ಶಿವಮೊಗ್ಗ: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್ .ಯಡಿಯೂರಪ್ಪ ಅವರನ್ನು ಬದಲಾಯಿಸುವ ವಿಚಾರಕ್ಕೆ ತವರು ಜಿಲ್ಲೆ ಶಿವಮೊಗ್ಗದಲ್ಲಿ ವಿರೋಧ ವ್ಯಕ್ತವಾಗಿದೆ. ಸಿಎಂ ಸ್ಥಾನದಿಂದ ಯಡಿಯೂರಪ್ಪನವರನ್ನು ಬದಲಾಯಿಸಿದರೆ ಬಿಜೆಪಿಗೂ ಕಾಂಗ್ರೆಸ್‌ಗೆ ಬಂದ ಸ್ಥಿತಿಯೇ ಬರಲಿದೆ ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಮಾತನಾಡಿ, ಸಿಎಂ ಸ್ಥಾನದಿಂದ ಯಡಿಯೂರಪ್ಪನವರನ್ನು ಬದಲಾಯಿಸಿದರೆ, ಅದು ವೀರಶೈವ ಸಮಾಜಕ್ಕೆ ಮಾಡಿದ ಅನ್ಯಾಯ. ಅಲ್ಲದೆ ಅವರು ಕೇವಲ ವೀರಶೈವ ಸಮಾಜಕ್ಕೆ ಸೀಮಿತವಾದ ನಾಯಕರಲ್ಲ. ಬದಲಾಗಿ ಎಲ್ಲ ಜಾತಿ ಧರ್ಮದವರನ್ನು ಒಟ್ಟಾಗಿಸಿಕೊಂಡು ಮುನ್ನಡೆಯುತ್ತಿರುವ ನಾಯಕ. ಬಿಎಸ್‌ವೈ ಅವರನ್ನು ಸಿಎಂ ಸ್ಥಾನದಿಂದ ಬದಲಾಯಿಸಿದರೆ, ಬಿಜೆಪಿಗೆ ಕಾಂಗ್ರೆಸ್‌ಗೆ ಬಂದ ಸ್ಥಿತಿಯೇ ಬರುತ್ತದೆ. ವೀರೇಂದ್ರ ಪಾಟೀಲ ಅವರನ್ನು ಕೆಳಗಿಳಿಸಿದ ಮೇಲೆ ಕಾಂಗ್ರೆಸ್ ಕಥೆ ಏನಾಗಿದೆ ಎಂಬುದನ್ನು ಬಿಜೆಪಿ ಹೈಕಮಾಂಡ್ ಗಮನಿಸಬೇಕಿದೆ ಎಂದು ಹೇಳಿದರು.
ಯಡಿಯೂರಪ್ಪ ಬಿಜೆಪಿ ತೊರೆದಾಗ ನಷ್ಟವಾಗಿದ್ದನ್ನು ಬಿಜೆಪಿ ಹೈಕಮಾಂಡ್ ಮರೆಯಬಾರದು. ಕೊರೊನಾಕ್ಕಿಂತ ಮೊದಲೇ ಸಿಎಂ ಬದಲಾವಣೆ ಎನ್ನದೆ, ಕೊರೊನಾ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸಿದ ನಂತರ ಬದಲಾವಣೆ ಎಂದು ಹೇಳಿದ್ರೆ ಹೇಗೆ ಎಂದು ಪ್ರಶ್ನಿಸಿದರು. ಬಿಜೆಪಿ ವರಿಷ್ಠರು ಈ ಕುರಿತು ಗಂಭೀರವಾಗಿ ಯೋಚಿಸಬೇಕಿದೆ. ಸಚಿವ ಈಶ್ವರಪ್ಪ ಅವರು ಯಡಿಯೂರಪ್ಪನವರ ಜೊತೆಗೆ ಹೆಜ್ಜೆ ಹಾಕಿ ಪಕ್ಷ ಕಟ್ಟಿದವರು.
ಮೊದಲಿನಿಂದಲೂ ಅವರೊಂದಿಗೆ ಇದ್ದಾರೆ. ಈ ಬಗ್ಗೆ ಈಶ್ವರಪ್ಪನವರು ಹೈಕಮಾಂಡ್‌ಗೆ ಮನವರಿಕೆ ಮಾಡಿ ಕೊಡಬೇಕಿದೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾಯಿಸಿದರೆ ನಮ್ಮ ರಾಜ್ಯ ಘಟಕದ ಅನುಮತಿ ಪಡೆದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಕಳೆದ 40 ವರ್ಷಕ್ಕೂ ಹೆಚ್ಚು ಕಾಲ ಬಿಜೆಪಿಗಾಗಿ ದುಡಿದ ಬಿಎಸ್‌ವೈ ಮುಖ್ಯಮಂತ್ರಿಯಾಗಿ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ.
ಹಾಗೆಯೇ, ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಗೂ ಸಾಕಷ್ಟು ಶ್ರಮಿಸಿದ್ದಾರೆ. ವಿಮಾನ ನಿಲ್ದಾಣ, ಬಸ್ ನಿಲ್ದಾಣ, ಆಸ್ಪತ್ರೆಗಳು, ಕೃಷಿ ವಿವಿ, ಹೆದ್ದಾರಿಗಳ ಅಭಿವೃದ್ಧಿ ಸೇರಿದಂತೆ ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿ ಅವರ ಅವ ಧಿಯಲ್ಲಿ ಆಗಿದೆ. ಬೇರೆ ಯಾರೇ ಮುಖ್ಯಮಂತ್ರಿಯಾದರೂ ಇನ್ನು ಮುಂದೆ ಇಷ್ಟು ಅಭಿವೃದ್ಧಿಯಾಗಲು ಸಾಧ್ಯವೇ ಇಲ್ಲ. ಹಾಗಾಗಿ, ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಿಂದ ಅವರನ್ನು ಕೆಳಗಿಳಿಸುವ ಬಗ್ಗೆ ರಾಷ್ಟಿಯ ವರಿಷ್ಠರಾಗಲಿ, ಪಕ್ಷದೊಳಗೆ ಕುತಂತ್ರ ನಡೆಸುವುದಾಗಲೀ ಮಾಡಬಾರದು. ಹಾಗೊಮ್ಮೆ ಮಾಡಿದರೆ ಬಿಜೆಪಿಗೆ ದೊಡ್ಡ ಪೆಟ್ಟು ಬೀಳಲಿದೆ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬೆನಕಪ್ಪ, ಲಿಂಗರಾಜು, ಆನಂದಮೂರ್ತಿ, ಚಂದ್ರು, ವಾಗೆªàವಿ, ಉಷಾ, ಪಾಲಾಕ್ಷಪ್ಪ ಇನ್ನಿತರರು ಉಪಸ್ಥಿತರಿದ್ದರು.