Advertisement

ನೈಜ ಫಲಾನುಭವಿಗಳಿಗೆ ಸೂರು ಸೌಲಭ್ಯ ಸಿಗಲಿ

10:48 PM Jul 16, 2021 | Shreeraj Acharya |

ಹಿರಿಯೂರು: ಪ್ರಧಾನಮಂತ್ರಿ ವಸತಿ ಯೋಜನೆಗೆ ಈ ಹಿಂದಿನ ಸಾಲಿನಲ್ಲಿ ಸುಮಾರು 648 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈ ಫಲಾನುಭವಿಗಳ ಸ್ಥಿತಿ ಅತಂತ್ರವಾಗಿದ್ದು, ಇದುವರೆಗೂ ಈ ಫಲಾನುಭವಿಗಳ ಪರಿಸ್ಥಿತಿ ಏನಾಗಿದೆ ಎಂಬ ಬಗ್ಗೆ ನಮ್ಮ ಕೌನ್ಸಿಲ್‌ ಸಭೆಗೆ ಯಾವುದೇ ಸರಿಯಾದ ಮಾಹಿತಿಯಿಲ್ಲ. ಆದರೂ ನಗರದಲ್ಲಿ ಸೂರಿಲ್ಲದ ನಿಜವಾದ ನೈಜ ಫಲಾನುಭವಿಗಳಿಗೆ ಸೂರು ಸಿಗುವಂತಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ನಗರಸಭೆ ಸದಸ್ಯ ಅಜಯ್‌ಕುಮಾರ್‌ ಹೇಳಿದರು.

Advertisement

ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಶಂಶುನ್ನೀಸಾ ಅವರ ಅಧ್ಯಕ್ಷೆಯಲ್ಲಿ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನಮಂತ್ರಿ ವಸತಿ ಯೋಜನೆಗಳ ಫಲಾನುಭವಿಗಳ ಸಂಪೂರ್ಣ ಆಯ್ಕೆಯ ಜವಾಬ್ದಾರಿ ಕ್ಷೇತ್ರದ ಶಾಸಕರು ಅಧ್ಯಕ್ಷರಾಗಿರುವ ಆಶ್ರಯ ಸಮಿತಿಯದಾಗಿದೆ. ಈ ಸಮಿತಿಗೆ ನಗರಸಭೆ ಅಧ್ಯಕ್ಷರು ಸದಸ್ಯರಾಗಿದ್ದಾರೆ. ಆದರೆ ನಗರಸಭೆ ಅಧ್ಯಕ್ಷರಿಗೆ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಅಲ್ಲದೆ ತಾಲೂಕಿನಲ್ಲಿ ಇನ್ನೂ ಆಶ್ರಯ ಸಮಿತಿಯನ್ನೇ ರಚಿಸಲಾಗಿಲ್ಲ ಎಂದು ಆಕ್ಷೇಪಿಸಿದರು.

ನಗರಸಭೆ ಸದಸ್ಯ ಹಾಗೂ ವಕೀಲ ಜಿ.ಎಸ್‌. ತಿಪ್ಪೇಸ್ವಾಮಿ ಮಾತನಾಡಿ, ಪ್ರಧಾನಮಂತ್ರಿ ವಸತಿ ಯೋಜನೆ ಈಗ ಇನ್ನೂ ಅತಂತ್ರ ಸ್ಥಿತಿಯಲ್ಲಿ ಇರುವಾಗಲೇ ಮಧ್ಯವರ್ತಿಗಳು ನಿಮಗೆ ಮನೆ ಕೊಡಿಸುವುದಾಗಿ ನಗರದ ಅಮಾಯಕ ಬಡವರಿಂದ ಸುಮಾರು 30 ರಿಂದ 40 ಸಾವಿರ ರೂಪಾಯಿ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದಿನ ಸಾಲಿನ 648 ಫಲಾನುಭವಿಗಳ ಪರಿಸ್ಥಿತಿ ಏನಾಗಿದೆ ಅಂತ ತಿಳಿದು ಬಂದಿಲ್ಲ. ಆದರೂ ಸರ್ಕಾರ ಮತ್ತೆ 1124 ವಸತಿ ಮಂಜೂರಾತಿ ನೀಡಿದೆ. ಮಹಿಳೆಯರು ಬಡವರು ಅರ್ಜಿ ಹಿಡಿದು ನಗರಸಭೆಗೆ ದಿನಗಟ್ಟಲೆ ಅಲೆಯುವಂತಾಗಿದೆ. ಈ ಲೂಟಿ ನಿಲ್ಲಬೇಕು. ಸೂರಿಲ್ಲದ ನೈಜ ಫಲಾನುಭವಿಗಳಿಗೆ ಈ ಮನೆಗಳು ದೊರಕುವಂತಾಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು.

