ಸಾಗರ: ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ನಿಗದಿತ ಸಮಯಕ್ಕೆ ವೇತನ ಪಾವತಿ ಮಾಡದೆ ಹೋದಲ್ಲಿ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಸೋಮವಾರ ಗುತ್ತಿಗೆ ನೌಕರರು ತಮಗೆ ಎರಡು, ಮೂರು ತಿಂಗಳು ವೇತನ ಕೊಡದೆ ಸತಾಯಿಸುತ್ತಿರುವ ಬಗ್ಗೆ ನೀಡಿದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರ ನಿಗದಿಪಡಿಸಿದ ವೇತನ ನೌಕರರಿಗೆ ನಿಗದಿತ ದಿನದೊಳಗೆ ಅವರ ಖಾತೆಗೆ ಜಮೆ ಮಾಡಿ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ನೌಕರರನ್ನು ಪೂರೈಸುತ್ತಿರುವ ಅನೇಕ ಸಂಸ್ಥೆಗಳಿಗೆ ಕೆಲವು ತಾಂತ್ರಿಕ ಕಾರಣಗಳಿಂದ ಸಂಬಳ ಪಾವತಿಯಾಗಿರಲಿಲ್ಲ. ವಿಷಯ ನನ್ನ ಗಮನಕ್ಕೆ ಬಂದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ತಡೆ ಹಿಡಿಯಲಾಗಿದ್ದ ಅನುದಾನವನ್ನು ಬಿಡುಗಡೆ ಮಾಡಿಸಿದ್ದೇನೆ. ಇದರಿಂದಾಗಿ ಗುತ್ತಿಗೆ ನೌಕರರನ್ನು ಪೂರೈಸುತ್ತಿರುವ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಯ ಗುತ್ತಿಗೆದಾರರಿಗೆ ಅನುಕೂಲವಾಗಿದೆ ಎಂದರು.
ಸಾಗರ ಸರ್ಕಾರಿ ಆಸ್ಪತ್ರೆ ಮತ್ತು ತಾಯಿ-ಮಗು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ 36ಕ್ಕೂ ಹೆಚ್ಚು ನೌಕರರಿಗೆ ಮೂರು ತಿಂಗಳಿನಿಂದ ಸಂಬಳ ನೀಡಿಲ್ಲ. ಇದರಿಂದ ಅವರು ಕುಟುಂಬ ನಿರ್ವಹಣೆ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ತಕ್ಷಣ ಗುತ್ತಿಗೆ ನೌಕರರಿಗೆ ವೇತನದ ಜೊತೆಗೆ ಇತರ ಸೌಲಭ್ಯ ನೀಡಿ ಎಂದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ತುಕಾರಾಮ್, ಸದಸ್ಯರಾದ ಟಿ.ಡಿ. ಮೇಘರಾಜ್, ಮೈತ್ರಿ ಪಾಟೀಲ್, ಸಿವಿಲ್ ಸರ್ಜನ್ ಡಾ| ಪ್ರಕಾಶ್ ಬೋಸ್ಲೆ, ಸಹಾಯಕ ಆಡಳಿತಾಧಿಕಾರಿ ವೇಣುಗೋಪಾಲ್, ಆರೋಗ್ಯ ಇಲಾಖೆ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮ. ಸ. ನಂಜುಂಡಸ್ವಾಮಿ, ವೈ. ಮೋಹನ್, ರಾಮಣ್ಣ, ಬಿ.ಟಿ. ರವೀಂದ್ರ ಇನ್ನಿತರರು ಇದ್ದರು.