ಶಿವಮೊಗ್ಗ: ಉನ್ನತ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆ ಕೈಗೊಳ್ಳುವ ಸಂಸ್ಥೆಗಳ ಜಾಗತಿಕ ರ್‍ಯಾಂಕಿಂಗ್ ಅನ್ನು ನಿರ್ಧರಿಸುವ ಪ್ರತಿಷ್ಠಿತ ಸೈಮ್ಯಾಗೋ ಪಟ್ಟಿಯು ಇತ್ತೀಚೆಗೆ ಬಿಡುಗಡೆಯಾಗಿದ್ದು, ಭಾರತದ ವಿಶ್ವವಿದ್ಯಾಲಯಗಳ ಪೈಕಿ ಕುವೆಂಪು ವಿಶ್ವವಿದ್ಯಾಲಯ 56ನೇ ಸ್ಥಾನ ಪಡೆದಿದೆ. ಕಳೆದ ವರ್ಷ 66ನೇ ಸ್ಥಾನದಲ್ಲಿದ್ದ ವಿಶ್ವವಿದ್ಯಾಲಯ, 2021ರ ಸಾಲಿನಲ್ಲಿ ಸಂಶೋಧನಾ ಮಾನದಂಡದಲ್ಲಿ 41ನೇ ಸ್ಥಾನ, ನಾವೀನ್ಯತೆಯಲ್ಲಿ 38ನೇ ಸ್ಥಾನ ಮತ್ತು ಸಾಮಾಜಿಕ ಪ್ರಭಾವ ಮಾನದಂಡದಲ್ಲಿ 26ನೇ ಸ್ಥಾನ ಪಡೆದಿದ್ದು, ಸಮಗ್ರವಾಗಿ 56ನೇ ಸ್ಥಾನ ಗಳಿಸಿದೆ.
ಜಗತ್ತಿನಾದ್ಯಂತ ವಿಜ್ಞಾನ ಸಂಶೋಧನಾ ಪ್ರಕಟಣೆಗಳ ಶ್ರೇಷ್ಠತೆಯನ್ನು ಅಳೆಯುವ ಸ್ಕೋಪಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಸಮೀಕ್ಷೆ ಕೈಗೊಳ್ಳುವ ಸೈಮ್ಯಾಗೋ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಸರ್ಕಾರಿ, ಖಾಸಗಿ, ಆರೋಗ್ಯ, ಉನ್ನತ ಶಿಕ್ಷಣ ಮತ್ತು ಸರ್ಕಾರೇತರ ಕ್ಷೇತ್ರಗಳ ವಿಭಾಗಗಳಲ್ಲಿ 7533 ಸಂಸ್ಥೆಗಳನ್ನು ಒಳಗೊಂಡ 2021ನೇ ಸಾಲಿನ ಸಮಗ್ರ ರ್‍ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಜಾಗತಿಕ ವಿಶ್ವವಿದ್ಯಾಲಯಗಳ ಸಮಗ್ರ ರ್‍ಯಾಂಕಿಂಗ್ ಪಟ್ಟಿಯಲ್ಲಿ ಕುವೆಂಪು ವಿವಿ 569ನೇ ಸ್ಥಾನ ಗಳಿಸಿದ್ದು, ಏಷ್ಯಾ ವಲಯದಲ್ಲಿ 1437 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 303 ನೇ ಸ್ಥಾನಗಳಿಸಿದೆ.
ಭಾರತದ ವಿಶ್ವವಿದ್ಯಾಲಯಗಳ ಪಟ್ಟಿಯೊಳಗೆ 56 ನೇ ಸ್ಥಾನ ಗಿಟ್ಟಿಸಿದೆ. ಭಾರತೀಯ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಕರ್ನಾಟಕ ಮೂಲದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೊದಲನೇ ಸ್ಥಾನದಲ್ಲಿದ್ದರೆ, ಮಣಿಪಾಲ ವಿಶ್ವವಿದ್ಯಾಲಯ 15ನೇ ಸ್ಥಾನದಲ್ಲಿದೆ. ಜೈನ್ ವಿಶ್ವವಿದ್ಯಾಲಯ 48ನೇ ಸ್ಥಾನದಲ್ಲಿದ್ದರೆ, ಯೆನೋಪಾಯ ವಿವಿ 49ನೇ ಸ್ಥಾನದಲ್ಲಿದೆ. ಕರ್ನಾಟಕದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಪೈಕಿ ಕುವೆಂಪು ವಿಶ್ವವಿದ್ಯಾಲಯ 56ನೇ ರ್‍ಯಾಂಕಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ (ರ್‍ಯಾಂಕಿಂಗ್ 60), ಮೈಸೂರು ವಿಶ್ವವಿದ್ಯಾಲಯ (80), ಕರ್ನಾಟಕ ವಿಶ್ವವಿದ್ಯಾಲಯ (110), ಮತ್ತು ಮಂಗಳೂರು ವಿಶ್ವವಿದ್ಯಾಲಯ (112)ಗಳು ಸ್ಥಾನ ಪಡೆದುಕೊಂಡಿವೆ.
ಸಾಂಪ್ರದಾಯಿಕ ಶೈಕ್ಷಣಿಕ ಕೋಸ್ ಗಳನ್ನು ನಡೆಸುವ ಜೊತೆ ಜೊತೆಯಲ್ಲಿಯೇ ಸಂಶೋಧನೆಯಲ್ಲೂ ಗಮನಾರ್ಹ ಸಾಧನೆ ತೋರುತ್ತಿರುವ ಕುವೆಂಪು ವಿವಿ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳೊಂದಿಗೆ ಸ್ಪ ರ್ಧಿಸಿ ಈ ರ್‍ಯಾಂಕಿಂಗ್ ಪಡೆದಿರುವುದು ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿ ಎಂದು ಕುಲಪತಿ ಪ್ರೊ| ಬಿ. ಪಿ. ವೀರಭದ್ರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. 2010ರಲ್ಲಿ 792ನೇ ರ್‍ಯಾಂಕ್‌ನಲ್ಲಿದ್ದ ವಿವಿಯು, 2020ರಲ್ಲಿ 774ನೇ ರ್‍ಯಾಂಕ್‌ಗೆ ಪಡೆದಿತ್ತು. ಪ್ರಸ್ತುತ ಜಾಗತಿಕ ವಿಶ್ವವಿದ್ಯಾಲಯಗಳ ಪೈಕಿ 569ನೇ ಸ್ಥಾನ ಪಡೆದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಕುಲಸಚಿವ ಪೊ. ಎಸ್. ಎಸ್. ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.