ಸದಸ್ಯ ಈರಲಿಂಗೇಗೌಡ ಮಾತನಾಡಿ, ಈ ಯೋಜನೆಯ ಬಗ್ಗೆ ಫಲಾನುಭವಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಈ ಯೋಜನೆಯಲ್ಲಿ ನಿರ್ಮಿಸುವ ಜಿ+2 ಮನೆಗಳಿಗೆ ಜನರಲ್‌ ಕೆಟಗರಿಗೆ 3.80 ಲಕ್ಷ ರೂ.ಗಳನ್ನು ಕಟ್ಟಬೇಕಿದೆ. ಎಸ್‌ಸಿ-ಎಸ್‌ಟಿ ಫಲಾನುಭವಿಗಳು 2.80 ರೂ. ಕಟ್ಟಬೇಕಿದೆ. ಸೂರಿಲ್ಲದ ನಿರ್ಗತಿಕರು, ಬಡವರು ಈ ಹಣ ಎಲ್ಲಿಂದ ಭರಿಸಲು ಸಾಧ್ಯ, ಇದನ್ನು ಫಲಾನುಭವಿಗಳಿಗೆ ಸ್ಪಷ್ಟವಾಗಿ ತಿಳಿಸಬೇಕೆಂದರು.

ಸದಸ್ಯ ಗುಂಡೇಶ್‌ಕುಮಾರ್‌ ಮಾತನಾಡಿ, ವಸತಿ ಯೋಜನೆ ಪ್ರದೇಶಕ್ಕೆ ರಸ್ತೆ, ಕುಡಿಯುವ ನೀರು, ವಿದ್ಯುತ್‌ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡಲು ನಗರಸಭೆ ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ಸುಮಾರು 16 ಕೋಟಿ ರೂ. ಗಳನ್ನು ಪಾವತಿಸಬೇಕಿದೆ. ನಮ್ಮ ನಗರ ಸಭೆ ಅಷ್ಟೊಂದು ಸಂಪದ್ಭರಿತವಾಗಿದೆಯೇ, ನಮ್ಮ ನಗರಸಭೆಗೆ ಕಳೆದ 3 ವರ್ಷಗಳಿಂದ ಕ್ಷೇತ್ರದ ಶಾಸಕರು ಯಾವುದೇ ಅನುದಾನವನ್ನು ತಂದಿಲ್ಲ. ಆದ್ದರಿಂದ ಈ ಯೋಜನೆ ಯಾವುದೇ ಕಾರಣಕ್ಕೂ ಇಲ್ಲಿ ಸಾಕಾರಗೊಳ್ಳುವುದಿಲ್ಲ ಎಂದು ಹೇಳಿದರು.

Advertisement

ನಗರಸಭೆ ಮಾಜಿ ಅಧ್ಯಕ್ಷ ಇ. ಮಂಜುನಾಥ್‌ ಮಾತನಾಡಿ, ಈ ಯೋಜನೆ ವಿಚಾರವಾಗಿ 2019ರಲ್ಲಿ ಇದಕ್ಕೆ ಕೌನ್ಸಿಲ್‌ ಸಭೆ ಅನುಮೋದನೆ ನೀಡಿದೆ. ಆದರೆ ಕೆಲಸ ಇನ್ನೂ ಆಗಿಲ್ಲ. ಇದರಿಂದ ನಮ್ಮ ನಗರಕ್ಕೆ ಸರಹದ್ದು ನಿಗದಿ ಮಾಡದೆ ನಗರಸಭೆಗೆ ಖಾತೆ ಮಾಡುವಲ್ಲಿ ನಗರಸಭೆಗೆ ನಷ್ಟವಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ನಗರ ಯೋಜನೆ ತಾಂತ್ರಿಕ ಅ ಧಿಕಾರಿ ಮಧು, ತಾಂತ್ರಿಕ ಸಿಬ್ಬಂದಿಗಳ ಕೊರತೆ ಹಾಗೂ ಕೊರೊನಾ ಲಾಕ್‌ಡೌನ್‌ ಕಾರಣಗಳಿಂದ ಈ ಕೆಲಸ ವಿಳಂಬವಾಗಿದೆ. ಶೀಘ್ರದಲ್ಲಿ ಈ ಕೆಲಸ ಮುಗಿಸಿ ಟೆಂಡರ್‌ ಕರೆದು ಅನುಮೋದನೆ ಮಾಡಲಾಗುವುದು ಎಂದರು. ಸ್ಥಾಯಿಸಮಿತಿ ಅಧ್ಯಕ್ಷ ಚಿತ್ರಜಿತ್‌ ಯಾದವ್‌, ನಗರಸಭೆ ಪೌರಾಯುಕ್ತ ಡಿ. ಉಮೇಶ್‌ ಹಾಗೂ ನಗರಸಭೆ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next