Advertisement

ಸಮಸ್ಯೆಗೆ ಸ್ಪಂದಿಸದಿದ್ದರೆ ಕ್ರಮ ಜರುಗಿಸಿ

12:00 PM Aug 01, 2019 | Naveen |

ಶಿವಮೊಗ್ಗ: ಗ್ರಾಮೀಣ ಮಟ್ಟದಲ್ಲಿ ಜನರ ಅಹವಾಲುಗಳಿಗೆ ತಕ್ಷಣ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕ್ಯಾಪ್ಟನ್‌ ಮಣಿವಣ್ಣನ್‌ ಅವರು ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಿದರು.

Advertisement

ಬುಧವಾರ ಅವರು ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯತ್‌ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

ಗ್ರಾಮದಲ್ಲಿ ಶಾಲೆ, ದೇವಸ್ಥಾನಗಳ 100ಮೀಟರ್‌ ವ್ಯಾಪ್ತಿಯ ಒಳಗೆ ಗುಟ್ಕಾ, ತಂಬಾಕು, ಮದ್ಯ ಮಾರಾಟ ಮಾಡಲಾಗುತ್ತಿದ್ದರೂ, ಯಾವುದೇ ಕ್ರಮ ಜರುಗಿಸಿರುವುದಿಲ್ಲ ಎಂದು ಗ್ರಾಮಸ್ಥರ ಅಹವಾಲಿಗೆ ಸ್ಪಂದಿಸಿದ ಅವರು, ಇದನ್ನು ತಕ್ಷಣ ನಿಲ್ಲಿಸಬೇಕು. ಅಂತಹ ಅಂಗಡಿಗಳ ಪರವಾನಿಗೆಯನ್ನು ಒಂದು ವಾರದ ಒಳಗಾಗಿ ರದ್ದುಗೊಳಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ಅಹವಾಲು ಸಲ್ಲಿಕೆ: ಗ್ರಾಮಸಭೆಗಳಿಗೆ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸದ ಕಾರಣ ಯಾವುದೇ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಗ್ರಾಮದಲ್ಲಿ ಕೆರೆ ಒತ್ತುವರಿ ಮಾಡಿದ್ದರೂ ಅದನ್ನು ತೆರವುಗೊಳಿಸಿಲ್ಲ. ಅರಣ್ಯ ಭೂಮಿ ಸಮಸ್ಯೆಯಿಂದಾಗಿ ಖಾತೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ನೆಮ್ಮದಿ ಕೇಂದ್ರ ಗ್ರಾಮದಿಂದ 15ಕಿಮಿ ದೂರವಿದ್ದು, ಅಗತ್ಯ ಸೇವೆಗಳು ದೊರೆಯುತ್ತಿಲ್ಲ. ಬಾಪೂಜಿ ಸೇವಾ ಕೇಂದ್ರದಲ್ಲಿ ಪಹಣಿ, ಮುಟೇಶನ್‌ ಸೌಲಭ್ಯಗಳು ದೊರೆಯುತ್ತಿಲ್ಲ ಇತ್ಯಾದಿ ಅಹವಾಲುಗಳನ್ನು ಗ್ರಾಮಸ್ಥರು ಮುಂದಿರಿಸಿದರು.

ಗ್ರಾಮ ಪಂಚಾಯತ್‌ ವತಿಯಿಂದ ಕೆರೆಗೆ ಟ್ರೆಂಚ್ ಹೊಡೆಯಲು ಕ್ರಮ ಕೈಗೊಂಡರೆ, ಕೆರೆ ಒತ್ತುವರಿ ತೆರವುಗೊಳಿಸಲು ಸರ್ವೆ ಮಾಡಿ ಗಡಿ ನಿಗದಿಪಡಿಸಿ ನೀಡಲಾಗುವುದು. ಈ ಕುರಿತು ಈಗಾಗಲೇ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಸೂಚನೆ ನೀಡಲಾಗಿದೆ. ಪ್ರತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅವರು ಆಯಾ ಗ್ರಾಮ ಪಂಚಾಯತ್‌ಗಳ ಮೇಲುಸ್ತುವಾರಿ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಈ ಸಂದರ್ಭದಲ್ಲಿ ತಿಳಿಸಿದರು.

Advertisement

ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರಗಿಸುವಂತೆ ಮಣಿವಣ್ಣನ್‌ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಸರ್ಕಾರದಿಂದ ಸೂಚನೆ: ತಿಂಗಳಿಗೆ ಕನಿಷ್ಟ ಎರಡು ಬಾರಿ ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಬೇಕು. ಸರ್ಕಾರದ ಸೌಲಭ್ಯಗಳು ರೈತರು ಹಾಗೂ ಜನಸಾಮಾನ್ಯರಿಗೆ ಸಮರ್ಪಕವಾಗಿ ದೊರೆಯುವಂತಾಗಲು ಗ್ರಾಮೀಣ ಭಾಗಗಳಲ್ಲಿ ಅವರ ಅಹವಾಲುಗಳನ್ನು ಸ್ವೀಕರಿಸಬೇಕು ಎಂದು ಸರ್ಕಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಪ್ರತಿ ತಿಂಗಳು ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸಲು ಪ್ರಯತ್ನಿಸಲಾಗುವುದು. ಜನಸಾಮಾನ್ಯರು ಹಾಗೂ ಸರ್ಕಾರದ ನಡುವಿನ ಅಂತರ ಕಡಿಮೆ ಮಾಡಲು ಅಧಿಕಾರಿಗಳು ಸದಾ ಸಾರ್ವಜನಿಕರಿಗೆ ಲಭ್ಯವಿರುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಇದಕ್ಕೂ ಮೊದಲು ದೇವರ ನರಸೀಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಎಸಿ ಪ್ರಕಾಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next