ಶಿವಮೊಗ್ಗ: ನಗರದ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ ವಾಯು ಸೇನಾ ನೇಮಕಾತಿ ರ್ಯಾಲಿಯಲ್ಲಿ 4 ಸಾವಿರ ಅಭ್ಯರ್ಥಿಗಳು ಭಾಗವಹಿಸಿದ್ದು, ಇವರಲ್ಲಿ 3050 ಅಭ್ಯರ್ಥಿಗಳು ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ್ದು, ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ ಎಂದು ಸೈನಿಕ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎನ್. ಚಂದ್ರಪ್ಪ ತಿಳಿಸಿದರು.
ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಓಟ ಹಾಗೂ ಜಿಗಿತದ ಆಧಾರದ ಮೇಲೆ ಆಯ್ಕೆ ಮಾಡಲಾಗಿದ್ದು, ಲಿಖೀತ ಪರೀಕ್ಷೆಗೆ ಆಯ್ಕೆ ಮಾಡಲಾಗಿದೆ. ಇದರ ನಂತರ ಉಳಿಯುವ ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಕಳುಹಿಸಲಾಗುತ್ತದೆ. ಲಿಖೀತ ಪರೀಕ್ಷೆಗಳು ಮೂರು ಹಂತಗಳಲ್ಲಿ ನಡೆಯಲಿದೆ. ಲಿಖೀತ ಪರೀಕ್ಷೆಯ ನಂತರ ಮುಂದಿನ ಹಂತದ ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ನಡೆಸಿ ಅವರನ್ನು ವಾಯು ಸೇನೆಯ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು
ರಾಜ್ಯದ ಬೆಳಗಾವಿ, ಬೀದರ್, ಧಾರವಾಡ, ಯಾದಗಿರಿ, ವಿಜಯಪುರ, ಬಾಗಲಕೋಟೆ ಹಾಗೂ ಮುಂತಾದ ಒಟ್ಟು ಒಂಬತ್ತು ಜಿಲ್ಲೆಗಳಿಂದ ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದು, ಅವರಿಗೆ ಸೂಕ್ತ ವಸತಿಯನ್ನು ಕಲ್ಪಿಸಲಾಗಿದೆ. ಒಕ್ಕಲಿಗರ ಭವನ ಹಾಗೂ ಕೆಇಬಿ ಸಮುದಾಯ ಭವನದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ನಂತರ ಹೆಚ್ಚುವರಿಯಾಗಿ ಸ್ಕೌಟ್ಸ್ ಭವನ ಮತ್ತು ಬಸವನಗುಡಿಯ ಶ್ರೀಶೈಲ ಮಲ್ಲಿಕಾರ್ಜುನ ಕಲ್ಯಾಣ ಮಂದಿರದಲ್ಲಿ ವ್ಯವಸ್ಥೆ ಮಾಡಲಾಯಿತು. ಇದರಿಂದಾಗಿ ಯಾವ ಅಭ್ಯರ್ಥಿಯು ಸಹ ಉಳಿದುಕೊಳ್ಳಲು ತೊಂದರೆಪಡುವ ಸಮಸ್ಯೆ ಎದುರಾಗಲಿಲ್ಲ ಎಂದು ತಿಳಿಸಿದರು.
ರ್ಯಾಲಿಗೆ ಆಗಮಿಸಿದ ಅಭ್ಯರ್ಥಿಗಳಿಗಾಗಿ ಸೂಕ್ತವಾದ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಕ್ರೀಡಾಂಗಣದ ಒಳಗೆ ಮಾಡಲಾಗಿದೆ. ಮತ್ತು 16 ಸಂಚಾರಿ ಶೌಚಾಲಯಗಳು ಹಾಗೂ ಕ್ರೀಡಾಂಗಣದ ಶೌಚಾಲಯ ಮತ್ತು ಸ್ನಾನಗೃಹಗಳನ್ನು ಬಳಸಲಾಗಿದ್ದು ಯಾವುದೇ ಅಭ್ಯರ್ಥಿಯು ತೊಂದರೆಗೊಳಗಾಗದಂತೆ ಹಾಗೂ ಶುಚಿತ್ವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗಿದ್ದು, ಮುಂಜಾಗರೂಕತೆಯಾಗಿ ಪ್ರಥಮ ಚಿಕಿತ್ಸೆ ವ್ಯವಸ್ಥೆ ಹಾಗೂ ಆ್ಯಂಬುಲೆನ್ಸ್‌ಗಳನ್ನು ಸ್ಥಳದಲ್ಲಿ ಇರಿಸಿಕೊಳ್ಳಲಾಗಿತ್ತು. ರ್ಯಾಲಿಯ ವೇಳೆ ಯಾವುದೇ ರೀತಿಯ ಅನಾಹುತಗಳಾಗಲಿ ಸಮಸ್ಯೆಗಳಾಗಲಿ ಸಂಭವಿಸಿಲ್ಲ ಎಂದು ಅವರು ತಿಳಿಸಿದರು.
ಅಭ್ಯರ್ಥಿಗಳ ಆಯ್ಕೆಗೆ ಬೆಂಗಳೂರಿನ ಸೆವೆನ್ ಏರ್‌ಮನ್ ಸೆಲೆಕ್ಷನ್ ಸೆಂಟರ್ ಸಂಸ್ಥೆಯ 90 ಸಿಬ್ಬಂಗಳು ಆಗಮಿಸಿದ್ದು, ಜು. 22ರ ವರೆಗೆ ನಡೆಯಲಿರುವ ನೇಮಕಾತಿ ರ್ಯಾಲಿಯಲ್ಲಿ ವಿವಿಧ ತರಬೇತಿ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ ಎಂದು ಸೈನಿಕ ಕಲ್ಯಾಣ ಇಲಾಖೆ ಉಪನಿರ್ದೇಶಕರು ತಿಳಿಸಿದರು.