Advertisement

ಶಾಂತಿಯುತ ಚುನಾವಣೆಗೆ ಕ್ರಮ

03:28 PM Apr 05, 2019 | Naveen |

ಶಿವಮೊಗ್ಗ: ಲೋಕಸಭೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸ್ಥಾಪಿಸಿರುವ 25 ಚೆಕ್‌ ಪೋಸ್ಟ್‌ಗಳಲ್ಲಿ ಸಿ.ಸಿ. ಟಿ.ವಿ ಅಳವಡಿಸಿ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎ. ದಯಾನಂದ್‌ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಚೆಕ್‌ಪೋಸ್ಟ್‌ ಗಳಲ್ಲಿ ನಿದ್ದೆ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಗಳನ್ನು ಅಮಾನತು ಮಾಡಿದ್ದರಿಂದ ಎಲ್ಲೆಡೆ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ
ಚೆಕ್‌ಪೋಸ್ಟ್‌ಗಳಲ್ಲಿ ಒಟ್ಟು 2,31,41,540ರೂ. ಹಣ
ವಶಪಡಿಸಿ ಕೊಳ್ಳಲಾಗಿದೆ. ಈ ಪೈಕಿ 2 ಕೋಟಿ ರೂ.ಗಳನ್ನು ದಾಖಲೆ
ಇದ್ದ ಕಾರಣ ಐಟಿ ಇಲಾಖೆ ಮೂಲಕ ವಾಪಸ್‌ ನೀಡಿದ್ದು, ಬಾಕಿ 31,41,540 ರೂ.ಗಳನ್ನು ವಶಕ್ಕೆ ಪಡೆದಿದೆ ಎಂದರು.

ಇದುವರೆಗೆ ಅಬಕಾರಿ ಇಲಾಖೆಯು 1.73 ಕೋಟಿ ರೂ. ಮೌಲ್ಯದ 38,344 ಲೀಟರ್‌ ಅಕ್ರಮ ಮದ್ಯ ವಶಪಡಿಸಿಕೊಂಡಿದೆ. ಈ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮೌಲ್ಯದ ಅಕ್ರಮ ಮದ್ಯ ವಶ ಶಿವಮೊಗ್ಗ ಜಿಲ್ಲೆಯಲ್ಲೇ ಆಗಿದೆ ಎಂಬುದು ವಿಶೇಷ. ಚುನಾವಣೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಬುಧವಾರ ಇಬ್ಬರು ರೌಡಿಗಳನ್ನು ಗಡಿಪಾರು ಮಾಡಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿಗಳ ಶಿಪಾರಸ್ಸಿನಂತೆ ಮಹಮದ್‌ ಇಬ್ರಾಹಿಂ ಹಾಗೂ ರಹಮತುಲ್ಲಾ ಗಡಿಪಾರಾದ ರೌಡಿಗಳಾಗಿದ್ದಾರೆ ಎಂದರು.

ಈಗಾಗಲೇ ಪರವಾನಗಿ ಪಡೆಯದೆ ರಾಜಕೀಯ ಸಭೆಗಳಲ್ಲಿ ಭಾಗವಹಿಸಲು ತಂದಿದ್ದ ವಾಹನಗಳ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಲೆಕ್ಕ ನೀಡದೆ ಬಳಸಿದ ಪ್ರಚಾರ ಸಾಮಗ್ರಿಗಳು, ರಾಜಕೀಯ ಸಭೆಗಳಲ್ಲಿ ಊಟ ಹಂಚಿಕೆ ಸೇರಿದಂತೆ ವಿವಿಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ 25 ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದರು.

ಏ. 21ರ ಸಂಜೆ 6 ಗಂಟೆವರೆಗೆ ಮಾತ್ರ ಬಹಿರಂಗ ಪ್ರಚಾರಕ್ಕೆ ಅವಕಾಶವಿದ್ದು, ಪ್ರತಿ ಅಭ್ಯರ್ಥಿಯ ಪ್ರಚಾರ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗುವುದು ಎಂದರು.

