ನವದೆಹಲಿ/ಶಿವಮೊಗ್ಗ : ಹೊಸದಾಗಿ ನಿರ್ಮಿಸಲಾದ ವಿಮಾನ ನಿಲ್ದಾಣವನ್ನು ಉದ್ಘಾಟಿಸಲು ಚುನಾವಣೆಗೆ ಹೊಸ್ತಿಲಲ್ಲಿರುವ ವೇಳೆ ಶಿವಮೊಗ್ಗಕ್ಕೆ ಭೇಟಿ ನೀಡುವ ಕೆಲ ದಿನಗಳ ಮೊದಲು, ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ”ಈ ಸೌಲಭ್ಯವು ಈ ಪ್ರದೇಶದಲ್ಲಿ ವಾಣಿಜ್ಯ, ಸಂಪರ್ಕವನ್ನು ಮತ್ತು ಪ್ರವಾಸೋದ್ಯಮವನ್ನು ವರ್ಧಿಸುತ್ತದೆ” ಎಂದು ಹೇಳಿದ್ದಾರೆ.
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ತಮ್ಮ ಟ್ವೀಟ್ ನಲ್ಲಿ ವಿಮಾನ ನಿಲ್ದಾಣ ಮತ್ತು ಅದರ ಟರ್ಮಿನಲ್‌ನ ವಿಡಿಯೋವನ್ನು ಹಂಚಿಕೊಂಡಿರುವ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದ ಕನಸು ನನಸಾಗಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣವು ಆರ್ಥಿಕ ಚೇತರಿಕೆಯನ್ನು ತರಲಿ ಹಾಗೂ ಸಂಪರ್ಕ ಕ್ರಾಂತಿಯ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸಲಿ ಎಂದು ಹಾರೈಸಿದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಯವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು.ಶಿವಮೊಗ್ಗದ ಮಹಾಜನತೆಯ ಪರವಾಗಿ ತಮಗೆ ಆತ್ಮೀಯವಾದ ಸ್ವಾಗತವನ್ನು ಕೋರುತ್ತೇನೆ ಎಂದು ಸಂಸದ ರಾಘವೇಂದ್ರ ಅವರು ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.
ಫೆ. 27 ರಂದು ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಅವರು ಲೋಕಾರ್ಪಣೆಗೊಲಿಸಲಿದ್ದು, ಅಂದು ಹಲವು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆಗೆ ಅಡಿಗಲ್ಲು ಹಾಕಲಿದ್ದಾರೆ.