Advertisement

ಆಶ್ರಯ ಮನೆ ಕಾಮಗಾರಿ ಶೀಘ್ರ ಮುಗಿಸಿ-ವಿತರಿಸಿ

11:01 PM Jun 10, 2021 | Shreeraj Acharya |

ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ಗೋವಿಂದಾಪುರದಲ್ಲಿ ಆಶ್ರಯ ಮನೆಗಳ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದ್ದು, ಕೂಡಲೆ ಈ ಕಾಮಗಾರಿ ಮುಗಿಸಿ ಮನೆಗಳನ್ನು ಶೀಘ್ರ ವಿತರಿಸಲು ಆದೇಶಿಸಬೇಕೆಂದು ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಪಾಲಿಕೆ ಕಾಂಗ್ರೆಸ್‌ ಸದಸ್ಯರನ್ನೊಳಗೊಂಡ ನಿಯೋಗ ಮನವಿ ಸಲ್ಲಿಸಿ ಒತ್ತಾಯಿಸಿದೆ.

Advertisement

ಗೋವಿಂದಾಪುರದಲ್ಲಿ ಆಶ್ರಯ ಜಿ+2 ಮಾದರಿಯ ಮನೆಗಳನ್ನು ನಿರ್ಮಿಸುತ್ತಿದ್ದು, ಅದರ ಕಾಮಗಾರಿ ವಿಳಂಬವಾಗುತ್ತಿದೆ. ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ನಿಗಮದಿಂದ ಶಿವಮೊಗ್ಗ ನಗರದಲ್ಲಿ ಸ್ಲಂಗಳನ್ನು ಗುರುತಿಸಿ ಎಸ್‌ಸಿ, ಎಸ್‌ಟಿ ವರ್ಗದವರಿಗೆ 49,671ರೂ., ಸಾಮಾನ್ಯ ವರ್ಗದವರಿಗೆ 73,671 ರೂ. ಡಿಡಿ ಮೂಲಕ ಕಟ್ಟಿಸಿಕೊಂಡು ವರ್ಷಗಳೇ ಕಳೆದರೂ ಮನೆ ನಿರ್ಮಿಸಿಕೊಡಲು ವಿಳಂಬ ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. 2019 ರಲ್ಲಿ ಶಿವಮೊಗ್ಗದಲ್ಲಿ 964 ಮನೆ ಕಟ್ಟಿಕೊಡಲು ಕೊಳಚೆ ನಿರ್ಮೂಲನಾ ಮಂಡಳಿಗೆ ಹಣ ನೀಡಲಾಗಿತ್ತು.

ಟೆಂಡರ್‌ದಾರರಿಗೆ ಮನೆ ಕಟ್ಟಿಕೊಡಲು ಏಪ್ರಿಲ್‌ ತಿಂಗಳ ಅವ ಧಿ ಮುಗಿದಿದ್ದು, ಕೇವಲ 342 ಮನೆಗಳನ್ನು ಮಾತ್ರ ಕಟ್ಟಲಾಗಿದೆ. ಉಳಿದ 622 ಮನೆಗಳು ಯಾವುದೇ ರೀತಿಯ ಪ್ರಗತಿ ಕಂಡಿಲ್ಲ. ಫಲಾನುಭವಿಗಳು ಸ್ಲಂಬೋರ್ಡ್‌ ಅ ಧಿಕಾರಿಗಳನ್ನು ಭೇಟಿ ಮಾಡಿದ್ದರೂ ಪ್ರತಿನಿತ್ಯ ಒಂದಲ್ಲ ಒಂದು ಕಾರಣ ನೀಡುತ್ತಿದ್ದಾರೆ ಎಂದು ದೂರಲಾಗಿದೆ.

ಕಾರ್ಮಿಕರ ಕಾರ್ಡ್‌ ಇದ್ದವರಿಗೆ 1.62 ಲಕ್ಷ ರೂ. ಸಾಲ ಕೊಡುತ್ತೇವೆಂದು ಹೇಳಿದ್ದರು. ಆದರೆ ಕಾರ್ಡ್‌ ಇದ್ದರೂ ಈಗ ಬ್ಯಾಂಕ್‌ನಿಂದ ಸಾಲ ಪಡೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಬ್ಯಾಂಕ್‌ನಿಂದ ಸಾಲ ಸಿಗದೆ ಇದ್ದಲ್ಲಿ ಮನೆಗಳು ಅಪೂರ್ಣವಾದಂತೆ. ಬ್ಯಾಂಕ್‌ ಸಾಲ ಆಗದೆ ಇರುವವರಿಗೆ ಅಸ್ತಿಪಂಜರದಂತಹ ಮನೆ ಕಟ್ಟಿಕೊಡಲಾಗುತ್ತಿದೆ.

ಕೂಡಲೆ ನನೆಗುದಿಗೆ ಬಿದ್ದಿರುವ ಮನೆಗಳನ್ನು ಕಟ್ಟುವ ಕೆಲಸ ಪೂರ್ಣಗೊಳಿಸಬೇಕು ಹಾಗೂ ಆಶ್ರಯ ಮನೆ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಆರ್‌.ಪ್ರಸನ್ನ ಕುಮಾರ್‌, ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಬಿ.ಎ.ರಮೇಶ್‌ ಹೆಗ್ಡೆ, ಎಚ್‌.ಸಿ. ಯೋಗೀಶ್‌, ಆರ್‌.ಸಿ. ನಾಯಕ್‌ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next