Advertisement

14 ಮಂದಿ ಉಮೇದುವಾರಿಕೆ: ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಗುರುವಾರ ಒಟ್ಟು 3 ಮಂದಿ ಉಮೇದುವಾರಿಕೆ ಸಲ್ಲಿಸಿದರು. ಒಟ್ಟು 14 ಮಂದಿ 26 ನಾಮಪತ್ರ ಸಲ್ಲಿಸಿದ್ದಾರೆ. ಉಪ ಚುನಾವಣೆಯಲ್ಲಿ ಕೇವಲ 4 ಮಂದಿ ಸ್ಪರ್ಧೆಯೊಂದಿಗೆ ಅತಿ ಕಡಿಮೆ ಅಭ್ಯರ್ಥಿಗಳಿರುವ ಕ್ಷೇತ್ರವಾಗಿ ಬಿಂಬಿತವಾಗಿತ್ತು. ಈ ಬಾರಿ 14 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲಿ ಬಿಎಸ್‌ಪಿಯಿಂದ ಗುಡ್ಡಪ್ಪ, ಉತ್ತಮ ಪ್ರಜಾಕೀಯ ಪಕ್ಷದಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದು ಯಾರಿಗೆ ಬಿ- ಫಾರಂ ದೊರೆಯಲಿದೆ ಎಂಬುದು ಅಚ್ಚರಿ ಮೂಡಿಸಿದೆ. ಉಪ ಚುನಾವಣೆಯಲ್ಲಿ 18 ಸಾವಿರ ಮತ ಪಡೆದು ಗಮನ ಸೆಳೆದಿದ್ದ ಪಕ್ಷೇತರ ಅಭ್ಯರ್ಥಿ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇನ್ನು ಪಿರಮಿಡ್‌ ಪಾರ್ಟಿ ಆಫ್‌ ಇಂಡಿಯಾದಿಂದ ಕೆ. ಕೃಷ್ಣ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಶೇಖರ್‌ ನಾಯ್ಕ, ಎಸ್‌. ಉಮೇಶಪ್ಪ, ಮಹಮ್ಮದ್‌ ಇಸೂಫ್‌ ಖಾನ್‌,
ಎನ್‌.ಟಿ.ವಿಜಯ್‌ಕುಮಾರ್‌, ವಿನಯ್‌ ಕೆ.ಸಿ., ಎಸ್‌. ಉಮೇಶ್‌ ವರ್ಮಾ, ಕೆ. ಶಿವಲಿಂಗಪ್ಪ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಉಮೇಶ್‌ ವರ್ಮಾ ಬಂಡಾಯ: ಉಪ ಚುನಾವಣೆ ಸಂದರ್ಭದಲ್ಲಿ ಪಕ್ಷದ ವಿರುದ್ಧ ಮಾತನಾಡಿ ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡಿದ್ದ ಉಮೇಶ್‌ ವರ್ಮಾ ಪಕ್ಷೇತರರಾಗಿ
ಕಣಕ್ಕೆ ಇಳಿದಿದ್ದಾರೆ. ಶಿವಮೊಗ್ಗ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟ ಕಾರಣ ಪಕ್ಷದ ಅಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇವರ ಬಂಡಾಯದ ಬಗ್ಗೆ ಕಾಂಗ್ರೆಸ್‌ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಇಬ್ಬರು ಗಡಿಪಾರು: ಲೋಕಸಭೆ ಚುನಾವಣೆಯಿಂದಾಗಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅಪರಾಧ ಹಿನ್ನೆಲೆಯುಳ್ಳ ಇಬ್ಬರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಟಿಪ್ಪುನಗರದ ಮಹ್ಮದ್‌ ಇಬ್ರಾಹಿಂ ಹಾಗೂ ರಾಗಿಗುಡ್ಡ ನಿವಾಸಿ ರೆಹಮತುಲ್ಲಾ ಅವರನ್ನು ಒಂದು ವರ್ಷ ಕಾಲ ಗಡಿಪಾರು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next