್ಯದವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಮಲವಗೊಪ್ಪದ ಕಾಡಾ ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಮತ್ತು ಜಲ ಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಲಾಯಿತು.

Advertisement

ಬೇಸಿಗೆ ಹಂಗಾಮಿನಲ್ಲಿ ರೈತರು ಭತ್ತ ಬೆಳೆಯುವ ಸಲುವಾಗಿ ಭದ್ರಾ ಅಣೆಕಟ್ಟೆನಿಂದ ನೀರು ಹರಿಸಲಾಗಿದೆ. ಇದೇ ನೀರು ನೆಚ್ಚಿ ಕೊಂಡ ಅಚ್ಚುಕಟ್ಟ ಪ್ರದೇಶದ ರೈತರು ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆದಿದ್ದಾರೆ. ರೈತರು ಬೆಳೆದ ಭತ್ತದ ಬೆಳೆ ತೆನೆಯೊಡೆದು ಹೂ ಕಟ್ಟುವ ಸಮಯವಾಗಿದೆ. ಆದರೆ ಈ ಹಿಂದೆಯೇ ಸರ್ಕಾರ ತೀರ್ಮಾನಿಸಿದಂತೆ ಮೇ ತಿಂಗಳ 8 ರಂದು ನಾಲೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸುವುದಾಗಿ ಪ್ರಕಟಿಸಲಾಗಿದೆ ಎಂದರು.

ರೈತರು ಬೆಳೆದಿರುವ ಭತ್ತದ ಬೆಳೆ ಇನ್ನು ಕೂಡ ಕಟಾವಿನ ಹಂತಕ್ಕೆ ಬಂದಿಲ್ಲ. ಕನಿಷ್ಠ ಇನ್ನು 20 ದಿನಗಳ ಕಾಲ ಭತ್ತದ ಬೆಳೆಗಳಿಗೆ ನೀರುಣಿಸಲೇಬೇಕಾಗಿದೆ. ಈಗಾಗಲೇ ಪ್ರಕಟಿಸಿರುವಂತೆ ಮೇ 8 ರಂದು ನೀರು ನಿಲುಗಡೆ ಮಾಡಿದಲ್ಲಿ ರೈತರು ಬೆಳೆದ ಭತ್ತದ ಬೆಳೆ ಸಂಪೂರ್ಣ ನಾಶವಾಗುತ್ತದೆ. ಇದನ್ನೇ ನಂಬಿಕೊಂಡ ರೈತರ ಬದುಕು ಮೂರಾಬಟ್ಟೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಚ್ಚುಕಟ್ಟು ವ್ಯಾಪ್ತಿಯ ರೈತರು ಈಗಾಗಲೇ ಸಾಲ ಮಾಡಿ ಪ್ರತಿ ಎಕರೆ ಭತ್ತ ಬೆಳೆಯಲು ಸುಮಾರು 25 ಸಾವಿರ ರೂ. ಬಂಡವಾಳ ಹಾಕಿದ್ದಾರೆ. ಈ ಬಂಡವಾಳ ಕೂಡ ಸಾಲದ ರೂಪದಲ್ಲಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಭತ್ತದ ಬೆಳೆ ನಾಶವಾಗುವುದಲ್ಲದೆ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗಲಿದೆ. ರೈತರು ಬಹು ದೊಡ್ಡ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಲಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರ ಕೂಡಲೇ ಗಮನ ಹರಿಸಿ ಮೇ ತಿಂಗಳ ಅಂತ್ಯದವರೆಗೆ ಭದ್ರಾ ಎಡದಂಡೆ ನಾಲೆಗಳಲ್ಲಿ ನೀರು ಹರಿಸುವ ಮೂಲಕ ರೈತರು ಬೆಳೆದ ಬೆಳೆ ನಷ್ಟವಾಗದಂತೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

ಮೇ ತಿಂಗಳ ಅಂತ್ಯದವರೆಗೆ ಭದ್ರಾ ಅಣೆಕಟ್ಟಿನಿಂದ ಎಡ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ. ಗಂಗಾಧರ್‌, ಜಿಲ್ಲಾ ಕಾರ್ಯಾಧ್ಯಕ್ಷ ಯಶವಂತರಾವ್‌ ಘೋರ್ಪಡೆ, ಡಿ.ವಿ. ವೀರೇಶ್‌, ರಂಗೋಜಿರಾವ್‌, ಪಾಂಡುರಂಗಪ್ಪ, ರಾಮಚಂದ್ರರಾವ್‌, ಕೆ.ಸಿ. ಗಂಗಾಧರ್‌, ಹಿರಿಯಣ್ಣಯ್ಯ ಮತ್ತಿತರರು ಇದ್ದರು.

ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಈಗಾಗಲೇ 12ರವರೆಗೂ ನೀರು ಬಿಡಲು ತೀರ್ಮಾನಿಸಲಾಗಿತ್ತು. ಅದನ್ನು 15ರವರೆಗೂ ವಿಸ್ತರಿಸಲಾಗುವುದು. ರೈತರು 25ರವರೆಗೂ ನೀರು ಬಿಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಅದನ್ನು ಸರಕಾರದ ಗಮನಕ್ಕೆ ತರಲಾಗುವುದು. ಸರಕಾರದ ತೀರ್ಮಾನದಂತೆ ಮುಂದುವರಿಯಲಾಗುವುದು.
ರವಿಚಂದ್ರ, ಎಇ, ಭದ್ರಾ ಅಣೆಕಟ್ಟು

Advertisement

Udayavani is now on Telegram. Click here to join our channel and stay updated with the latest news.

Next