ಶಿವಮೊಗ್ಗ: ಉಂಬ್ಳೆಬೈಲು ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟು ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದ್ದ ಕಾಡಾನೆಗಳನ್ನು ಭದ್ರಾ ಅಭಯಾರಣ್ಯದೊಳಗೆ ಓಡಿಸಲು ಅರಣ್ಯ ಇಲಾಖೆ ಹಾಗೂ ಸಕ್ರೆಬೈಲು ಆನೆ ಬಿಡಾರದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಉಂಬ್ಳೆಬೈಲು ಭಾಗದ ಹಾಲ್‌ಲಕ್ಕವಳ್ಳಿ ಪ್ರದೇಶದಲ್ಲಿ ಆನೆಗಳು ಬೀಡುಬಿಟ್ಟಿದ್ದವು. ಬುಧವಾರ ಉಂಬ್ಳೆಬೈಲು, ಕೈದೊಟ್ಲು ನಡುವಿನ ರಸ್ತೆ ಮೂಲಕ ಚೆಕ್‌ಪೋಸ್ಟ್ ಮತ್ತು ಕಾಕನಹಸೂಡಿ ರಸ್ತೆ ನಡುವೆ ಎನ್.ಆರ್. ಪುರ ರಸ್ತೆ ದಾಟಿಸಿ ಭದ್ರಾ ಅಭಯಾರಣ್ಯ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ಬೆಳಗ್ಗೆಯಿಂದ ಅಭಯಾರಣ್ಯದ ದಟ್ಟ ಕಾಡಿನೊಳಗೆ ಸೇರಿಸಿದ್ದು ಮತ್ತೆ ವಾಪಾಸ್ ಬರದಂತೆ ಕಾಕನಹಸೂಡಿ ಬಳಿ ತಾತ್ಕಾಲಿಕವಾಗಿ ಬೀಡು ಬಿಡಲಾಗಿದೆ. ಬುಧವಾರ ಯಾವುದೇ ಆನೆಗಳನ್ನು ಬಳಸದೇ ಸಿಬ್ಬಂದಿ ಮೂಲಕವೇ ಹಿಮ್ಮೆಟಿಸಲಾಗಿತ್ತು. ಗುರುವಾರ ಸಕ್ರೆಬೈಲು ಆನೆಗಳನ್ನು ಗಡಿಯಲ್ಲಿ ಇರಿಸಲಾಗಿದೆ. ಸಕ್ರೆಬೈಲು ಆನೆಬಿಡಾರದ 12 ಮಂದಿ, ಅರಣ್ಯ ಇಲಾಖೆಯ 25 ಸಿಬ್ಬಂದಿ ಪಾಲ್ಗೊಂಡಿದ್ದರು.
ಉಂಬ್ಳೆಬೈಲು ಅರಣ್ಯ ಪ್ರದೇಶ ಬಫರ್ ಝೋನ್ ವ್ಯಾಪ್ತಿಯಲ್ಲಿದ್ದು 20ಕ್ಕೂ ಹೆಚ್ಚು ಹಳ್ಳಿಗಳಿವೆ. ಹೇರಳವಾಗಿ ಭತ್ತ, ಬಾಳೆ, ಅಡಕೆ, ತೆಂಗು ಬೆಳೆಯಲಾಗುತ್ತಿದ್ದು ಕೆರೆಗಳು ಸಹ ಇವೆ. ಕಾಡಾನೆಗಳಿಗೆ ಉತ್ತಮ ಆಹಾರ ಸಿಗುತ್ತಿದ್ದುದರಿಂದ ಅವುಗಳು ಈ ಭಾಗದಲ್ಲಿ ಬೀಡು ಬಿಟ್ಟು ರೈತರಿಗೆ ನಷ್ಟ ಮಾಡುತ್ತಿದ್ದವು. ಇದರಿಂದ ಬೇಸತ್ತ ಜನ ಆನೆ ಹಿಡಿದು ಬೇರೆಡೆ ಬಿಡಲು ಮನವಿ ಮಾಡಿದ್ದರು. ಆನೆ ಹಿಡಿಯುವ ಕಾರ್ಯಾಚರಣೆ ಬಹಳ ವೆಚ್ಚದಾಯಕವಾದ್ದರಿಂದ ಸರಕಾರ ಓಡಿಸಲು ಅನುಮತಿ ನೀಡಿತ್ತು.
