ಶಿವಮೊಗ್ಗ: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಹಸಿದವರಿಗೆ ಅನ್ನ ನೀಡುವುದು ದೇವರು ಮೆಚ್ಚುವ ಕೆಲಸ ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಎಸ್.ವಿ.ಚಂದ್ರಕಲಾ ಹೇಳಿದರು. ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಹಸಿದವರಿಗೆ ಅನ್ನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊರೊನಾ ಎರಡನೇ ಅಲೆ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಾಕ್‌ಡೌನ್ ಕೂಡ ಅನಿವಾರ್ಯವಾಗಿದೆ. ಇದರಿಂದ ತೀರಾ ಬಡವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರೆ ವಿಶೇಷವಾಗಿ ತಮ್ಮ ಮನೆ ಕೆಲಸಗಳನ್ನು ಬದಿಗೊತ್ತಿ ಸಮಾಜ ಸೇವೆಯಲ್ಲಿ ತೊಡಗಿರುವುದು ಅತ್ಯಂತ ಶ್ಲಾಘನೀಯ ಹಾಗೂ ಇದು ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯವೂ ಆಗಿದೆ ಎಂದರು.
ಜಯ ಕರ್ನಾಟಕ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಜೀಮಾ ಮಾತನಾಡಿ, ಮಹಿಳಾ ಘಟಕದ ವತಿಯಿಂದ ಕಳೆದ 30 ದಿನಗಳಿಂದ ನಿರಂತರವಾಗಿ ಹಸಿದವರಿಗೆ ಅನ್ನ ನೀಡುವ ಕಾರ್ಯಕ್ರಮಕ್ಕೆ ನಗರದ ಹಲವಾರು ದಾನಿಗಳು ಕೈ ಜೋಡಿಸಿದ್ದಾರೆ. ಇದೇ ರೀತಿ ಉಳ್ಳವರು ಇಂತಹ ಸತ್ಕಾರ್ಯದಲ್ಲಿ ತೊಡಗುವ ಮೂಲಕ ತಮ್ಮ ಕೈಲಾದ ಸೇವೆ ಸಲ್ಲಿಸಲು ಮುಂದಾಗಬೇಕು ಎಂದರು.
ಲೇಖಕಿ ವಿಜಯಶ್ರೀ, ಬನಶಂಕರಿ, ತಬಸಮ್, ಮೀನಾಕ್ಷಿ, ರೇಖಾ, ಮುನಿಸ್ವಾಮಿ, ಡಾ|ಬಿ.ಎನ್.ಜಗದೀಶ್, ಡಾ|ಸತ್ಯಪ್ರೇಮ, ಎಲ್.ಸತ್ಯ ನಾರಾಯಣ ರಾವ್, ಪ್ರೀತಮ್ ಎಸ್., ಪ್ರೀತಿ ಮಯೂರಿ, ಪೂರ್ಣಿಮಾ ಹಾಗೂ ಇನ್ನಿತರರು ಈ ಕಾರ್ಯಕ್ಕೆ ಜೋಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಪ್ರೇಮಾ, ಪವಿತ್ರ ಎಂ. ಜೈನ್ ಹಾಗೂ ಇನ್ನಿತರರು ಹಾಜರಿದ್ದರು.