ಶಿವಮೊಗ್ಗ: ಜೂನ್ ಅಂತ್ಯಕ್ಕೆ ಮಲೆನಾಡಿನಲ್ಲಿ ಮುಂಗಾರು ತನ್ನ ಪ್ರಭಾವ ತೋರಿಸುತ್ತಿದ್ದು, ರೈತರು ನಿಟ್ಟುಸಿರು ಬಿಡುವಂತಾಗಿದೆ. ಜೂನ್‌ನಲ್ಲಿ ರಚ್ಚೆ ಹಿಡಿಯಬೇಕಿದ್ದ ಮಳೆ ನಿರಾಸೆ ಮೂಡಿಸಿದ್ದು ಇಂತಹದೇ ಪರಿಸ್ಥಿತಿ 24 ವರ್ಷದ ಹಿಂದೆ ಬಂದಿತ್ತು.
2001ರಿಂದ 2003ರ ನಡುವೆ ಕಾಣಿಸಿಕೊಂಡ ಮೂರು ವರ್ಷದ ಬರವನ್ನು ಮೀರಿಸುವಂತಹ ಭೀಕರತೆ ಈ ವರ್ಷ ಎದುರಾಗಿದೆ. 1995ರಲ್ಲಿ ಜೂನ್ ಅಂತ್ಯಕ್ಕೆ ಶೇ.63ರಷ್ಟು ಮಳೆ ಕೊರತೆ ಕಂಡಿದ್ದ ಜಿಲ್ಲೆಯು 24 ವರ್ಷದ ಬಳಿಕ ತೀವ್ರ ಮಳೆ ಕೊರತೆ ಅನುಭವಿಸಿದೆ. ಜೂನ್‌ನಲ್ಲಿ ವಾಡಿಕೆಯಂತೆ 375.90 ಮಿ.ಮೀ. ಮಳೆಯಾಗಬೇಕಿತ್ತು. ಜೂ.27ರವರೆಗೆ ಕೇವಲ 168.70 ಮಿ.ಮೀ. ಮಳೆಯಾಗಿದ್ದು ಶೇ.55ರಷ್ಟು ಕೊರತೆಯಾಗಿದೆ.
ಹಿಂಗಾರು ಶೇ.55ರಷ್ಟು ವಿಫಲವಾಗಿದ್ದು, ಬೇಸಿಗೆಯಲ್ಲಿ ನಿರೀಕ್ಷಿತ ಮಳೆ ಬಾರದಿರುವುದು, ಮುಂಗಾರು ಹಂಗಾಮಿನ ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ, ಮೃಗಶಿರಾ ಮಳೆಗಳೂ ಕೈ ಕೊಟ್ಟವು. ಜನವರಿಯಿಂದ ಜೂನ್ ಅಂತ್ಯವರೆಗೆ ವಾಡಿಕೆಯಂತೆ 543 ಮಿಮೀ ಮಳೆಯಾಗಬೇಕಿತ್ತು. ಆದರೆ, ಈ ಅವಧಿಯಲ್ಲಿ ಕೇವಲ 220 ಮಿ.ಮೀ. (ಶೇ.59ಕೊರತೆ) ಮಳೆಯಾಗಿದೆ.
ಜೂನ್ ಮೊದಲ ವಾರದಲ್ಲಿ ನೈಋತ್ಯ ಮಾನ್ಸೂನ್ ಮಲೆನಾಡಿಗೆ ಕಾಲಿಟ್ಟಿದ್ದಲ್ಲಿ ಈ ಹೊತ್ತಿಗಾಗಲೆ ಹಳ್ಳ, ನದಿಗಳು ತುಂಬಿ ಹರಿದು ಕೆರೆ, ಕಟ್ಟೆ, ಜಲಾಶಯಗಳು ಶೇ.25ರಷ್ಟು ಭರ್ತಿಯಾಗಬೇಕಿತ್ತು. ಆದರೆ, ಕೆರೆ ಕಟ್ಟೆಗಳಿರಲಿ, ಜಲಾಶಯಗಳಿಗೂ ಹೊಸ ನೀರು ಬಂದಿಲ್ಲ. ಗಾಜನೂರು ಜಲಾಶಯ ಮತ್ತು ತುಂಗಾನದಿ ದಂಡೆ ಮೇಲಿರುವ ಶಿವಮೊಗ್ಗ ನಗರಕ್ಕೆ ಮಳೆಗಾಲದಲ್ಲೂ ದಿನಬಿಟ್ಟು ದಿನ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಇನ್ನೊಂದು ತಿಂಗಳಲ್ಲಿ ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ.
ಕೇವಲ 3 ಟಿಎಂಸಿ ಸಾಮರ್ಥ್ಯದ ತುಂಗಾ ಜಲಾಶಯವು ಭರ್ತಿಯಾಗಿ ಗ್ರಾಮೀಣರು ಹೇಳುವಂತೆ ತುಂಗಾ ಹೊಳೆ ಕಟ್ಟಬೇಕಿತ್ತು. ನದಿಯಲ್ಲಿ ಕನಿಷ್ಠ 25ಸಾವಿರ ಕ್ಯೂಸೆಕ್ ನೀರು ಹರಿಯುತ್ತಿತ್ತು. ಆದರೆ, ಈ ಬಾರಿ ಜಲಾಶಯಕ್ಕೆ ಹೊಸ ನೀರು ಬರದೆ ನೀರಿನ ಮಟ್ಟ ಡೆಡ್ ಸ್ಟೋರೇಜ್(1 ಟಿಎಂಸಿ) ತಲುಪಿದೆ. ರಾಜ್ಯಕ್ಕೆ ಶೇ.33ರಷ್ಟು ವಿದ್ಯುತ್ ಪೂರೈಕೆ ಮಾಡುವ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ 1743.70 ಅಡಿಗೆ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1770.15 ಅಡಿ, (27 ಅಡಿ ಅಧಿಕ) ನೀರಿತ್ತು. ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಜಲಾಶಯದಲ್ಲಿ 121.7 ಅಡಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 143 ಅಡಿ (22 ಅಡಿ ಅಧಿಕ) ನೀರಿತ್ತು.