ತಾತ್ಕಾಲಿಕ ಕ್ರಮ ಬೇಡ: ಆನೆಗಳನ್ನು ಅರಣ್ಯ ಪ್ರದೇಶಗಳಿಗೆ ಓಡಿಸಿರುವುದು ತಾತ್ಕಾಲಿಕ ರಿಲೀಫ್ ನೀಡಿದ್ದು ಅವುಗಳನ್ನು ಬೇರೆಡೆ ಸ್ಥಳಾಂತರ ಮಾಡದಿದ್ದರೆ ಮತ್ತೆ ಬರುತ್ತವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಮನುಷ್ಯನಿಗೆ ಗಡಿ ಇದೆ. ಆನೆಗಳಿಗೆ ಅದ್ಯಾವುದೂ ತಿಳಿಯುವುದಿಲ್ಲ ಎಂಬುದು ಗ್ರಾಮಸ್ಥರ ವಾದ. ಕಾಡಾನೆಗಳು ನೆಲೆಸಿರುವ ಜಾಗದಲ್ಲಿ ಬೇರೆ ಆನೆಗಳು ಬಂದರೆ ಅವು ಮತ್ತೆ ಆ ಕಡೆ ಸುಳಿಯುವುದಿಲ್ಲ. ಆದ್ದರಿಂದ ಸದ್ಯಕ್ಕೆ ಬರುವುದಿಲ್ಲ ಎಂಬುದು ಆನೆಗಳ ತಜ್ಞರ ಅಭಿಮತ.
ಟ್ರಂಚ್ ಬೇಕು: ಆನೆಗಳನ್ನು ಓಡಿಸಿರುವುದು ತಾತ್ಕಾಲಿಕ ಕ್ರಮವಾಗಿದೆ. ಮತ್ತೆ ಬರಬಹುದು. ಭದ್ರಾ ಅಭಯಾರಣ್ಯದ ಗಡಿಯಲ್ಲಿ ಸೋಲಾರ್ ಬೇಲಿ ಹಾಕಿದರೆ ಇದಕ್ಕೆಲ್ಲ ಕಡಿವಾಣ ಬೀಳಲಿದೆ. ಈ ಹಿಂದೆ ಎಲಿಫಂಟ್ ಪ್ರೂಫ್ ಫೆನ್ಸಿಂಗ್ ಮಾಡಲಾಗಿತ್ತು. ಆದರೆ ಅದನ್ನೂ ದಾಟಿಕೊಂಡು ಆನೆಗಳು ಬರುತ್ತಿವೆ. ನಮ್ಮ ಭಾಗದಲ್ಲಿ 33 ಕಿ.ಮೀ ಕಂದಕ ನಿರ್ಮಾಣ ಮಾಡಲು 2.80 ಕೋಟಿ ವೆಚ್ಚದ ಯೋಜನೆಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ವನ್ಯಜೀವಿ ವಲಯ ಹಾಗೂ ನಮ್ಮ ಕಡೆಯಿಂದ ಬೇಲಿ ಹಾಗೂ ಕಂದಕ ನಿರ್ಮಾಣವಾದರೆ ಶಾಶ್ವತ ಪರಿಹಾರ ಸಿಗಬಹುದು ಎನ್ನುತ್ತಾರೆ ಉಂಬ್ಳೆಬೈಲು ವಲಯ ಆರ್‌ಎಫ್‌ಒ ಆರ್.ಟಿ. ಮಂಜುನಾಥ್. ಅರಣ್ಯ ಪ್ರದೇಶದ ಆಯಕಟ್ಟಿನ ಜಾಗಗಳಲ್ಲಿ ಆನೆಗಳು ಒಳಬರುತ್ತವೆ. ಅಂತಹ ಪ್ರದೇಶಗಳನ್ನು ಈಗಾಗಲೇ ಗುರುತಿಸಿದ್ದು ಜಮೀನು, ಅರಣ್ಯ ಪ್ರದೇಶದ ಕೆಲವು ಕಡೆ ಈ ಟ್ರಂಚ್‌ಗಳು ಕಾರ್ಯರೂಪಕ್ಕೆ ಬರಲಿವೆ.
ಓದಿ :
ಬಾವಿಗೆ ಹಾರಿ ಬಾಲಕಿ ಆತ್ಮಹತ್ಯೆ : ಕಾರಣ ನಿಗೂಢ