ಶಿವಮೊಗ್ಗ: ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಇನ್ನೂ ಒಂದು ವಾರ ಕಾಲ ಮುಂದುವರೆಯಲಿದೆ. ಆದರೆ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಬೆಳಿಗ್ಗೆ 6ರಿಂದ 9ರವರೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಭಾನುವಾರ ಜಿಲ್ಲಾ ಧಿಕಾರಿ ಕಚೇರಿಯಲ್ಲಿ ಲಾಕ್‌ಡೌನ್ ಮುಂದುವರಿಕೆ ಕುರಿತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿ ಧಿಗಳು, ವ್ಯಾಪಾರಿ ಸಂಘಗಳ ಪ್ರಮುಖರ ಜೊತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಧಾನವಾಗಿ ಕಡಿಮೆಯಾಗುತ್ತಿದೆ.
ಆದರೆ ಶಿವಮೊಗ್ಗ ನಗರದಲ್ಲಿ ಈಗಲೂ ಪಾಸಿಟಿವಿಟಿ ಪ್ರಮಾಣ ಶೇ.13ರ ಆಸುಪಾಸಲ್ಲಿ, ಭದ್ರಾವತಿಯಲ್ಲಿ ಸುಮಾರು ಶೇ.10ರಷ್ಟು ಇದೆ. ಲಾಕ್‌ಡೌನ್ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಅನುಮತಿ ನೀಡಲಾಗಿರುವ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಮಾತ್ರ ಅವಕಾಶವಿದೆ. ಪ್ರಸ್ತುತ ತರಕಾರಿ, ದಿನಸಿಯಂತಹ ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಿಗ್ಗೆ 6ರಿಂದ 8ರವರೆಗೆ ಅವಕಾಶವಿದ್ದು, ಅದನ್ನು ಒಂದು ಗಂಟೆ ವಿಸ್ತರಿಸಲಾಗಿದೆ ಎಂದರು.
ಸಗಟು ದಿನಸಿ ವ್ಯಾಪಾರಕ್ಕೆ ಬುಧವಾರ ಮತ್ತು ಶನಿವಾರ ಬೆಳಿಗ್ಗೆ 6ರಿಂದ 9ರವರೆಗೆ ಅವಕಾಶವಿದೆ. ಅಡಕೆ ಮಂಡಿಯಲ್ಲಿ ಸಗಟು ವ್ಯಾಪಾರಕ್ಕೆ ಹಾಗೂ ಟೆಂಡರ್‌ನಲ್ಲಿ ಭಾಗವಹಿಸುವವರಿಗೆ ಪಾಸು ನೀಡಲಾಗುವುದು.
ಎಪಿಎಂಸಿಯಲ್ಲಿ ಬೆಳಿಗ್ಗೆ 6ರಿಂದ 8ರವರೆಗೆ ವ್ಯವಹಾರಕ್ಕೆ ಅವಕಾಶವಿದೆ. ಕೈಗಾರಿಕಾ ಚಟುವಟಿಕೆಗಳಿಗೆ ಈಗಿರುವಂತೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಹೇಳಿದರು. ಶಾಸಕರಾದ ಆರಗ ಜ್ಞಾನೇಂದ್ರ, ಅಶೋಕ ನಾಯ್ಕ, ಆಯನೂರು ಮಂಜುನಾಥ, ಪ್ರಸನ್ನ ಕುಮಾರ್, ರುದ್ರೇಗೌಡ, ಆರ್ಯವೈಶ್ಯ ನಿಗಮದ ಅರುಣ್, ದತ್ತಾತ್ರೇಯ, ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್, ಎಸ್ಪಿ ಲಕೀÒ$¾ಪ್ರಸಾದ್, ಸಿಇಒ ವೈಶಾಲಿ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿ ಧಿಗಳು ಉಪಸ್ಥಿತರಿದ್ದರು.