ತೀರ್ಥಹಳ್ಳಿ: ಮೌಲಿಕವಾದ ಅಂಕಣ, ಲೇಖನಗಳು ಸೇರಿದಂತೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಶರತ್ ಕಲ್ಕೋಡ್ ಅವರನ್ನು ತಾಲೂಕಿನ ಗುಡ್ಡೆಕೇರಿಯಲ್ಲಿ ನಡೆಯುವ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಕಾಲಿಕವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಓದಿ : ಬಿಜೆಪಿ ಇನ್ನೂ 5 ವರ್ಷ ಅಧಿಕಾರಕ್ಕೆ ಬಂದರೇ, ಅಸ್ಸಾಂ ಭದ್ರವಾಗುತ್ತದೆ : ಶಾ
ಗುಡ್ಡೆಕೇರಿ ಸಮೀಪದ ಕಲ್ಕೋಡಿನಲ್ಲಿರುವ ಅವರ ನಿವಾಸದಲ್ಲಿ ಕಸಾಪ ವತಿಯಿಂದ ಆಹ್ವಾನ ನೀಡಿ ಮಾತನಾಡಿದ ಅವರು, ಶರತ್ ಅವರು ಕನ್ನಡ ಸಾಹಿತ್ಯ ಮಾತ್ರವಲ್ಲದೇ ಸುಧಾ, ತರಂಗ ವಾರಪತ್ರಿಕೆ ಹೀಗೆ ಪತ್ರಿಕೋದ್ಯಮಿಯಾಗಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ಕಥೆ, ಕವನ, ಪ್ರಬಂಧ ಮತ್ತು ಅಂಕಣಗಳ ಲೇಖನಗಳ ಮೂಲಕ ಅಕ್ಷರ ಲೋಕದಲ್ಲಿ ಚಿರಪರಿಚಿತರಾಗಿದ್ದಾರೆ. ಇಂದಿಗೂ ಬರವಣಿಗೆಯಲ್ಲಿ ಸಕ್ರಿಯರಾದವರು. ಸಾಹಿತ್ಯದ ಜೊತೆಯಲ್ಲಿ ಕೃಷಿಕರಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಇವರ ಸಾಧನೆಯನ್ನು ಗುರುತಿಸಿ ಮಾಸ್ತಿ ಪ್ರಶಸ್ತ್ರಿ ಮತ್ತು ಬೆಂಗಳೂರು ಮಹಾನಗರ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತ್ರಿಗೂ ಭಾಜನರಾಗಿದ್ದಾರೆ ಎಂದರು.
ಸರ್ವಾಧ್ಯಕ್ಷತೆಗೆ ಆಯ್ಕೆಯಾದ ಶರತ್ ಕಲ್ಕೋಡ್ ಮಾತನಾಡಿ, ಕುವೆಂಪು ಅವರಂತಹ ದಾರ್ಶನಿಕರು ಜನಿಸಿದ ತಾಲೂಕಿನ ಈ ಸ್ಥಾನಕ್ಕೆ ನಾನು ಅರ್ಹನೇ ಎಂಬ ಅಳುಕು ನನಗಿದೆ. ಆದರೆ ನನ್ನ ಬದುಕಿನಲ್ಲಿ ಬಂದಿರುವ ಅಪೂರ್ವ ಕ್ಷಣಗಳಲ್ಲಿ ಇದೂ ಕೂಡ ಒಂದಾಗಿದೆ. ಪತ್ರಿಕೆ ಮತ್ತು ಸಾಹಿತ್ಯ ಕ್ಷೇತ್ರದ 40 ವರ್ಷಗಳ ನನ್ನ ಅನುಭವವನ್ನು ಹಂಚಿಕೊಳ್ಳುವ ವೇದಿಕೆಯ ಸದಾವಕಾಶ ದೊರೆತಿದೆ. ನನ್ನ ದೃಷ್ಟಿಯಲ್ಲಿ ಬರಹಗಾರನಿಗೆ ಮೆಚ್ಚುಗೆ ಮತ್ತು ಬೈಗುಳ ಎರಡೂ ಒಂದೇ ಆಗಿದ್ದು ಇದರಿಂದ ವೈಚಾರಿಕ ಚಿಂತನೆಗೆ ಅವಕಾಶವಾಗುತ್ತದೆ ಎಂದರು.
ಕ.ಸಾ.ಪ. ತಾಲೂಕು ಅಧ್ಯಕ್ಷ ಆಡಿನಸರ ಸತೀಶ್‌ಕುಮಾರ್ ಮಾತನಾಡಿ, ಈ ಊರಿನ ಸಾಹಿತ್ಯ ಪ್ರೇಮಿಗಳು ಮತ್ತು ಜನಪ್ರತಿನಿಧಿಗಳ ಸಹಕಾರದ ಹಿನ್ನೆಲೆಯಲ್ಲಿ ಈ ಸಮ್ಮೇಳನವನ್ನು ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಓದಿ : ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯಸ್ವಾಮಿ ದರ್ಶನ ಪಡೆದ ಶಾಸಕ ಯತ್ನಾಳ್
ಗಾಯಿತ್ರಿ ಶರತ್, ತಾಪಂ ಸದಸ್ಯೆ ವೀಣಾ ಗಿರೀಶ್, ಆಗುಂಬೆ ಗ್ರಾಪಂ ಸದಸ್ಯರಾದ ಶಶಾಂಕ್ ಹೆಗ್ಡೆ, ಶ್ವೇತಾ ಗಿರೀಶ್, ಜಯಪ್ರಕಾಶ್, ರಾಘವೇಂದ್ರ, ಗ್ರಾಪಂ ಮಾಜಿ ಅದ್ಯಕ್ಷ ನಂದನ್ ಹಸಿರುಮನೆ, ಎಪಿಎಂಸಿ ಸದಸ್ಯ ಹಸಿರುಮನೆ ಮಹಾಬಲೇಶ್, ಕೊರೊಡಿ ಕೃಷ್ಣಪ್ಪ, ಕರವೇ ಮುಖಂಡರಾದ ವೆಂಕಟೇಶ ಹೆಗ್ಡೆ ಹಾಗೂ ಹಷೇಂದ್ರ ಪಡುವಳ್ಳಿ, ನಾಬಳ ಶಚ್ಚೀಂದ್ರ ಹೆಗ್ಡೆ, ತಾಲೂಕು ಲೇಖಕಿಯರ ಸಂಘದ ಅದ್ಯಕ್ಷೆ ನೇತ್ರಾವತಿ, ಸು ದೀಷ್ಣಾ ಕುಮಾರಿ, ಮಂಜುಬಾಬು ಮತ್ತು ಕಲ್ಕೋಡು ಕುಟುಂಬಸ್ಥರು ಇದ್ದರು. ಕಸಾಪ ನಿರ್ದೇಶಕ ಡಾನ್ ರಾಮಣ್ಣ ಶೆಟ್ಟಿ ನಿರೂಪಿಸಿದರು.
ಓದಿ : ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಮೆ ಅಪಾರ