ಶಿವಮೊಗ್ಗ: ನಗರದಲ್ಲಿ ಬುಧವಾರದಿಂದ ನಡೆಯಲಿರುವ ವಾಯುಸೇನೆಯ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಯುವಕರ ದಂಡೆ ನಗರದ ತುಂಬಾ ಕಾಣುತ್ತಿದೆ.
ಮಂಗಳವಾರ ಬೆಳಗ್ಗೆಯಿಂದಲೇ ಅಭ್ಯರ್ಥಿಗಳು ನೆಹರೂ ಕ್ರೀಡಾಂಗಣದಲ್ಲಿ ಜಮಾಯಿಸುತ್ತಿದ್ದು, ಮಾಹಿತಿ ನೀಡಲು ಜಿಲ್ಲಾಡಳಿತದಿಂದ ಸಿಬ್ಬಂದಿಯಿಲ್ಲದೆ ಮಾಹಿತಿ ಪಡೆಯಲು ಅಭ್ಯರ್ಥಿಗಳು ಪರದಾಡುವಂತಾಯಿತು. ಇನ್ನು ಉಳಿದ ದಿನವಾದರೂ ಜಿಲ್ಲಾಡಳಿತ ಅಲ್ಲಿ ಸಿಬ್ಬಂದಿಗಳನ್ನು ನೇಮಿಸಿ ಅನುಕೂಲ ಮಾಡಿಕೊಡಬೇಕು ಎಂದು ಅಭ್ಯರ್ಥಿಗಳು ತಿಳಿಸಿದ್ದಾರೆ.
ಜು.17ರಿಂದ 22ರವರೆಗೆ ವಾಯುಸೇನೆಯ ನೇಮಕಾತಿ ರ್ಯಾಲಿ ನಡೆಯಲಿದ್ದು, ಇಂಡಿಯನ್ ಏರ್‌ಫೋರ್ಸ್ ಪೊಲೀಸ್ ಮತ್ತು ಅಟೋಮೊಬೈಲ್ ಮತ್ತು ತಂತ್ರಜ್ಞ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ದಿನಗಳಲ್ಲಿ ಬೆಳಗಾವಿ, ಬಾಗಲ ಕೋಟೆ, ವಿಜಯಪುರ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಧಾರವಾಡ ಮತ್ತು ಉತ್ತರಕನ್ನಡ ಜಿಲ್ಲೆಯ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾಗಿರುವುದರಿಂದ ಆಯಾ ಜಿಲ್ಲೆಗಳ ಯುವಕರ ದಂಡೇ ಉತ್ಸಾಹದಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದೆ.
ನೆಹರೂ ಕ್ರೀಡಾಂಗಣ, ನೆಹರೂ ರಸ್ತೆ, ದುರ್ಗಿಗುಡಿ ಹಾಗೂ ಸುತ್ತಮತ್ತಲ ಮುಖ್ಯ ರಸ್ತೆಗಳಲ್ಲಿ ಯುವಕರ ದಂಡೇ ಕಂಡು ಬರುತ್ತಿದೆ. ಬೆಳಗ್ಗೆ 6ಗಂಟೆಯಿಂದಲೇ ದೈಹಿಕ ಪರೀಕ್ಷೆ ಆರಂಭವಾಗುವುದರಿಂದ ಯುವಕರು ಸ್ಥಳ ಹಾಗೂ ಉಳಿದುಕೊಳ್ಳುವ ವ್ಯವಸ್ಥೆ ಹಾಗೂ ರ್ಯಾಲಿಯಲ್ಲಿ ಭಾಗವಹಿಸಲು ಬೇಕಾಗುವ ದಾಖಲೆಗಳೇನು ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು.
ಬೇರೆ ಜಿಲ್ಲೆಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ವಾಸ್ತವ್ಯಕ್ಕಾಗಿ ನ್ಯಾಯಾಲಯ ಸಂಕೀರ್ಣದ ಎದುರಿನ ಒಕ್ಕಲಿಗರ ಸಮುದಾಯ ಭವನ ಹಾಗೂ ರೈಲ್ವೆ ನಿಲ್ದಾಣದ ಬಳಿ ಇರುವ ಕೆಇಬಿ ಸಮುದಾಯ ಭವನದಲ್ಲಿ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಿದೆ.
ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ನೇಮಕಾತಿ ರ್ಯಾಲಿ ಸ್ಥಳದಲ್ಲಿ ಜೆರಾಕ್ಸ್ ಅಂಗಡಿ, ಛಾಯಾಚಿತ್ರ ತೆಗೆಯಿಸಿಕೊಳ್ಳಲು ವ್ಯವಸ್ಥೆ, ಪಾವತಿ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳು ನೇರವಾಗಿ ನೇಮಕಾತಿ ದಿನದಂದು ಎಲ್ಲಾ ದಾಖಲೆಗಳೊಂದಿಗೆ ಹಾಜರಾಗಿ ತಮ್ಮ ಹೆಸರು ನೋಂದಾಯಿಸಬಹುದಾಗಿದೆ. ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಲಿಖೀತ ಪರೀಕ್ಷೆ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.